ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿರೋಧ ಪಕ್ಷದ ಧಿಕ್ಕಾರ ಆಳವಾದ ಗಾಯ ಮಾಡಿದೆ ಎಂದ ಸಿಎಂ ಡಿ.ಕೆ. ಶಿವಕುಮಾರ್‌

CM DK Shivakumar: ನನಗೆ ಅಶ್ವಥ್ ನಾರಾಯಣ್, ವಿಜಯೇಂದ್ರ ಅವರ ತಂಡದ ಮೇಲೆ ಬಹಳ ಬೇಜಾರಾಗಿದೆ. ಎರಡು ಮೂರು ದಿನ ಕುಳಿತುಕೊಂಡು ನಾನು ಹೇಳುವುದನ್ನು ಕೇಳಿ ಎಂದು ಹೇಳಿದ್ದೇನೆ. ಆದರೂ ಸದನಕ್ಕೆ ಬರುತ್ತಿದ್ದಂತೆ ಧಿಕ್ಕಾರ ಎಂದು ಕೂಗಿ ನನ್ನ ಮನಸ್ಸಿಗೆ ಆಳವಾದ ಗಾಯ ಮಾಡಿದ್ದೀರಿ. ಈ ವಿಚಾರ ನನಗೆ ನಾಟಿದೆ ಎಂದು ಸಿಎಂ‌ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷದ ಧಿಕ್ಕಾರ ಆಳವಾದ ಗಾಯ ಮಾಡಿದೆ ಎಂದ ಸಿಎಂ ಡಿ.ಕೆ. ಶಿವಕುಮಾರ್‌

ಸಿಎಂ‌ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -

Profile
Siddalinga Swamy Aug 18, 2026 5:22 PM

ಬೆಂಗಳೂರು, ಆ.18: ಮೀನುಗಾರ ಕುಟುಂಬದಿಂದ ಬಂದು ಈಗಲೂ ತಮ್ಮ ವೃತ್ತಿಯಲ್ಲಿ ತೊಡಗಿರುವ ಸಜ್ಜನ ವ್ಯಕ್ತಿಯಾದ ಮಂಕಾಳ್ ವೈದ್ಯ ಅವರನ್ನು ಉಪ ಸಭಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದು ನೋಡಿ ಸಂತಸವಾಗಿದೆ ಎಂದು ಸಿಎಂ‌ ಡಿ.ಕೆ. ಶಿವಕುಮಾರ್ (CM DK Shivakumar) ಹೇಳಿದರು. ಉಪ ಸಭಾಧ್ಯಕ್ಷರ ಆಯ್ಕೆಯ ನಂತರ ವಿಧಾನಸಭೆಯಲ್ಲಿ ಅವರು ಮಂಗಳವಾರ ಮಾತನಾಡಿದರು.

ಉಪ ಸಭಾಧ್ಯಕ್ಷರ ಆಯ್ಕೆ ಸಂಬಂಧ ವಿರೋಧ ಪಕ್ಷದವರಿಗೂ ಅಭಿನಂದನೆ ತಿಳಿಸುತ್ತೇನೆ. ನಮ್ಮ ಪಕ್ಷದ ಲೆಡರ್ ಹೆಡ್‌ನಲ್ಲಿ ಸಭಾಪತಿ, ಉಪಸಭಾಪತಿಗಳ ಹೆಸರನ್ನು ಸೂಚಿಸಲಾಗಿತ್ತು ಎಂದು ವಿರೋಧ ಪಕ್ಷದವರು ಅವರದೇ ಆದ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಇದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದು ತಿಳಿಸಿದರು.

ಇದು ಅಪರೂಪದ ಸಂದರ್ಭ. ಮಂಕಾಳ್ ವೈದ್ಯ ನನಗೆ ಅತ್ಮೀಯ ಮಿತ್ರರು. ಅವರ ನಡತೆ, ಕುಟುಂಬವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ಪಯಣ ಬಹಳ ವಿಶೇಷವಾಗಿದೆ. ಪಕ್ಷೇತರ ಶಾಸಕರಾಗಿ ಆಯ್ಕೆಯಾದವರು. ನಂತರ ನಮ್ಮ ಪಕ್ಷದಿಂದ ಟಿಕೆಟ್ ನೀಡಲಾಯಿತು. ಬಂದರು, ಮೀನುಗಾರಿಕೆ ಸಚಿವರಾಗಿ ಮೂರು ವರ್ಷಗಳ ಕಾಲ ಉತ್ತಮವಾಗಿ ಕೆಲಸ ಮಾಡಿದವರು ಎಂದರು.

