ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MP Dr K Sudhakar: 'ಪಕ್ಷ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೂ ಅವರನ್ನೇ ನನ್ನ ಪ್ರತಿನಿಧಿ ಎಂದು ಭಾವಿಸಿ ಗೆಲ್ಲಿಸಿ'; ಕಾರ್ಯಕರ್ತರಿಗೆ ಕರೆ

'ಪಕ್ಷ ನನ್ನನ್ನು ಸಂಸದನಾಗಿಯೇ ಮುಂದುವರಿಸಿದರೆ ಹಾಗೆಯೇ ಇರುತ್ತೇನೆ. ವಿಧಾನಸಭೆಗೆ ಪಕ್ಷದ ಹೈಕಮಾಂಡ್ ಹಾಗೂ ಸ್ಥಳೀಯ ಮುಖಂಡರು ಚರ್ಚಿಸಿ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೂ ಅವರನ್ನೇ ನನ್ನ ಪ್ರತಿನಿಧಿ ಎಂದು ಭಾವಿಸಿ ಗೆಲ್ಲಿಸಬೇಕು. ಅವರು ಗೆದ್ದರೆ ನಾನೇ ಗೆದ್ದಂತೆ. ಕ್ಷೇತ್ರದ ಅಭಿವೃದ್ಧಿ ಇದೇ ರೀತಿ ಮುಂದುವರಿಯಲಿದೆ' ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು

2028ರ ವಿಧಾನಸಭೆ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ

2028ರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂಬ ಸ್ಪಷ್ಟ ಸುಳಿವನ್ನು ಬಿಟ್ಟುಕೊಟ್ಟ ಸಂಸದ ಡಾ. ಕೆ. ಸುಧಾಕರ್ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದಾರೆ. -

Profile
Ashok Nayak Jul 16, 2026 8:24 PM

ಚಿಕ್ಕಬಳ್ಳಾಪುರ: 2028ರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತಾವು ಸ್ಪರ್ಧಿಸು ವುದಿಲ್ಲ ಎಂಬ ಸ್ಪಷ್ಟ ಸುಳಿವನ್ನು ಬಿಟ್ಟುಕೊಟ್ಟ ಸಂಸದ ಡಾ.ಕೆ.ಸುಧಾಕರ್(MP Dr K Sudhakar) ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದಾರೆ.

ತಾಲೂಕಿನ ದೊಡ್ಡಕಿರುಗಂಬಿ, ಶ್ರೀರಾಮಪುರ, ಕಣಿತಹಳ್ಳಿ ಗ್ರಾಮಗಳಲ್ಲಿ ಗುರುವಾರ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಹಮ್ಮಿಕೊಂಡಿದ್ದ ವಿವಿಧ ಮೂಲಸೌಕರ್ಯ ಕಾಮಗಾರಿ ಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

'ಪಕ್ಷ ನನ್ನನ್ನು ಸಂಸದನಾಗಿಯೇ ಮುಂದುವರಿಸಿದರೆ ಹಾಗೆಯೇ ಇರುತ್ತೇನೆ. ವಿಧಾನಸಭೆಗೆ ಪಕ್ಷದ ಹೈಕಮಾಂಡ್ ಹಾಗೂ ಸ್ಥಳೀಯ ಮುಖಂಡರು ಚರ್ಚಿಸಿ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೂ ಅವರನ್ನೇ ನನ್ನ ಪ್ರತಿನಿಧಿ ಎಂದು ಭಾವಿಸಿ ಗೆಲ್ಲಿಸಬೇಕು. ಅವರು ಗೆದ್ದರೆ ನಾನೇ ಗೆದ್ದಂತೆ. ಕ್ಷೇತ್ರದ ಅಭಿವೃದ್ಧಿ ಇದೇ ರೀತಿ ಮುಂದುವರಿಯಲಿದೆ' ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಇದನ್ನೂ ಓದಿ: Dr. K. Sudhakar: ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಕಳೆದುಹೋಗಬೇಡಿ, ಮೌಲ್ಯ ಅರಿತುಕೊಂಡು ಸಾಧನೆ ಮಾಡಿ: ಸಂಸದ ಡಾ.ಕೆ.ಸುಧಾಕರ್‌

