ನಮ್ಮದು ನಾಳೆ ಎನ್ನುವ ಸರ್ಕಾರವಲ್ಲ, ಇಂದೇ ಎನ್ನುವ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್
ಶಾಸಕರಾಗಿ, ಸಂಸದರಾಗಿ ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವರು ಇಲ್ಲಿಗೆ ಬಂದು ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡುತ್ತಾರೆ. ನಾಳೆ ಕೆಲಸ ಮಾಡುತ್ತೇವೆ ಎಂಬುದು ಶತೃತ್ವ, ಇವತ್ತೇ ಕೆಲಸ ಮಾಡುತ್ತೇವೆ ಎಂಬುದು ಮಿತ್ರತ್ವ. ನಾಳೆ ಯಾರು ಇರುತ್ತಾರೋ ಇರುವುದಿಲ್ಲವೋ ಗೊತ್ತಿಲ್ಲ. ಅಧಿಕಾರ ಇದ್ದಾಗ ನಾವು ಏನು ಮಾಡಿದೆವು ಎಂಬುದು ಮುಖ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಾಗಡಿ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಷಣ. -
ಮಾಗಡಿ, ಮಾ.04: “ಮಾಗಡಿ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದಲೂ ನೀರು ಬರುತ್ತಿದ್ದು, ನೀರಿನ ಅದೃಷ್ಟವಿದೆ. ಇದಕ್ಕೆ ಅಗತ್ಯವಿರುವ ಟೆಂಡರ್‌ಗಳನ್ನು ಈಗಾಗಲೇ ಕರೆಯಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದರು. ಮಾಗಡಿಯಲ್ಲಿ ಬುಧವಾರ ನಡೆದ ವೈ.ಜಿ. ಗುಡ್ಡ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.
“ಸತ್ತೇಗಾಲದಿಂದ ಇಗ್ಗಲೂರಿಗೆ 26 ಕಿ.ಮೀ, ಇಗ್ಗಲೂರಿನಿಂದ ಮೊಗೇನಹಳ್ಳಿಗೆ 58 ಕಿ.ಮೀ. ಮೊಗೇನಹಳ್ಳಿಯಿಂದ ಕಣ್ವಕ್ಕೆ 6 ಕಿ.ಮೀ, ಕಣ್ವದಿಂದ ವೈ.ಜಿ. ಗುಡ್ಡಕ್ಕೆ 25 ಕಿ.ಮೀ ಸೇರಿ ಒಟ್ಟು 115 ಕಿ.ಮೀ ಮಾರ್ಗದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೀರನ್ನು ಪಂಪ್ ಮಾಡಿ ಹರಿಸಲಾಗುವುದು. ನಾವು ಅಂತರ್ಜಲ ಹೆಚ್ಚಳ ಮಾಡಲು ಈ ನೀರು ತರುತ್ತಿದ್ದೇವೆ. ಇದಕ್ಕೆ 160 ಎಚ್.ಪಿ ಪಂಪ್ ಮೂಲಕ 115 ಕಿ.ಮೀ ದೂರಕ್ಕೆ ಲಿಫ್ಟ್ ಮಾಡಲಾಗುತ್ತಿದೆ. ಆಮೂಲಕ ಈ ಭಾಗದ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ಇದರಿಂದ ರೈತರಿಗೆ ಶಕ್ತಿ ತುಂಬುವಂತಾಗುತ್ತದೆ. ಬಡ ರೈತನ ಬದುಕಿಸಲು, ಸಹಾಯ ಮಾಡಲು ರೈತರ ಮಕ್ಕಳಿಗೆ ಈ ಚಿಂತನೆ ಬರಲಿಲ್ಲವೇ? ಜನರಿಂದ ಮತ ಹಾಕಿಸಿಕೊಂಡು ರಾಜಕಾರಣ ಮಾಡಿಕೊಂಡಿರುವುದಲ್ಲ. ಜನ ನಮ್ಮನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದು, ಜನರ ಬದುಕಿನಲ್ಲಿ ಬಡಲಾವಣೆ ತರಲು ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ನಮ್ಮ ಕೆಲಸ ನೋಡಿ ನಾವು ಇಂತಹ ಕೆಲಸ ಮಾಡಲು ಆಗಲಿಲ್ಲವಲ್ಲ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದರು.
