Legislative Council member Keshav Prasad: ಮೋದಿ ಸರ್ಕಾರದ 12 ವರ್ಷದ ಸಾಧನೆ ದೇಶದ ಅಭಿವೃದ್ಧಿಗೆ ದಿಕ್ಸೂಚಿ: ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ ಬಣ್ಣನೆ
2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ "ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್" ಎಂಬ ಧ್ಯೇಯದೊಂದಿಗೆ ಆಡಳಿತ ನಡೆಸಿ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದೆ. ಅಷ್ಟೇ ಅಲ್ಲದೆ, ದೇಶದ ಮೊದಲ ಪ್ರಧಾನಿ ನೆಹರೂ ಅವರ ಹೆಸರಿನಲ್ಲಿದ್ದ ದೀರ್ಘಕಾಲದ ಪ್ರಧಾನಿ ದಾಖಲೆಯನ್ನು ಮುರಿದು ದೇಶವನ್ನು ಅಭಿವೃದ್ದಿ ಪಥದಲ್ಲಿ ಮುನ್ನಡೆಸಿರುವ ಸಂಭ್ರಮವನ್ನು ನಾವು ದೇಶವಾಸಿಗಳಿಗೆ ತಿಳಿಸಲು ಹೆಮ್ಮೆಯಿದೆ
-
ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 12 ವರ್ಷಗಳಲ್ಲಿ ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಐತಿಹಾಸಿಕ ಪರಿವರ್ತನೆ ತಂದಿದ್ದು, ಭಾರತವನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿಗೆ ಕೊಂಡೊಯ್ದಿದೆ ಎಂದು ಬಿಜೆಪಿ ವಿಧಾನಸಭಾ ಸದಸ್ಯ ಕೇಶವ ಪ್ರಸಾದ್(Legislative Council member Keshav Prasad) ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಮೋದಿ ಸರ್ಕಾರದ 12 ವರ್ಷದ ಸಾಧನೆಯ ಸಂಬಂಧ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ "ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್"(Sab ka Saath, Sab ka Vikas, Sab ka Vishwas) ಎಂಬ ಧ್ಯೇಯದೊಂದಿಗೆ ಆಡಳಿತ ನಡೆಸಿ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದೆ. ಅಷ್ಟೇ ಅಲ್ಲದೆ, ದೇಶದ ಮೊದಲ ಪ್ರಧಾನಿ ನೆಹರೂ ಅವರ ಹೆಸರಿನಲ್ಲಿದ್ದ ದೀರ್ಘಕಾಲದ ಪ್ರಧಾನಿ ದಾಖಲೆಯನ್ನು ಮುರಿದು ದೇಶವನ್ನು ಅಭಿವೃದ್ದಿ ಪಥದಲ್ಲಿ ಮುನ್ನಡೆಸಿರುವ ಸಂಭ್ರಮವನ್ನು ನಾವು ದೇಶವಾಸಿಗಳಿಗೆ ತಿಳಿಸಲು ಹೆಮ್ಮೆ ಯಿದೆ ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಜೂ.15ರಂದು ಬೃಹತ್ ಕಾಲ್ನಡಿಗೆ ಜಾಥಾ: ಕೆ.ಸಿ.ರಾಜಕಾಂತ್ ಹೇಳಿಕೆ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜನಧನ್ ಯೋಜನೆ( Pradhan Mantri Jan Dhan Scheme) ಮೂಲಕ ಕೋಟ್ಯಂತರ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ದೊರೆತಿದೆ. ಆಯುಷ್ಮಾನ್ ಭಾರತ್ ಯೋಜನೆ (Ayushman Bharat Scheme) ಬಡ ಕುಟುಂಬಗಳಿಗೆ ಆರೋಗ್ಯ ರಕ್ಷಣೆಯ ಭರವಸೆ ನೀಡಿದ್ದು, ಉಜ್ವಲಾ ಯೋಜನೆ(Ujwala Scheme)ಮೂಲಕ ಮಹಿಳೆಯರಿಗೆ ಹೊಗೆಮುಕ್ತ ಅಡುಗೆ ಮನೆ ಕಲ್ಪಿಸಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ(PM Kisaan Samman Fund) ಮೂಲಕ ರೈತರಿಗೆ ನೇರ ಆರ್ಥಿಕ ನೆರವು ನೀಡಲಾಗುತ್ತಿದ್ದು, ಜಲ ಜೀವನ್ ಮಿಷನ್ ಯೋಜನೆ(Jal Jeevan Mission Scheme)ಯಡಿ ಗ್ರಾಮೀಣ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.
