ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯೋಜನೆ ಮುಂದುವರಿಸುತ್ತೇವೆʼʼ: ಅಚ್ಚರಿಯ ಹೇಳಿಕೆ ನೀಡಿದ ಡಿ.ಕೆ. ಶಿವಕುಮಾರ್‌

CM DK Shivakumar: ನಮ್ಮದು ಸಿದ್ದರಾಮಯ್ಯ ಅವರ ಸರ್ಕಾರದ ಮುಂದುವರಿದ ಭಾಗ. ಹೊಸ ಆಲೋಚನೆ ಹೊಂದಿದ್ದೇವೆ. ಈ ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಅವರ ಆಲೋಚನೆಯನ್ನು ನಾವು ಬಿಡದೆ ಮುಂದುವರಿಸುತ್ತೇವೆ. ಕುಮಾರಸ್ವಾಮಿ ಅವರ ಬಿಡದಿ, ದೇವೇಗೌಡರ ನೈಸ್ ಯೋಜನೆಯನ್ನು ನಾವು ಮುಂದುವರಿಸುತ್ತೇವೆ. ಈ ಯೋಜನೆಗಳಲ್ಲಿ ತಪ್ಪಾಗಿದ್ದರೆ ಸರಿ ಮಾಡೋಣ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಎಚ್‌ಡಿಕೆ, ಬಿಎಸ್‌ವೈ, ಬೊಮ್ಮಾಯಿ ಅವರ ಆಲೋಚನೆ ಮುಂದುವರಿಸುತ್ತೇವೆ: ಡಿಕೆಶಿ

ಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -

Profile
Siddalinga Swamy Aug 18, 2026 6:35 PM

ಬೆಂಗಳೂರು, ‌ಆ. 18: ಪ್ರಧಾನಿ ದೇಶವನ್ನು ಆರ್ಥಿಕ ಶಕ್ತಿಯನ್ನಾಗಿಸಬೇಕು ಅಂದರೆ, ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಿದ್ದರೆ ಮಾತ್ರ ಸಾಧ್ಯ. ನಮ್ಮಲ್ಲಿರುವ ಪ್ರತಿಭಾ ಸಾಮರ್ಥ್ಯ ಅಸಮಾನ್ಯ ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಹೇಳಿದರು. ಉಪಸಭಾಧ್ಯಕ್ಷರ ಆಯ್ಕೆಯ ನಂತರ ವಿಧಾನಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಪ್ರಧಾನಿಗಳು ಮೈಸೂರಿಗೆ ಬಂದಿದ್ದಾಗ, ಅವರ ಬಳಿ ರಾಜ್ಯದ ಹಿತಕ್ಕಾಗಿ ಏನೇನು ಕೆಲಸ ಆಗಬೇಕು ಎನ್ನುವುದನ್ನು ಹೇಳಿದ್ದೇನೆ. ಇತಿಹಾಸದಲ್ಲಿ ಏನೇನೆಲ್ಲ ಆಗಿದೆ ಎನ್ನುವುದನ್ನು ಅವರ ಗಮನಕ್ಕೆ ತಂದಿದ್ದೇನೆ. ನಮ್ಮಲ್ಲಿರುವ ಟ್ಯಾಲೆಂಟ್‌ ಪೂಲ್ ಬಗ್ಗೆ, ಅದರ ಶಕ್ತಿಯ ಬಗ್ಗೆ ಅವರ ಗಮನ ಸೆಳೆದಿದ್ದೇನೆ ಎಂದರು.

ಅಧಿಕಾರ ಯಾವತ್ತಿಗೂ ಶಾಶ್ವತ ಅಲ್ಲ ಅನ್ನೋ ಸತ್ಯ ನನಗೆ ತಿಳಿದಿದೆ. ನನ್ನ ಪಾಲಿಗೆ ದೊರೆತ ಸ್ಥಾನಕ್ಕೆ ಗೌರವ ಸಲ್ಲಿಸುತ್ತಾ ಬಂದಿದ್ದರಿಂದ ಇವತ್ತು ಈ ಸ್ಥಾನದಲ್ಲಿ ಕುಳಿತಿದ್ದೇನೆ. ನನ್ನ ಹೃದಯ ನಿಷ್ಕಲ್ಮಶವಾಗಿದೆ. ಮನಸ್ಸಿನಲ್ಲಿ ಯಾವುದೇ ದ್ವೇಷಾಸೂಯೆಗಳು ಇಲ್ಲದೆ ಈ ನಾಡಿನ ಜನರ ಸೇವೆ ಮಾಡಬೇಕು ಎಂದು ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.