“ಕುಮಾರಣ್ಣ ಅವರು ಮಂಡ್ಯ ಸಂಸದರಾಗಿದ್ದಾರೆ, ಮದ್ದೂರಿನಲ್ಲಿ ರೈತರಿಗೆ ನಮ್ಮ ರೀತಿ ಟ್ರಾನ್ಸ್ಫಾರ್ಮರ್ ಹಾಕಿಸಲು ಹೇಳಿ ನೋಡೋಣ. ಕೇಂದ್ರ ಸರ್ಕಾರದಿಂದ ಹಣ ತಂದು ಮಂಡ್ಯದ ರೈತರಿಗೆ ಟ್ರಾನ್ಸ್ಫಾರ್ಮರ್ ಹಾಕಿಸಲಿ ಸಾಕು. ರೈತರ ಪಂಪ್ ಸೆಟ್‌ಗಳಿಗೆ 10 ಎಚ್.ಪಿ ಉಚಿತ ವಿದ್ಯುತ್ ನೀಡಿದ್ದು ನಾವು, ಕಾಂಗ್ರೆಸ್ ಸರ್ಕಾರ. ಇಲ್ಲಿ ಬಂದಿದ್ದ ಕೆಲವು ಮಹಿಳಾ ಫಲಾನುಭವಿಗಳಿಗೆ ಪಟ್ಟಾ ದಾಖಲೆ ಕೊಟ್ಟಿದ್ದೇವೆ. ಅದರಲ್ಲಿ ಅವರ ಫೋಟೋ, ಅವರ ಮನೆ ಫೋಟೊ, ಇ ಖಾತಾ ನೀಡಿದ್ದೇವೆ. ಇದೇ ರೀತಿ 2.20 ಲಕ್ಷ ಜನರಿಗೆ ಆಸ್ತಿ ದಾಖಲೆ ನೀಡುವ ಮೂಲಕ ಭೂಮಿ ಗ್ಯಾರಂಟಿ ನೀಡಿದ್ದೇವೆ. ಅಶೋಕಣ್ಣ, ನಿಮ್ಮ ಅವಧಿಯಲ್ಲಿ, ಜನತಾ ದಳದ ಅವಧಿಯಲ್ಲಿ ಇಂತಹ ಕೆಲಸ ಮಾಡಲು ಆಗುತ್ತಿರಲಿಲ್ಲವೇ? ಉಳುವವನಿಗೆ ಭೂಮಿ, ಬಗರ್ ಹುಕುಂ, ಅರಣ್ಯ ಭಾಗದ ರೈತರಿಗೆ ಜಮೀನು ಸೇರಿದಂತೆ ರೈತರ ಪರವಾಗಿ ದೆಹಲಿಯಲ್ಲಾದರೂ ಸರಿ, ರಾಜ್ಯದಲ್ಲಾದರೂ ಸರಿ ಯೋಜನೆ ರೂಪಿಸಿದ್ದರೆ ಅದು ಕಾಂಗ್ರೆಸ್ ಮಾತ್ರ. ಇಂತಹ ಒಂದೇ ಒಂದು ಕೆಲಸ ಮಾಡಲು ಆಗದಿದ್ದರೆ ಮತ್ಯಾಕೆ ಜನ ಮತ ಹಾಕಬೇಕು?” ಎಂದು ಕೇಳಿದರು.
