ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MLA Pradeep Eshwar: ಒಕ್ಕಲಿಗರ ಬೆಂಬಲ ಮರೆತು ಪ್ರದೀಪ್ ಈಶ್ವರ್ ಮಾತನಾಡುತ್ತಿದ್ದಾರೆ: ರಘುನಾಥ ರೆಡ್ಡಿ ಆಕ್ರೋಶ

ಶಾಸಕ ಪ್ರದೀಪ್ ಈಶ್ವರ್ ಅವರು ಒಕ್ಕಲಿಗ ಸಮುದಾಯದ ನಾಯಕರನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಮುನೇಗೌಡ ಅವರನ್ನು ತಮ್ಮೊಂದಿಗೆ ಇರಿಸಿಕೊಂಡು ಒಕ್ಕಲಿಗರ ವಿರುದ್ಧ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಸಮುದಾಯದ ಬೆಂಬಲ ಪಡೆದು ರಾಜಕೀಯವಾಗಿ ಬೆಳೆದವರು ಅದೇ ಸಮುದಾಯದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಒಕ್ಕಲಿಗರ ಬೆಂಬಲ ಮರೆತು ಪ್ರದೀಪ್ ಈಶ್ವರ್ ಮಾತನಾಡುತ್ತಿದ್ದಾರೆ

-

Profile
Ashok Nayak Oct 9, 2026 10:13 PM

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಒಕ್ಕಲಿಗರ ಸಂಖ್ಯೆ ಕೇವಲ 15 ಸಾವಿರ ಎಂದು ಹೇಳುವ ಮೂಲಕ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಅವರು ಸಮುದಾಯವನ್ನು ಹೀನಾಯವಾಗಿ ಮಾತನಾಡಿದ್ದಾರೆ. ಶಾಸಕರ ರಾಜಕೀಯ ಬೆಳವಣಿಗೆಗೆ ಒಕ್ಕಲಿಗರು ನೀಡಿದ ಬೆಂಬಲವನ್ನು ಅವರು ಮರೆಯಬಾರದು ಎಂದು ರಾಜ್ಯ ಒಕ್ಕಲಿಗರ ಒಕ್ಕೂಟದ ಉಪಾಧ್ಯಕ್ಷ ರಘುನಾಥ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ರಾಜ್ಯ ಒಕ್ಕಲಿಗರ ಒಕ್ಕೂಟದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರದಲ್ಲಿ ಸುಮಾರು 65 ಸಾವಿರ ಒಕ್ಕಲಿಗ ಮತದಾರರಿದ್ದು, ಒಕ್ಕಲಿಗರ ಸಂಘದ ಸದಸ್ಯರ ಸಂಖ್ಯೆಯೂ 15 ಸಾವಿರದಷ್ಟಿದೆ ಎಂದು ಹೇಳಿದರು.

ಒಕ್ಕಲಿಗರ ಬೆಂಬಲ ಮರೆಯಬಾರದು: ಶಾಸಕ ಪ್ರದೀಪ್ ಈಶ್ವರ್ ಅವರ ರಾಜಕೀಯ ಜೀವನ ದಲ್ಲಿ ಒಕ್ಕಲಿಗರು ಪ್ರಮುಖ ಪಾತ್ರ ವಹಿಸಿದ್ದಾರೆ. ಮಾಜಿ ಶಾಸಕ ಬಚ್ಚೇಗೌಡ ಸೇರಿದಂತೆ ಸಮುದಾಯದ ಅನೇಕರು ಮನೆಮನೆಗೆ ತೆರಳಿ ಪ್ರಚಾರ ನಡೆಸಿ ಅವರ ಗೆಲುವಿಗೆ ಶ್ರಮಿಸಿದ್ದಾರೆ. ದ್ವಿತೀಯ ಪಿಯುಸಿ ಶಿಕ್ಷಣದ ಬಳಿಕ ಅಕಾಡೆಮಿ ನಡೆಸುತ್ತಿದ್ದ ಪ್ರದೀಪ್ ಈಶ್ವರ್ ಅವರಿಗೆ ಬಿ-ಫಾರಂ ಕೊಡಿಸಿ ಚುನಾವಣೆಯಲ್ಲಿ ಗೆಲ್ಲಿಸಲು ಸಹಕರಿಸಿದ ಶ್ರೇಯಸ್ಸು ಒಕ್ಕಲಿಗರಿಗೆ ಸಲ್ಲುತ್ತದೆ ಎಂದು ರಘುನಾಥ ರೆಡ್ಡಿ ಹೇಳಿದರು.