'ಮುಂದಿನ ಚುನಾವಣೆಯಲ್ಲಿ ನಾನು ಹೇಳುವ ಅಭ್ಯರ್ಥಿಗೆ ಮತ ನೀಡಬೇಕು. ಅವರೇ ನಾನೆಂದು ಭಾವಿಸಿ ಬೆಂಬಲಿಸಬೇಕು. ಈ ವಿಚಾರವನ್ನು ಈಗಿನಿಂದಲೇ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು' ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಈ ಹೇಳಿಕೆಯ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಹಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಗಳಿಗೆ ಪರೋಕ್ಷವಾಗಿ ತೆರೆ ಎಳೆಯುವ ಪ್ರಯತ್ನ ಮಾಡಿದರು. ಪಕ್ಷದ ತೀರ್ಮಾನವೇ ಅಂತಿಮವಾಗಿದ್ದು, ಅಭ್ಯರ್ಥಿ ಯಾರೇ ಆಗಿದ್ದರೂ ಒಗ್ಗಟ್ಟಿನಿಂದ ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.

ನಾನು ನಿಮಗೆ ಪ್ರೀತಿಕೊಟ್ಟಿದ್ದೇನೆ. ಅದನ್ನು ನೀವು ಬೇರೆಯವರಿಗೆ ಹಂಚಬೇಡಿ. ನೀವು ಮೆಯಲ್ಲಿದ್ದರೂ ಗೆಲ್ಲಿಕೊಂಡು ಬರುತ್ತೇವೆ ಎಂದು ಹೇಳಿದ್ದಿರಿ. ಆದರೆ ಸೋಲಿಸುವ ಮೂಲಕ ಡಾಕ್ಟರ್‌ಗೆ 5 ವರ್ಷ ವಿಶ್ರಾಂತಿ ಪಡೆಯುವಂತೆ ಮಾಡಿದ್ದೀರಿ. ನೀವು ಮಾಡಿದ ಪುಣ್ಯದ ಕೆಲಸದಿಂದ ಕ್ಷೇತ್ರದ ಜನತೆ ಕಷ್ಟಗಳನ್ನು ನೋಡುವಂತಾಗಿದೆ.ಕುದುರೆ ಬೆಲೆ ಗೊತ್ತಾಗುವುದು ಕತ್ತೆಯನ್ನು ನೋಡಿದಾಗಲೇ ಎಂಬುದು ನಿಮಗೆ ಅರ್ಥವಾಗಿರಬೇಕು ಎಂದು ಮಾರ್ಮಿಕವಾಗಿ ನುಡಿದರು.