ನಮ್ಮದು ನಾಳೆ ಎನ್ನುವ ಸರ್ಕಾರವಲ್ಲ, ಇಂದೇ ಎನ್ನುವ ಸರ್ಕಾರ
“ಟಿವಿಯಲ್ಲಿ ಹೀಗೂ ಉಂಟೆ ಎಂಬ ಕಾರ್ಯಕ್ರಮವನ್ನು ಎಲ್ಲರೂ ನೋಡಿರುತ್ತೀರಿ. ನಾನು ಇಲ್ಲಿ ನಮ್ಮ ಕೆಲಸವನ್ನು ತೋರಿಸಲು ನಿಂತಿದ್ದೇನೆ ಹೊರತು, ಮುಂದೆ ಇಂತಹ ಕೆಲಸ ಮಾಡುತ್ತೇನೆ ಎಂದು ಹೇಳಲು ನಿಂತಿಲ್ಲ. ಶಾಸಕರಾಗಿ, ಸಂಸದರಾಗಿ ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವರು ಇಲ್ಲಿಗೆ ಬಂದು ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡುತ್ತಾರೆ. ನಾಳೆ ಕೆಲಸ ಮಾಡುತ್ತೇವೆ ಎಂಬುದು ಶತೃತ್ವ, ಇವತ್ತೇ ಕೆಲಸ ಮಾಡುತ್ತೇವೆ ಎಂಬುದು ಮಿತ್ರತ್ವ. ನಾಳೆ ಯಾರು ಇರುತ್ತಾರೋ ಇರುವುದಿಲ್ಲವೋ ಗೊತ್ತಿಲ್ಲ. ಅಧಿಕಾರ ಇದ್ದಾಗ ನಾವು ಏನು ಮಾಡಿದೆವು ಎಂಬುದು ಮುಖ್ಯ. ನಮ್ಮದು ನಾಳೆ ಎನ್ನುವ ಸರ್ಕಾರವಲ್ಲ, ಇಂದೇ ಎನ್ನುವ ಸರ್ಕಾರ” ಎಂದು ತಿಳಿಸಿದರು.
“ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಮತಕ್ಕಾಗಿ ಬಂದಾಗ ಯಾರು ಏನು ಮಾಡಿದ್ದಾರೆ ಎಂದು ಕೇಳಬೇಕು. ಕಾಂಗ್ರೆಸ್ ಕಾರ್ಯಕರ್ತರು ನೀವುಗಳು ಬೇರೆ ಪಕ್ಷಗಳ ನಿಮ್ಮ ಸ್ನೇಹಿತರ ಜತೆ ಯಾರ ಕಾಲದಲ್ಲಿ ಯಾವ ಕೆಲಸ ಆಗಿದೆ ಎಂದು ಲೆಕ್ಕಾಚಾರ ಹಾಕಬೇಕು. ಅಧಿಕಾರ ಯಾರಿಗೆ ಇರಲಿಲ್ಲ? ದಳದ ಸಿಎಂ, ಪ್ರಧಾನಿ ಎಲ್ಲರಿಗೂ ಅಧಿಕಾರ ಇತ್ತಲ್ಲವೇ? ಅಧಿಕಾರದಲ್ಲಿ ಇದ್ದಾಗ ಯಾವ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ?” ಎಂದು ಪ್ರಶ್ನಿಸಿದರು.