ಭಾರತ ಇಂದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಜಾಗತಿಕ ಮಾದರಿಯಾಗಿದೆ. ಯುಪಿಐ (UPI) ಮೂಲಕ ಹಣಕಾಸು ವ್ಯವಹಾರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಸಂಭವಿಸಿದೆ. ಮೇಕ್ ಇನ್ ಇಂಡಿಯಾ(Make in India), ಸ್ಟಾರ್ಟ್ಅಪ್ ಇಂಡಿಯಾ(Start Up India), ಆತ್ಮನಿರ್ಭರ ಭಾರತ ಯೋಜನೆ (Atmanirbhar Bharat Scheme)ಗಳ ಮೂಲಕ ಯುವಜನರಿಗೆ ಉದ್ಯೋಗ ಮತ್ತು ಉದ್ಯಮ ಶೀಲತೆಗೆ ಹೊಸ ಅವಕಾಶಗಳು ಸೃಷ್ಟಿಯಾಗಿವೆ ಎಂದು ಹೇಳಿದರು.
ದೇಶದ ಭದ್ರತೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದ್ದು, ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸಶಸ್ತ್ರ ಪಡೆಗಳ ಆಧುನೀಕರಣ ಹಾಗೂ ರಾಷ್ಟ್ರೀಯ ಭದ್ರತೆ ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯ ರದ್ದು, ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿ ಕಲ್ಪಿಸುವ ನಾರಿ ಶಕ್ತಿ ವಂದನ್ ಅಧಿನಿಯಮ, ಹೊಸ ಸಂಸತ್ ಭವನ ನಿರ್ಮಾಣ ಸೇರಿದಂತೆ ಹಲವು ಐತಿಹಾಸಿಕ ನಿರ್ಧಾರಗಳನ್ನು ಮೋದಿ ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.
ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ದೇಶೀಯ ಲಸಿಕೆ ಅಭಿವೃದ್ಧಿಪಡಿಸಿ ಕೋಟ್ಯಂತರ ಜನರಿಗೆ ಉಚಿತ ಲಸಿಕೆ ನೀಡುವ ಮೂಲಕ ಭಾರತ ವಿಶ್ವದ ಗಮನ ಸೆಳೆದಿದೆ. ವಿದೇಶಾಂಗ ನೀತಿಯಲ್ಲಿ ಭಾರತ ತನ್ನ ಪ್ರಭಾವ ಹೆಚ್ಚಿಸಿಕೊಂಡಿದ್ದು, ಜಿ-20 ಅಧ್ಯಕ್ಷತೆ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ದೇಶದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ ಎಂದು ಹೇಳಿದರು.
ಭ್ರಷ್ಟಾಚಾರ ನಿಯಂತ್ರಣ, ಪಾರದರ್ಶಕ ಆಡಳಿತ, ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ), ಡಿಜಿಟಲ್ ಆಡಳಿತ ವ್ಯವಸ್ಥೆ ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ಕೇಂದ್ರ ಸರ್ಕಾರ ಜನರ ವಿಶ್ವಾಸ ಗಳಿಸಿದೆ. ದೇಶದ ಅಭಿವೃದ್ಧಿ ಪಯಣವನ್ನು ಮತ್ತಷ್ಟು ವೇಗಗೊಳಿಸಲು ಬಿಜೆಪಿ ಕಾರ್ಯಕರ್ತರು ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಅಧ್ಯಕ್ಷರಾದ ಸೀಕಲ್ ರಾಮಚಂದ್ರಗೌಡ, ಶಿಡ್ಲಘಟ್ಟ ಮಾಜಿ ಶಾಸಕ(Shidlaghatta former MLA)ರಾದ ರಾಜಣ್ಣ, ಚಿಂತಾಮಣಿ ಮುಖಂಡರಾದ ವೇಣುಗೋಪಾಲ್, ಜಿಲ್ಲಾ ಪ್ರಧಾನ ಕಾರ್ಯ ದರ್ಶಿಗಳಾದ ಎಚ್.