ರಾಜಕೀಯದಲ್ಲಿ ಅಧಿಕಾರ ದುರಪಯೋಗ ಆಗಬಾರದು. ರಾಜ್ಯದ ಹಿತಾಸಕ್ತಿಗೆ ಎಲ್ಲರೂ ಬಹಳ ಮುಖ್ಯ. ವಿರೋಧ ಪಕ್ಷಗಳ ಟೀಕೆ, ಟಿಪ್ಪಣಿಗಳು, ನಮ್ಮವರ ಸಲಹೆಗಳು ಎಲ್ಲವೂ ಬೇಕು. ನಾವೆಲ್ಲ ಸೇರಿ ಈ ರಾಜ್ಯದ ಹಿತಾಸಕ್ತಿಯಾಗಿ ಕೆಲಸ ಮಾಡೋಣ. ಇಬ್ಬರ ಉದ್ದೇಶ ಒಂದೇ. ಜನಸೇವೆ ಎಂದರು.

ಬಿಡದಿ ಟೌನ್‌ಶಿಪ್ ಚರ್ಚೆ ಮಾಡೋಣ

ಬಿಡದಿ ವಿಚಾರದಲ್ಲಿ ಚರ್ಚೆ ಮಾಡೋಣ ಅಂತ ಹೇಳಿದ್ದೀರಿ. ಸಂತೋಷ. ತೊಂದರೆ ಕೊಡುವ ಜಾಯಮಾನ ನನ್ನದಲ್ಲ. ಕುಮಾರಸ್ವಾಮಿ ಅವರ ಆವತ್ತಿನ ಬಿಡದಿ ಟೌನ್‌ಶಿಪ್ ನಿರ್ಧಾರವನ್ನ ನಾನು ಒಪ್ಪಿದ್ದೆ. 2028ಕ್ಕೆ ಜನ ಏನು ತೀರ್ಮಾನ ಮಾಡುತ್ತಾರೋ ಅದನ್ನು ನೀವು, ನಾವು ಇಬ್ಬರೂ ಒಪ್ಪಿಕೊಳ್ಳಬೇಕು. ಇಡೀ ದೇಶದಲ್ಲಿ ಸಮಸ್ಯೆಗಳು ಬೇಕಾದಷ್ಟು ಇವೆ. ನಾವು ಟೀಮ್ ಕರ್ನಾಟಕವಾಗಿ ಅದರ ಪರಿಹಾರಕ್ಕಾಗಿ ಒಟ್ಟಾಗಿ ಹೋರಾಟ ಮಾಡೋಣ ಎಂದರು.

ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆಗಿ ಮಂಕಾಳ ವೈದ್ಯ, ಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ

ಕುಮಾರಸ್ವಾಮಿ ಬಿಡದಿ ಸೇರಿ ಐದು ಟೌನ್ ಶಿಪ್ ಮಾಡಲು ಮುಂದಾದರು. ಅವರ ಆಲೋಚನೆ ತಪ್ಪಲ್ಲ. ಆದರೆ ಅದನ್ನು ಮಾಡಲು ಯಾಕೆ ಸಾಧ್ಯವಾಗಲಿಲ್ಲ. ಮಹಾರಾಷ್ಟ್ರ ಸಿಎಂ 80 ಸಾವಿರ ಎಕರೆ ಭೂಸ್ವಾಧೀನ ಮಾಡಿದ್ದಾರೆ. ಮೋದಿ ಅವರು ಗಿಫ್ಟ್ ಸಿಟಿ ಮಾಡುತ್ತಿದ್ದಾರೆ. ನಮಗೂ ನೀಡಿ ಎಂದು ಕೇಳಿದೆ, ಕೊಡಲಿಲ್ಲ. ಆಂಧ್ರ ಸಿಎಂ ಕೂಡ ಹೊಸ ನಗರ ನಿರ್ಮಿಸುತ್ತಿದ್ದಾರೆ. ನಮ್ಮಲ್ಲಿ ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್ ಕೂಡ ರೈತರ ಜಮೀನು. ಪೆರಿಫರಲ್ ರಿಂಗ್ ರಸ್ತೆ ಕೂಡ ರೈತರ ಜಮೀನು. ಈ ಯೋಜನೆಗಳು ದೂರದೃಷ್ಟಿ ಯೋಜನೆಗಳು. ನೈಸ್ ರಸ್ತೆ ಇಲ್ಲವಾಗಿದ್ದಾರೆ ಬೆಂಗಳೂರು ನಗರ ಸಂಚಾರ ಪರಿಸ್ಥಿತಿ ಏನಾಗುತ್ತಿತ್ತು ನೀವೇ ಹೇಳಿ. ಯೋಜನೆ ಲೋಪದೋಷ ವಿರುದ್ಧ ಕ್ರಮ ಕೈಗೊಳ್ಳೋಣ ಎಂದರು.