ನಮ್ಮ ಗುರುತು ಉಳಿಸಿಕೊಳ್ಳಲು ಬೆಂಗಳೂರು ದಕ್ಷಿಣ ಜಿಲ್ಲೆ
“ಈ ಮಾಗಡಿ ಗುಡ್ಡಗಾಡು ಪ್ರದೇಶ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಈ ಜಿಲ್ಲೆಯನ್ನು ರಾಮನಗರ ಎಂದು ಮಾಡುವಾಗ ನಮ್ಮ ಹೆಸರು, ಗುರುತನ್ನು ಯಾಕೆ ತೆಗೆಯುತ್ತಿದ್ದೀರಿ? ನಾನು ಜಿಲ್ಲಾ ಪಂಚಾಯ್ತಿ ಸದಸ್ಯನಾದಾಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಂತಾ ಇತ್ತು. ಸುರೇಶ್ ಸಂಸದರಾಗಿದ್ದು ಬೆಂಗಳೂರು ಗ್ರಾಮಾಂತರಕ್ಕೆ. ಜಿಲ್ಲೆಯ ಕೇಂದ್ರಾಡಳಿತ ರಾಮನಗರದಲ್ಲೇ ಇರಲಿ, ಆದರೆ ಜಿಲ್ಲೆಯ ಹೆಸರಿನಲ್ಲಿ ಬೆಂಗಳೂರು ಹೆಸರನ್ನು ತೆಗೆಯಬೇಡಿ ಎಂದು ಕೇಳಿದೆ. ಆದರೆ ಅವರದ್ದು ಬೇರೆಯದೇ ಲೆಕ್ಕಾಚಾರ. ಆದರೆ ನೀವು ನಮಗೆ ಅಧಿಕಾರ ಮರಳಿ ನೀಡಿದ್ದೀರಿ, ಹೀಗಾಗಿ ನಮ್ಮ ಈ ಹಿಂದಿನ ಹೆಸರನ್ನು ಉಳಿಸಿಕೊಂಡು ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಿಸಿದ್ದೇವೆ” ಎಂದು ತಿಳಿಸಿದರು.
“ನಮ್ಮ ಕೆಲಸ, ತೀರ್ಮಾನಗಳಿಂದ ಈ ಭಾಗದ ಜನರ ಆಸ್ತಿ ಮೌಲ್ಯ ಹೆಚ್ಚಾಗಿದೆ. ಬಿಡದಿ ಟೌನ್ ಶಿಪ್ ಯೋಜನೆ ಭೂಸಂತ್ರಸ್ತರಿಗೆ ನಾನು ಎಕರೆಗೆ 2.50 ಕೋಟಿ ಪರಿಹಾರ ನಿಗದಿ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಅಲ್ಲಿ ಎಕರೆಗೆ 6-7 ಸಾವಿರಕ್ಕೆ ಜಮೀನು ತೆಗೆದುಕೊಂಡಿದ್ದರು. ನಾನು ಕೂಡ ಎಕರೆಗೆ 7-8 ಲಕ್ಷಕ್ಕೆ 10-20 ಎಕರೆ ಜಮೀನು ಖರೀದಿ ಮಾಡಿದ್ದೇನೆ. ಭೂಸ್ವಾಧೀನವಾಗುವ ಕುಮಾರಸ್ವಾಮಿ ಅವರ ಜಮೀನಿಗೂ 2.50 ಕೋಟಿ ನಿಗದಿ ಮಾಡಿದ್ದೇವೆ. ನಾವು ಅಧಿಕಾರಕ್ಕೆ ಬಂದಾಗ ನಾವು ತೆಗೆದುಕೊಳ್ಳುವ ಒಂದು ತೀರ್ಮಾನ ಜನರಿಗೆ ಶಕ್ತಿ ತುಂಬುವಂತಿರಬೇಕು” ಎಂದು ಹೇಳಿದರು.
“ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚಂದ ಎಂದು ಹೇಳಿದ್ದೆ. ರಾಜ್ಯದ ಜನ 136 ಸೀಟುಗಳನ್ನು ನೀಡಿ ನಮಗೆ ಶಕ್ತಿ ನೀಡಿದ್ದಕ್ಕೆ ನಾವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಿಮ್ಮ ಮನೆಗಳಿಗೆ ಉಚಿತ ವಿದ್ಯುತ್, ಬಡ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ, 10 ಕೆ.ಜಿ ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ, ನಿರುದ್ಯೋಗಿ ಯುವಕರಿಗೆ ಆರ್ಥಿಕ ಶಕ್ತಿ ನೀಡಿದ್ದೇವೆ. ನಿಮ್ಮ ಕಾಲದಲ್ಲಿ ಒಂದು ನೀವು ಒಂದೇ ಒಂದು ಟ್ರಾನ್ಸ್ಫಾರ್ಮರ್ ಕೊಟ್ಟಿದ್ದೀರಾ, ರೈತರ ಮಕ್ಕಳು ಎಂದು ಹೇಳಿಕೊಳ್ಳುವ ನೀವು ಒಂದು ಕೆರೆಯನ್ನು ತುಂಬಿಸಿದ್ದೀರಾ? ಎಂದು ಕುಮಾರಣ್ಣ, ಇಲ್ಲಿನ ಸಂಸದರು ಹಾಗೂ ದಳದ ನಾಯಕರಿಗೆ ಕೇಳಬೇಕು” ಎಂದು ಕರೆ ನೀಡಿದರು.