cbpm4s

2023ರ ವಿಧಾನಸಭೆ ಚುನಾವಣೆಯ ಸೋಲನ್ನು ನೆನಪಿಸಿಕೊಂಡ ಸುಧಾಕರ್, ಸಾಯಿ ಕೃಷ್ಣ ಚಾರಿಟೇಬಲ್ ಟ್ರಸ್ಟ್ ಮೂಲಕ ಹತ್ತಾರು ವರ್ಷಗಳಿಂದ 'ಕ್ಷೇತ್ರದ ಮಹಿಳೆಯರಿಗೆ ಉಚಿತ ಗ್ಯಾಸ್‌ ಸ್ಟೌವ್, ಕುಕ್ಕರ್ ಹಾಗೂ ಮಿಕ್ಸರ್-ಗ್ರೈಂಡರ್,ಪ್ರಿಡ್ಜ್ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದೆ. ಅವರು ಕೇಳುವ ಮೊದಲೇ ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸಿದ್ದೆ. ಮತದಾನ ಮಾಡುವಾಗಲಾದರೂ ಯಾವುದಾದರೂ ಸಹಾಯ ನೆನಪಿಗೆ ಬರಬೇಕಿತ್ತಲ್ಲ. ಆದರೂ ಜನರು ನನಗೆ ಸೋಲಿನ ಉಡುಗೊರೆ ನೀಡಿದರು. ನಾನು ಯಾವ ತಪ್ಪು ಮಾಡಿದ್ದೆ ಎಂಬುದು ಇಂದಿಗೂ ಅರ್ಥ ವಾಗುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಕ್ಷೇತ್ರದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತಿರುವುದನ್ನು ಉಲ್ಲೇಖಿಸಿದ ಅವರು, 'ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ೫ ಸಾವಿರ ಪ್ರೋತ್ಸಾಹಧನ ನೀಡುತ್ತಿದ್ದೇವೆ. ಇದು ಯಾವುದೇ ಪ್ರದರ್ಶನಕ್ಕಾಗಿ ಅಲ್ಲ. ನಾನು ನಾಟಕದ ರಾಜಕಾರಣ ಮಾಡುವವನಲ್ಲ' ಎಂದು ಹೆಸರು ಹೇಳದೆ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.

ಕ್ಷೇತ್ರದ ಅಭಿವೃದ್ದಿಯ ವಿಚಾರದಲ್ಲಿ 'ಈಗಿನ ಶಾಸಕ ಆಕಾಶ ಎಷ್ಟು ದೂರವಿದೆಯೋ ಅಷ್ಟೇ ದೂರದಲ್ಲಿದ್ದಾರೆ.ಅವರ ಮರುಳು ಮಾತುಗಳಿಗೆ ಮರುಳಾಗಿ ಮನ ಹಾಕಿ ಅನುಭವಿಸುತ್ತಿದ್ದೀರಿ. ಅವರು ನಿಮ್ಮೂರಿಗೆ ಅಭಿವೃದ್ದಿ ಕೆಲಸ ಮಾಡಲು ಬಂದಿಲ್ಲ. ಬದಲಿಗೆ ನಾನು ಬಂದಿದ್ದೇನೆ. ಆದರೆ ನೀವು ಮತ ಹಾಕಿರಲಿ, ಹಾಕದಿರಲಿ ನಾನು ನಿಮ್ಮ ಗ್ರಾಮಗಳಿಗೆ ಅಭಿವೃದ್ಧಿ ಕಾಮಗಾರಿಗಳನ್ನು ತರುತ್ತಿದ್ದೇನೆ. ನನಗೆ ನಿಮ್ಮ ಮೇಲೆ ದ್ವೇಷವಿಲ್ಲ. ಸಂಸದನಾಗಿ ನನ್ನ ಕರ್ತವ್ಯವನ್ನು ಪ್ರಾಮಾಣಿಕ ವಾಗಿ ನಿರ್ವಹಿಸುತ್ತಿದ್ದೇನೆ' ಎಂದರು.

ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಬಡವರಿಗೆ ಉಚಿತ ನಿವೇಶನ ಹಾಗೂ ಮನೆ ನಿರ್ಮಾಣ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಪಕ್ಷದ ಅಭ್ಯರ್ಥಿಯನ್ನೇ ಗೆಲ್ಲಿಸಲು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಕರೆ ನೀಡಿದರು.

ಈ ವೇಳೆ ಪಕ್ಷದ ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಕೆ.ಆರ್.ರೆಡ್ಡಿ,ನಾಯನಹಳ್ಳಿ ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ಪ್ರಸಾದ್, ಆನಂದಮೂರ್ತಿ, ಲಿಂಗಾರೆಡ್ಡಿ, ದೊಡ್ಡನರಸಿಂಹಪ್ಪ, ಪ್ರಸನ್ನ, ಜಗದೀಶ್, ನಾರಾಯಣಸ್ವಾಮಿ, ಅಗಲಗುರ್ಕಿ ಚಂದ್ರಶೇಖರ್ ಇತರರು ಇದ್ದರು.