ಇಡೀ ದೇಶದಲ್ಲಿ ರಾಜಸ್ಥಾನ ಬಳಿಕ ಅತಿ ಹೆಚ್ಚು ಒಣ ಭೂಮಿ ಇರುವ ರಾಜ್ಯ ಕರ್ನಾಟಕ. ನಾವು ರೈತರ ಬಗ್ಗೆ ಆಲೋಚನೆ ಮಾಡಬೇಕು, ಅವರನ್ನು ಬದುಕಿಸಬೇಕು. ಹೀಗಾಗಿ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ರೈತರಿಗೆ ಮಾರ್ಗದರ್ಶನ ನೀಡಲು ಮುಂದಾಗಿದ್ದೇವೆ. ಬೆಂಗಳೂರಿನ ನಗರ ವಿದ್ಯಾರ್ಥಿಗಳಿಗೆ ಹಳ್ಳಿ, ರೈತನ ಬದುಕು ಪರಿಚಯಿಸಬೇಕು ಎಂದು ಕೃಷಿ ವಿವಿಗೆ ಹೇಳಿ 3 ದಿನ ಪ್ರವಾಸದ ಪಠ್ಯಕ್ರಮ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಮುಂದಿನ 25 ವರ್ಷಗಳಲ್ಲಿ ಕರ್ನಾಟಕವನ್ನು ದೇಶದಲ್ಲಿ ಶಕ್ತಿಯುತ ರಾಜ್ಯವನ್ನಾಗಿ ರೂಪಿಸಲು ಆಡಳಿತ ಪಕ್ಷ - ವಿರೋಧ ಪಕ್ಷಗಳು ಎರಡೂ ಸಾಮರಸ್ಯದಿಂದ ಒಟ್ಟಿಗೆ ಕೆಲಸ ಮಾಡಿದರೆ ಮಾತ್ರ ಸಾಧ್ಯ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಪ್ರಧಾನಿಗಳು ಬೆಂಗಳೂರಿನ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಅವರು ನನ್ನ ಬಳಿ ವಿಶ್ವದ ಎಲ್ಲಾ ನಾಯಕರು, ಹೂಡಿಕೆದಾರರು ಬೆಂಗಳೂರನ್ನೇ ಬಯಸುತ್ತಿದ್ದಾರೆ ಎಂದಿದ್ದರು. ಸುಪ್ರಿಂ ಕೋರ್ಟ್ ದೆಹಲಿಯಲ್ಲಿದೆ. ಆದರೆ ಕಾನೂನು ಕಾಲೇಜು ಬೆಂಗಳೂರಲ್ಲಿ ಏಕಿದೆ? ಇಸ್ರೋ ಏಕೆ ಬೆಂಗಳೂರಲ್ಲಿ ಶುರುವಾಯಿತು? ವಿವೇಕಾನಂದರು- ಜೆಮ್ ಶೆಡ್‌ ಜೀ ಟಾಟಾ ಅವರೊಂದಿಗೆ ಸಂಭಾಷಣೆಯಿಂದ ಮೈಸೂರು ಮಹಾರಾಜರು ವಿಜ್ಞಾನದಿಂದ ಅಭಿವೃದ್ಧಿ ಸಾಧ್ಯ ಅನ್ನೋದನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ ಜಾಗ ಕೊಟ್ಟರು ಎಂದು ಹೇಳಿದರು.