ನಾಲ್ಕು ಬಾರಿ ಗೆದ್ದರೂ ಕುಣಿಗಲ್ ಜನ ನಾಗರಾಜಯ್ಯ ಅವರನ್ನು ಸ್ಮರಿಸುತ್ತಿಲ್ಲ ಯಾಕೆ?
“ಈ ಸರ್ಕಾರದಲ್ಲಿ ನನಗೆ ನೀರಾವರಿ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಇದೇ ಶ್ರೀರಂಗ ಏತ ನೀರಾವರಿ ಯೋಜನೆ ಮೂಲಕ ಕುಣಿಗಲ್ ರೈತರಿಗೆ ನೀರು ಹರಿಸಲು ಮುಂದಾಗಿದ್ದೇವೆ. ಈ ನೀರಿಗಾಗಿ ಹೋರಾಟ ಮಾಡಿದ ವೈ.ಕೆ ರಾಮಯ್ಯ, ಹುಚ್ಚಮಾಸ್ತಿಗೌಡರ ಹೆಸರನ್ನು ಜನ ಇವತ್ತಿಗೂ ಚರ್ಚೆ ಮಾಡುತ್ತಿದ್ದಾರೆ. ಆದರೆ ನಾಲ್ಕು ಬಾರಿ ಗೆದ್ದಿರುವ ನಾಗರಾಜಯ್ಯ ಅವರ ಹೆಸರನ್ನು ಜನ ಇನ್ನು ಮಾತನಾಡುತ್ತಿಲ್ಲ ಯಾಕೆ? ಮೈಸೂರು ಮಹಾರಾಜರ ಕಾಲದಿಂದಲೂ ಕುಣಿಗಲ್‌ನಲ್ಲಿ ಕುದುರೆ ಸಾಕಲಾಗುತ್ತಿದೆ. ಬೆಂಗಳೂರು ರೇಸ್ ಕೋರ್ಸ್ ಅನ್ನು ಇಲ್ಲಿಗೆ ಸ್ಥಳಾಂತರಿಸುತ್ತೇವೆ ಎಂದರೆ ಇದಕ್ಕೆ ವಿರೋಧ ಮಾಡುತ್ತೀರಾ? ಇದರಿಂದ ಸುಮಾರು 2 ಸಾವಿರ ಜನರಿಗೆ ಕೆಲಸ ಸಿಗುತ್ತದೆ. ನಾವು ಕುಣಿಗಲ್ ಜನರಿಗೆ ರೇಸ್ ಆಡಿ ಎಂದು ಹೇಳಿಲ್ಲ. ರೇಸ್ ಕೋರ್ಸ್ ಬೆಂಗಳೂರಿನಲ್ಲಿದೆ ಎಂದು ಬೆಂಗಳೂರಿನ ಎಲ್ಲರೂ ರೇಸ್ ಆಡುತ್ತಿದ್ದಾರಾ? ನೀನು ಕೂಡ ರೇಸ್ ಆಡಬೇಡ. ನೀನು ಎಲ್ಲಿ ಆಡುತ್ತಿದ್ದೀಯಾ, ಆ ಜಾಗ ಯಾವುದು ಎಂದು ನನಗೆ ಗೊತ್ತು. ಕುಣಿಗಲ್‌ಗೆ ಹೆಸರು ಬರುತ್ತದೆ. ಬೇರೆ ಊರುಗಳಿಂದ ಬಂದವರು, ಅದರ ಚಟ ಇರುವವರು ರೇಸ್ ಆಡುತ್ತಾರೆ. ಚಟ ಇರುವವರು ವೈನ್ ಶಾಪಿಗೆ ಹೋಗುವುದಿಲ್ಲವೇ? ಚಟ ಇರುವವರು ಗೋವಾದಲ್ಲಿ ಕ್ಯಾಸಿನೋಗೆ ಹೋಗುವುದಿಲ್ಲವೇ? ರಾಮನಗರದವರು ಹೋಗಿ ಕ್ಯಾಸಿನೋ ಆಡುತ್ತಿರುವ ಫೋಟೊ ನೋಡಿದ್ದೇನೆ. ದೊಡ್ಡವರು ಆಡಿದ್ದಾರೋ, ಚಿಕ್ಕವರು ಆಡಿದ್ದಾರೋ ಎಂದು ನಾನು ಹೇಳುವುದಿಲ್ಲ. ಹೆಸರು ಹೇಳಿದರೆ ಪತ್ರಿಕೆಯವರು ಅದನ್ನೇ ಬರೆಯುತ್ತಾರೆ” ಎಂದು ಹೇಳಿದರು.
