Sadguru Sri Madhusudan Sai: ಮಕ್ಕಳ ಮೇಲೆ ಒತ್ತಡ ಹೇರುವ 'ಪ್ರೆಶರ್ ಕುಕ್ಕರ್' ವ್ಯವಸ್ಥೆ ಸರಿಯಲ್ಲ: ಸದ್ಗುರು ಶ್ರೀ ಮಧುಸೂದನ ಸಾಯಿ
Sathya Sai Grama: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಉತ್ಸವ'ದ 57ನೇ ದಿನವಾದ ಶನಿವಾರ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಆಶೀರ್ವಚನ ನೀಡಿದರು.

-

ಚಿಕ್ಕಬಳ್ಳಾಪುರ: ಶಾಲಾ ಸಮಯದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಇದಕ್ಕಾಗಿ ಶಿಕ್ಷಕರು ಸಾಕಷ್ಟು ಶ್ರಮಿಸಬೇಕು. ಹಾಗೆಂದು ಕೋಚಿಂಗ್ ತರಗತಿಗಳ ಮೂಲಕ ಹೆಚ್ಚಿನ ಒತ್ತಡ ತರಬಾರದು. ಮಕ್ಕಳ ಮೇಲಿನ ಪ್ರೆಶರ್ ಕುಕ್ಕರ್ ವ್ಯವಸ್ಥೆ ಸರಿಯಲ್ಲ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಅಭಿಪ್ರಾಯಪಟ್ಟರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಉತ್ಸವ'ದ 57ನೇ ದಿನವಾದ ಶನಿವಾರ ಆಶೀರ್ವಚನ ನೀಡಿದ ಸದ್ಗುರು ಅವರು, ಚೀನಾದಲ್ಲಿ ಮಕ್ಕಳು ಶಾಲೆಯಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕಲಿಯಬೇಕು. ಅಲ್ಲಿ ಕೋಚಿಂಗ್ ತರಗತಿಗಳಿಗೆ ಅವಕಾಶವಿಲ್ಲ. ಕೋಚಿಂಗ್ ತರಗತಿಗಳ ವ್ಯವಹಾರವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ ಎಂದು ವಿವರಿಸಿದರು.
ರಾಜಸ್ಥಾನದ ಕೋಟಾದಿಂದ ಎಂಬಿಬಿಎಸ್ ವಿದ್ಯಾರ್ಥಿಗಳು ಇಲ್ಲಿ ಸೇರಿದ್ದಾರೆ. ಮಕ್ಕಳು ಏನನ್ನಾದರೂ ಪೂರ್ಣಗೊಳಿಸಲು ಒತ್ತಡಕ್ಕೆ ಒಳಗಾಗುತ್ತಾರೆ. ಇದೇ ಕಾರಣಕ್ಕೆ ದೇಶದಲ್ಲಿ ಅನೇಕ ಮಕ್ಕಳನ್ನು ಕಳೆದುಕೊಂಡಿದ್ದೇವೆ. ಪೋಷಕರು ಮತ್ತು ಶಿಕ್ಷಕರು ಈ ವಿಚಾರ ಅರಿತುಕೊಳ್ಳಬೇಕು. ಮಕ್ಕಳನ್ನು ಸಹಜವಾಗಿ ಇರಲು, ಕಲಿಯಲು, ಬೆಳೆಯಲು ಅವಕಾಶ ಮಾಡಿಕೊಡಬೇಕು ಎಂದರು.
ವೃತ್ತಿಪರತೆ, ಗುಣಮಟ್ಟ ಹಾಗೂ ಶ್ರೇಷ್ಠತೆ ವಿಚಾರಗಳಲ್ಲಿ ಚೀನಾದವರ ಶ್ರದ್ಧೆ ಮೆಚ್ಚುಗೆಗೆ ಪಾತ್ರವಾಗುತ್ತದೆ. 100 ವರ್ಷಗಳ ಹಿಂದೆ ಚೀನಾ ಬಡ ದೇಶವಾಗಿತ್ತು. ಆದರೆ ಈಗ ಜಗತ್ತಿನ ಉನ್ನತ ದೇಶವಾಗಿ ಹೊರಹೊಮ್ಮಿದೆ. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ದೇಶವು ದೊಡ್ಡ ಆರ್ಥಿಕತೆಯಾಗಿ ಬೆಳೆದು ಬಂದಿರುವುದು ಯಶಸ್ಸಿನ ಕಥೆ ಮತ್ತು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಡಳಿತ ಮಂಡಳಿಯ ಅಧ್ಯಕ್ಷ ಇಂಜೆಟಿ ಶ್ರೀನಿವಾಸ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ' ಪುರಸ್ಕಾರ ನೀಡಲಾಯಿತು. 'ಈಚ್ ಒನ್ ಎಜುಕೇಟ್ ಒನ್ ಸ್ಕಾಲರ್ ಶಿಪ್ ಯೋಜನೆ'ಗೆ ಬೆಂಬಲ ನೀಡುತ್ತಿರುವ 'ಗ್ರಾಂಟ್ ಥಾರ್ನ್‌ಟನ್ ಇಂಡಸ್ ಪ್ರೈವೇಟ್ ಲಿಮಿಟೆಡ್'ಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್' ಪುರಸ್ಕಾರ ನೀಡಲಾಯಿತು. ಕಂಪನಿಯ ನಿರ್ದೇಶಕ ದೀಪಕ್ ದಾಸ್ ಪ್ರಶಸ್ತಿ ಸ್ವೀಕರಿಸಿದರು. ಅನ್ನಪೂರ್ಣ ಕೇಂದ್ರಗಳಿಗೆ ಬೆಂಬಲ ನೀಡುತ್ತಿರುವ 'ಒರಾಕಲ್ ಕಾರ್ಪೊರೇಷನ್'ಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್' ಪುರಸ್ಕಾರ ಪ್ರದಾನ ಮಾಡಲಾಯಿತು. ಕಂಪನಿಯ ಉಪಾಧ್ಯಕ್ಷ ಸತ್ಯಾಲಂಕ ಪ್ರಶಸ್ತಿ ಸ್ವೀಕರಿಸಿದರು. ಹಾಂಕಾಂಗ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಫ್ಲಿ ಫು ನಾ ನೇಯಿ (Flli Fu Nga Nei) ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ' ಪುರಸ್ಕಾರ ನೀಡಲಾಯಿತು.
ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ಸತ್ಯ ಸಾಯಿ ಗ್ರಾಮದಲ್ಲಿ ಶೀಘ್ರ ಡಿಜಿಟಲ್ ವ್ಯಸನ ಮುಕ್ತಿ ಕೇಂದ್ರ: ಸದ್ಗುರು ಶ್ರೀ ಮಧುಸೂದನ ಸಾಯಿ
ರಾಮನಗರದ ಡಾ. ದೈವಕುಮಾರ್ ಮತ್ತು ತುಮಕೂರಿನ ವೇದಾಂತ್ ಎಸ್. ತಮ್ಮ ಜೀವನದಲ್ಲಿನ ಪರಿವರ್ತನೆಯ ಪಯಣದ ಬಗ್ಗೆ ವಿವರಿಸಿದರು. ಹಾಂಕಾಂಗ್ ಪ್ರತಿನಿಧಿ ಮುಕೇಶ್ ದಯಾರಾಮ್, ವಿಶಾಲ್ ದಾಸ್ವಾನಿ, ಚೀನಾ ಪ್ರತಿನಿಧಿ ಚೆನ್ ಯಿ ವೆನ್ (Chen yi wen) ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.