ಬೆಂಗಳೂರಿಗೆ ನೀರು ಬೇಕು

ಬೆಂಗಳೂರಿಗೆ ನೀರು ಒದಗಿಸುವುದು ಸವಾಲಿನ ಕೆಲಸ. ಅದನ್ನು ನಾವು ಮಾಡುತ್ತಿದ್ದೇವೆ. ಹಿಂದೆ ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಹೆಬ್ಬಾಳದ ನಂತರದ ಪ್ರದೇಶಗಳಿಗೆ ಜಲಮಂಡಳಿಯಿಂದ ನೀರು ಒದಗಿಸುವುದು ಬೇಡ ಅಂತ ತೀರ್ಮಾನಿಸಿ, ನಾನೇ ಆದೇಶಕ್ಕೆ ಸಹಿ ಹಾಕಿದ್ದೆ. ಆದರೆ ಇಂದು ಬೆಂಗಳೂರು ಅಗಾಧವಾಗಿ ಬೆಳೆದಿದೆ. ಹೆಸರಘಟ್ಟ ಕೆರೆ, ಹೊಸಕೋಟೆ ಕೆರೆ, ತಿಪ್ಪಗೊಂಡನಹಳ್ಳಿಯಂಥ ಐದಾರು ಕೆರೆಗಳನ್ನು ಅಭಿವೃದ್ಧಿಗೊಳಿಸಿ, ಅಂತರ್ಜಲ ಹೆಚ್ಚಿಸಿ ಬೆಂಗಳೂರು ಜನರ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನಕ್ಕೆ ನಮ್ಮ ಸರ್ಕಾರ ಕೈಹಾಕುತ್ತಿದೆ ಎಂದರು.

ಕಾವೇರಿ ವಿಚಾರದಲ್ಲಿ ಸಹಕಾರ ಕೊಟ್ಟ ನಿಮಗೆ ಧನ್ಯವಾದಗಳು. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗಲ್ಲ ಎಂದು ಈ ಹಿಂದೆ ಹೇಳಿದ್ದೆ. ನಾವು ನೀವು ಎಲ್ಲರೂ ಸೇರಿ ಪ್ರಕೃತಿಗೆ ಪ್ರಾರ್ಥಿಸೋಣ ಎಂದರು.

ನಮ್ಮಲ್ಲಿರುವ ಪ್ರತಿಭೆಗಳು ಪ್ರಪಂಚದಲ್ಲಿ ಇಲ್ಲ. ಕ್ಯಾಲಿಫೋರ್ನಿಯದಲ್ಲಿರುವ ಇಂಜಿನಿಯರ್‌ಗಳ ಪೈಕಿ ಮೂವರಲ್ಲಿ ಇಬ್ಬರು ಭಾರತೀಯರು, ಅದರಲ್ಲೂ ಹೆಚ್ಚು ಕರ್ನಾಟಕದವರು. ಇದು ನಮ್ಮ ಶಕ್ತಿ, ಇದನ್ನು ಕಾಪಾಡಬೇಕು. ನಾವು ರಾಜ್ಯದ 350 ಕಿ.ಮೀ ಉದ್ದದ ಕರಾವಳಿಯನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುತ್ತಿದ್ದೇವೆ. ಕೇರಳ, ಗೋವಾ ರಾಜ್ಯಗಳು ಕರಾವಳಿ ಭಾಗವನ್ನು ಹೇಗೆ ಬಳಸಿಕೊಂಡಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುತ್ತಿದ್ದೇವೆ. ಹೀಗೆ ನಾವು ರೈತರು, ನೀರಾವರಿ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ ಎಂದರು.

ನಮ್ಮದು ಸಿದ್ದರಾಮಯ್ಯ ಅವರ ಸರ್ಕಾರದ ಮುಂದುವರಿದ ಭಾಗ

ನಮ್ಮದು ಸಿದ್ದರಾಮಯ್ಯ ಅವರ ಸರ್ಕಾರದ ಮುಂದುವರಿದ ಭಾಗ. ಹೊಸ ಆಲೋಚನೆ ಹೊಂದಿದ್ದೇವೆ. ಈ ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಅವರ ಆಲೋಚನೆಯನ್ನು ನಾವು ಬಿಡದೆ ಮುಂದುವರಿಸುತ್ತೇವೆ. ಕುಮಾರಸ್ವಾಮಿ ಅವರ ಬಿಡದಿ, ದೇವೇಗೌಡರ ನೈಸ್ ಯೋಜನೆಯನ್ನು ನಾವು ಮುಂದುವರಿಸುತ್ತೇವೆ. ಈ ಯೋಜನೆಗಳಲ್ಲಿ ತಪ್ಪಾಗಿದ್ದರೆ ಸರಿ ಮಾಡೋಣ ಎಂದರು.