“ನಾವು ಶಾಶ್ವತವಲ್ಲ. ನಮ್ಮ ಕೆಲಸಗಳು ಮಾತ್ರ ಶಾಶ್ವತ. ಕೆಂಪೇಗೌಡರನ್ನು ನಾವು ನೆನೆಯುವುದು ಶಾಶ್ವತ. ಬಾಲಕೃಷ್ಣ ಅವರು ಚಕ್ರಬಾವಿಯಲ್ಲಿ ಒಂದು ಶಾಲೆ ಬೇಕು ಎಂದು ಕೇಳಿದರು. ನಾನು ಚಿಕ್ಕವನಾಗಿದ್ದಾಗ ಚಕ್ರಬಾವಿಗೆ ಬರುತ್ತಿದ್ದೆ. ಈ ಮನವಿ ಬಗ್ಗೆ ನಾನು, ಸುರೇಶ್ ಅವರೆಲ್ಲಾ ಸೇರಿ ಚರ್ಚೆ ಮಾಡಿ ಸಾಕ್ಷಿಗುಡ್ಡೆ ಬಿಟ್ಟು ಹೋಗುತ್ತೇವೆ. ನಾನು ಇಂಧನ ಸಚಿವನಾಗಿದ್ದಾಗ ಎಷ್ಟು ಸ್ಟೇಷನ್ ಮಾಡಿದ್ದೇನೆ, ಎಚ್‌ವಿಡಿಎಶ್ ಯೋಜನೆಯಲ್ಲಿ ನಾನು ಕೊಟ್ಟಿರುವ ಟ್ರಾನ್ಸ್ಫಾರ್ಮರ್ ಗಳು, ಈ ಕೆರೆ ತುಂಬಿಸುವ ಯೋಜನೆ ಸೇರಿದಂತೆ ಮಾಗಡಿ ಕ್ಷೇತ್ರದ ನೀರಾವರಿ ಯೋಜನೆಗೆ 1 ಸಾವಿರ ಕೋಟಿ ಅನುದಾನ ನೀಡಿದ್ದೇನೆ. ಕುಣಿಗಲ್ ಕ್ಷೇತ್ರದ ನೀರಾವರಿ ಯೋಜನೆಗಳಿಗೆ 1 ಸಾವಿರ ಕೋಟಿ, ರಾಮನಗರ ಹಾಗೂ ಕನಕಪುರ ಕ್ಷೇತ್ರಗಳಿಗೆ 1 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಈ ಬಗ್ಗೆ ಬಿಜೆಪಿಯವರು ಉತ್ತರ ನೀಡಬೇಕು. ನಿಮ್ಮ ಕಾಲದಲ್ಲಿ ನೀವು ಏನು ಮಾಡಿದ್ದೀರಿ ಎಂದು ಹೇಳಿ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬುದಕ್ಕೆ ಇದೇ ಸಾಕ್ಷಿ” ಎಂದು ಹೇಳಿದರು.