ಎಸ್ ಮುರಳಿಧರ್, ಕೆ.ಬಿ.ಮುರಳಿ ಮತ್ತು ಮಧು ಸೂರ್ಯನಾರಾಯಣ ರೆಡ್ಡಿ, ರಾಷ್ಟ್ರೀಯ ಪರಿಷತ್ ಸದಸ್ಯರಾದ ಲಕ್ಷ್ಮೀನಾರಾಯಣ ಗುಪ್ತ, ಜಿಲ್ಲಾ ಕಾರ್ಯದರ್ಶಿ ಅಶೋಕ್, ಎಸ್ಸಿ ಮೋರ್ಚಾ ಅಧ್ಯಕ್ಷರಾದ ವೆಂಕಟೇಶ್, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷರಾದ ಆಂಜನೇಯ ಗೌಡ, ಗೌರಿ ಬಿದನೂರು ಗ್ರಾ.ಮಾಜಿ ಅಧ್ಯಕ್ಷರಾದ ರಮೇಶ್ ರಾವ್ ಶಿಲ್ಕೆ, ಜಿಲ್ಲಾ ಮಾಧ್ಯಮ ಸಂಚಾಲಕರಾದ ವಿ ಮಧುಚಂದ್ರ ಹಾಗೂ ಜಿಲ್ಲೆಯ ಎಲ್ಲಾ ಮಂಡಲದ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
![]()
ನಿರುದ್ಯೋಗ ಎಡಪಂಥಿಯರ ಸೃಷ್ಟಿ ನರೇಂದ್ರ ಮೋದಿ ಅವರು ಆಡಳಿತ ನಡೆಸಿರುವ ಈ 12 ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆಯನ್ನು ಇಲ್ಲವಾಗಿಸಿದ್ದಾರೆ. ಇದೆ ಎನ್ನುವುದಾದರೆ ಅದು ಎಡಪಂಥೀಯರ ಆರೋಪವಷ್ಟೇ. ಮೋದಿ ಅಧಿಕಾರಕ್ಕೆ ಬಂದ ಬಳಿಕ ಪಿಎಫ್‌ನಲ್ಲಿ 28 ಕೋಟಿ ಕಾರ್ಮೀಕರು ನೋಂದಣಿ ಮಾಡಿದ್ದಾರೆ. ಪಿಎಫ್‌ನಲ್ಲಿ ಹಣ ತೋರಿಸುತ್ತಿದೆ ಎಂದರೆ ನಿರುದ್ಯೋಗ ಸಮಸ್ಯೆ ಎಲ್ಲಿದೆ. ಮೋದಿ ಅವರು ಸರಕಾರಿ ನೌಕರಿಯನ್ನೇ ಕೊಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಉದ್ಯೋಗವನ್ನು ಸೃಷ್ಟಿ ಮಾಡುತ್ತೇನೆ ಎಂದು ಹೇಳಿದ್ದರು.ಇದರ ಭಾಗವಾಗಿ ಸ್ಟಾರ್ಟಪ್, ಯೂನಿಕಾರ್ನ್, ಹತ್ತು ಹಲವು ಮಾರ್ಗಗಳ ಮೂಲಕ ಯುವಕರಿಗೆ ಉದ್ಯೋಗ ಕೊಡುವ ಕೆಲಸ ಅಗುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯೆ ಇಲ್ಲ.ಇದ್ದಿದ್ದರೆ ಜನ ಹಾಹಾಕಾರ ಮಾಡುತ್ತಿದ್ದರು. ಈ ದೇಶದ ನಿರುದ್ಯೋಗಿಗಳು ಒಂದಲ್ಲಾ ಒಂದು ಕೆಲಸ ಮಾಡುತ್ತಾ, ತಾವು ಇತರರಿಗೆ ಉದ್ಯೋಗ ಕೊಡುವ ಹಂತಕ್ಕೆ ಬೆಳೆದಿದ್ದಾರೆ. ಇದನ್ನು ಹೊರತು ಪಡಿಸಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ ಎನ್ನುವುದು ಎಡಪಂಥೀಯರ ಸೃಷ್ಟಿಯಾಗಿದೆ.
-ಕೇಶವ ಪ್ರಸಾದ್, ವಿಧಾನಪರಿಷತ್ ಸದಸ್ಯರು