ಈ ಮಧ್ಯೆ ಬಿಜೆಪಿ ಶಾಸಕ ಸುನೀಲ್ ಕುಮಾರ್, ನಿಮ್ಮ ಈ ಯೋಜನೆ ಮಾಡಲು ನಿಮ್ಮ ಪಕ್ಷದವರೇ ಬಿಡಲ್ಲ ಎಂದಾಗ, ನೋಡಿ ಸುನೀಲ್, ನನಗೆ ಇತಿಹಾಸ ಓದಕ್ಕೆ ಬರೆಯುವುದಕ್ಕೆ ಇಷ್ಟ ಇಲ್ಲ. ಇತಿಹಾಸ ಸೃಷ್ಟಿಸುವುದಕ್ಕೆ ಹೆಚ್ಚು ಆಸಕ್ತಿ ಇದೆ. ನಾನು ನನ್ನ ಕೈಲಾದ ಪ್ರಯತ್ನ ಮಾಡುವೆ. ಯಾವುದು ಸುಲಭವಲ್ಲ. ಅಧಿಕಾರಿಗಳು ಸುಲಭವಾಗಲು ಬಿಡಲ್ಲ, ಕೊರ್ಟ್‌ಗಳಲ್ಲಿ ಒಂದಷ್ಟು ಪ್ರಕರಣ ಇವೆ ಎಂದರು.

ನೀವು ಏನು ಟೀಕೆ ಮಾಡುತ್ತೀರೋ ಮಾಡಿ. ಆದರೆ ಮುಂದಿನ 25 ವರ್ಷಗಳಿಗೆ ಅಗತ್ಯವಾದ ನೀಲನಕ್ಷೆ ರೂಪಿಸೋಣ. ನಾವು ಇಲ್ಲಿಗೆ ಬಂದಿರೋದು ಜನರ ಸೇವೆಗಾಗಿ. ಬಿಜೆಪಿ ಕಾಲದಲ್ಲಿ ಸಕಾಲ ಎಂದು ಮಾಡಿದ್ದೀರಿ. ನಾನು ಅದಕ್ಕೆ ಹೊಸ ರೂಪ ನೀಡಿ ಪ್ರಜಾಸೇವೆ ಇಲಾಖೆ ಆರಂಭಿಸುತ್ತಿದ್ದೇವೆ ಎಂದರು.

ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ

ನನಗೆ ರಾಗ-ದ್ವೇಷಗಳು ಎಳ್ಳಷ್ಟೂ ಇಲ್ಲ. ಎಷ್ಟೋ ಜನರು ರಾಜಕೀಯ ಮಾಡುತ್ತಿದ್ದಾರೆ . ನಾನು ನನ್ನ ಜೀವನದಲ್ಲಿ ರಾಜಕೀಯ, ಕೋರ್ಟ್ ಪ್ರಕರಣಗಳು, ಟೀಕೆಗಳನ್ನು ಅನುಭವಿಸಿ ಮಾಗಿದ್ದೇನೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಅನ್ನೋದು ಕಟ್ಟ ಕಡೆಯ ಸತ್ಯ. ತಪ್ಪುದಾರಿಗೆ ಹೋದರೆ ಸರಿದಾರಿಗೆ ತರುವುದಕ್ಕೆ ಮಾಧ್ಯಮಗಳಿವೆ. ನಾವು, ನೀವು ತಪ್ಪು ಮಾಡಿದರೆ ಎದುರಿಗೆ ಹೈ ಕೋರ್ಟ್ ಇದೆ ಎಂದರು.

ಸಿಎಂ ಡಿ.ಕೆ. ಶಿವಕುಮಾರ್‌ ಭೇಟಿಯಾಗಿ ಪ್ರಕಾಶ್‌ ರಾಜ್‌ ಹೇಳಿದ್ದೇನು?

ನಾಡಿನ ಎಲ್ಲ ಜಲ್ವಂತ ಸಮಸ್ಯೆಗಳಿಗೂ ನೀವೆಲ್ಲ ಸೇರಿ ರಚನಾತ್ಮಕವಾದ ಪರಿಹಾರ ಕೊಡಿ. ಮೊದಲ ಸಲ ಶಾಸಕರಲ್ಲೂ ಹೊಸ ಚಿಂತನೆ ಇರಬಹುದು. ನಾನು 8 ಸಲ, ಆರ್. ಅಶೋಕ್ 10 ಸಲ ಶಾಸಕರಾಗಿದ್ದಾರೆ. ನಾವೇ ಬುದ್ಧಿವಂತರು ಎನ್ನುವಂತಿಲ್ಲ. ಮಕ್ಕಳೇ ಟೀಚರ್‌ಗೆ ಪಾಠ ಮಾಡುವ ಕಾಲದಲ್ಲಿ ನಾವಿದ್ದೇವೆ. ಜಗತ್ತು ಕರ್ನಾಟಕವನ್ನು, ಬೆಂಗಳೂರನ್ನು ನೋಡುತ್ತಿದೆ ಎನ್ನುವ ಅರಿವು ನಮಗಿರಲಿ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.