ಶಾಸಕ ಪ್ರದೀಪ್ ಈಶ್ವರ್ ಅವರು ಒಕ್ಕಲಿಗ ಸಮುದಾಯದ ನಾಯಕರನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಮುನೇಗೌಡ ಅವರನ್ನು ತಮ್ಮೊಂದಿಗೆ ಇರಿಸಿಕೊಂಡು ಒಕ್ಕಲಿಗರ ವಿರುದ್ಧ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಸಮುದಾಯದ ಬೆಂಬಲ ಪಡೆದು ರಾಜಕೀಯವಾಗಿ ಬೆಳೆದವರು ಅದೇ ಸಮುದಾಯದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಹೇಳಿಕೆಗಳ ವಿರುದ್ಧ ಹೈಕಮಾಂಡ್‌ಗೆ ದೂರು
ಶಾಸಕರಾಗಿ ಒಂದು ರೂಪಾಯಿ ಲಂಚವನ್ನೂ ಮುಟ್ಟಿಲ್ಲ ಎಂದು ಹೇಳುವ ಅವರು, ಮತ್ತೊಂದೆಡೆ ಕೋಟ್ಯಂತರ ರೂಪಾಯಿ ಹಣ ನೀಡಿರುವುದಾಗಿ ಹೇಳಿಕೊಳ್ಳುತ್ತಾರೆ. ಮಿಲ್ಟನ್ ವೆಂಕಟೇಶ್ ಅವರ ಬಗ್ಗೆ ಹತ್ತು ಸಾವಿರ ರೂಪಾಯಿಗೂ ಬೆಲೆ ಇಲ್ಲ ಎಂಬರ್ಥದಲ್ಲಿ ಮಾತನಾಡಿರುವುದು ಸರಿಯಲ್ಲ. ಸಾರ್ವಜನಿಕ ಜೀವನದಲ್ಲಿರುವವರು ತಮ್ಮ ಮಾತುಗಳ ಮೇಲೆ ಹಿಡಿತ ಹೊಂದಿರಬೇಕು. ಈ ಕುರಿತು ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡುವುದಾಗಿ ತಿಳಿಸಿದರು.

ಕೆಂಪೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪವನ್ನೂ ರಘುನಾಥ ರೆಡ್ಡಿ ಮಾಡಿದರು. ಕ್ರಷರ್‌ಗಳು, ನಗರಸಭೆ ಮತ್ತು ತಾಲೂಕು ಕಚೇರಿಗೆ ಸಂಬಂಧಿಸಿದ ಅಕ್ರಮ ಹಾಗೂ ಅವ್ಯವಹಾರಗಳ ಕುರಿತು ತಮ್ಮ ಬಳಿ ಮಾಹಿತಿ ಇದೆ. ಅವುಗಳನ್ನು ದಾಖಲೆಗಳ ಸಮೇತ ಬಹಿರಂಗ ಪಡಿಸುವುದಾಗಿ ಎಚ್ಚರಿಸಿದರು. ಆರೋಪಗಳ ಕುರಿತು ಸಂಬಂಧಪಟ್ಟವರು ಸ್ಪಷ್ಟನೆ ನೀಡಬೇಕು ಎಂದರು.

ಜಾತಿಗಳ ನಡುವೆ ಸಂಘರ್ಷಕ್ಕೆ ಅವಕಾಶವಿಲ್ಲ
ರಾಜಕೀಯ ಕಾರಣಗಳಿಗಾಗಿ ಜಾತಿ ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುವ ಪ್ರಯತ್ನ ಮಾಡಬಾರದು. ಇದೇ ರೀತಿಯ ಹೇಳಿಕೆಗಳನ್ನು ಮುಂದುವರಿಸಿ ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದರೆ ಚಿಕ್ಕಬಳ್ಳಾಪುರಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ರಘುನಾಥ ರೆಡ್ಡಿ ಎಚ್ಚರಿಕೆ ನೀಡಿದರು.

ಶಾಸಕರು ಯಾವುದೇ ಅಕ್ರಮ ಅಥವಾ ಅವ್ಯವಹಾರ ಮಾಡಿಲ್ಲವೆಂದಾದರೆ ದೇವರ ಮುಂದೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ ಅವರು, ಸಾರ್ವಜನಿಕ ಜೀವನದಲ್ಲಿ ಮಾನ-ಮರ್ಯಾದೆ ಕಾಪಾಡಿಕೊಂಡು ಮಾತನಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಬಿ.ಕೆ. ಶ್ರೀನಿವಾಸರೆಡ್ಡಿ, ಮಂಜುನಾಥ್ ಗೌಡ, ಚಂದ್ರಶೇಖರ ಸೇರಿದಂತೆ ಇತರರು ಉಪಸ್ಥಿತರಿದ್ದರು.