ದೇವರು ಬಾಲಕೃಷ್ಣ ಅವರಿಗೆ ಇನ್ನಷ್ಟು ಶಕ್ತಿ ನೀಡುವ ವಿಶ್ವಾಸವಿದೆ
“ಮನುಷ್ಯ ಸತ್ತಾಗ ಭೂಮಿಯೊಳಗೆ ಹೂತು ಬಿಡುತ್ತೇವೆ, ಆದರೆ ಅವರು ಮಾಡಿರುವ ಕೆಲಸಗಳು ಭೂಮಿಯ ಮೇಲೆ ಬದುಕಿರುತ್ತವೆ. ಇಂತಹ ನೀರಾವರಿ ಯೋಜನೆಗಳು ಸಾಕ್ಷಿಯಾಗಿ ಉಳಿದಿವೆ. ನಿಮಗೆ ಉತ್ತಮ ಜೀವನ ನೀಡಬೇಕು, ರೈತರನ್ನು ಕಾಪಾಡಬೇಕು. ತಾವರೆಕೆರೆ, ಕುಣಿಗಲ್‌ನಿಂದ ಇಲ್ಲಿಯವರೆಗೂ ಅತ್ಯುತ್ತಮ ರಸ್ತೆಗಳು ನಿರ್ಮಾಣ ಮಾಡಲಾಗಿದೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಅದೇ ರೀತಿ ನೀವು ಆಯ್ಕೆ ಮಾಡಿರುವ ಬಾಲಕೃಷ್ಣ ಅವರು ನಿಮಗೆ ಇಷ್ಟೆಲ್ಲಾ ಕೆಲಸ ಮಾಡಿದ್ದಾರೆ. ಅವರಿಗೆ ಇನ್ನಷ್ಟು ಶಕ್ತಿ ತುಂಬಬೇಕು. ನಾನು, ರಂಗನಾಥ್, ಸುರೇಶ್ ಇಲ್ಲಿಗೆ ಬಂದಿರುವುದೇ ಬಾಲಕೃಷ್ಣ ಅವರ ಕೈಬಲಪಡಿಸಲು. ಅವರು ಉತ್ತಮ ಕಾರ್ಯ ಮಾಡುತ್ತಿದ್ದು, ಅವರಿಗೆ ದೇವರು ಇನ್ನಷ್ಟು ಶಕ್ತಿ ಕೊಡುತ್ತಾನೆ ಎಂಬ ವಿಶ್ವಾಸ ನನಗಿದೆ” ಎಂದು ತಿಳಿಸಿದರು.
“ಮಂದೆಯೂ ನಮ್ಮ ಸರ್ಕಾರ ಅಧಿಕಾರದಲ್ಲಿ ಇರುತ್ತದೆ. 18-20 ತಿಂಗಳಲ್ಲಿ ಈ ಯೋಜನೆ ಮಾಡಲು ಸೂಚಿಸಲಾಗಿದೆ. ಈ ಅಧಿಕಾರ ನಂದಲ್ಲ, ನಿಮ್ಮದು. ನೀವೆಲ್ಲರೂ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಹಾಗೂ ಬಾಲಕೃಷ್ಣ. ನಿಮ್ಮ ಹಿಂದೆ ನಾವು, ನಮ್ಮ ಹಿಂದೆ ನೀವು ಇರಬೇಕು. ಮುಂಖ್ಯಮಂತ್ರಿ ವಿಚಾರವಾಗಿ ಈಗ ಮಾತನಾಡುವುದಿಲ್ಲ, ಮಾತನಾಡಿದರೇ, ಅದನ್ನೇ ಬರೆಯುತ್ತಾರೆ. ಅದಕ್ಕೆ ಕಾಲ ಉತ್ತರ ನೀಡುತ್ತದೆ. ಸದ್ಯದಲ್ಲೇ ಭೇಟಿಯಾಗಿ ನಿಮಗೆ ತಿಳಿಸುತ್ತೇನೆ” ಎಂದು ಹೇಳಿದರು.