ನೀವು ಉಪ ಸಭಾಧ್ಯಕ್ಷ ಸ್ಥಾನ ದೊರೆಯಿತು ಎಂದು ಬೇಸರಿಸಿಕೊಳ್ಳಬೇಡಿ. ರುದ್ರಪ್ಪ ಲಮಾಣಿ ಇದೇ ಸ್ಥಾನದಲ್ಲಿ ಕುಳಿತು ಈಗ ಸಚಿವರಾಗಿದ್ದಾರೆ. ಆ ಸ್ಥಾನದಲ್ಲಿ ಕುಳಿತ ಎಸ್.ಎಂ. ಕೃಷ್ಣ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದರು. ಅದಕ್ಕೆ ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ ಎಂದರು.

ಮಂಕಾಳ್‌ ವೈದ್ಯ ಮನವೊಲಿಸಲು ಕಷ್ಟವಾಯಿತು

ಸಿಎಂ‌ ಮಾತಿನ ಮಧ್ಯೆ ಉಪಸಭಾಧ್ಯಕ್ಷರ ಆಯ್ಕೆ ಟೈಪಿಂಗ್ ತಪ್ಪಿನಿಂದ ಉಂಟಾಗಿದೆ ಎಂದು ಬಿಜೆಪಿಯ ಸುನೀಲ್ ಕುಮಾರ್ ಹೇಳಿದಾಗ, ಆಯಿತು, ನಿಮ್ಮ‌ ಮಾತನ್ನೂ ಒಪ್ಪೋಣ. ಆದರೆ ನಾವೆಲ್ಲರೂ ಸೇರಿ ಅವರನ್ನು ಆ ಸ್ಥಾನದಲ್ಲಿ ಕುಳ್ಳಿರಿಸಿದ್ದೇವೆ. ರಾಜಕೀಯದಲ್ಲಿ ಹಗ್ಗ ಜಗ್ಗಾಟ ನಿಮ್ಮಲ್ಲಿ, ನಮ್ಮಲ್ಲಿ ಎಲ್ಲ ಕಡೆಯೂ ನಡೆಯುತ್ತದೆ. ಆದರೆ ನಮ್ಮಲ್ಲಿ ಯಾವುದೇ ಜಗ್ಗಾಟ ಉಂಟಾಗಲಿಲ್ಲ. ಈ ಸ್ಥಾನಕ್ಕೆ ಮಂಕಾಳ್ ವೈದ್ಯ ಅವರನ್ನು ಮನವೊಲಿಸಲು ನಮಗೆ ಕಷ್ಟವಾಯಿತು ಎಂದರು.

ನನಗೆ ಅಶ್ವಥ್ ನಾರಾಯಣ್, ವಿಜಯೇಂದ್ರ ಅವರ ತಂಡದ ಮೇಲೆ ಬಹಳ ಬೇಜಾರಾಗಿದೆ. ಎರಡು ಮೂರು ದಿನ ಕುಳಿತುಕೊಂಡು ನಾನು ಹೇಳುವುದನ್ನು ಕೇಳಿ ಎಂದು ಹೇಳಿದ್ದೇನೆ. ಆದರೂ ಸದನಕ್ಕೆ ಬರುತ್ತಿದ್ದಂತೆ ದಿಕ್ಕಾರ ಎಂದು ಕೂಗಿ ನನ್ನ ಮನಸ್ಸಿಗೆ ಆಳವಾದ ಗಾಯ ಮಾಡಿದ್ದೀರಿ. ಈ ವಿಚಾರ ನನಗೆ ನಾಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಇರೋದನ್ನು ಹೇಳುತಿರುವೆ. ನನಗೆ ಆದ ನೋವು ನನಗೆ ಮಾತ್ರ ಗೊತ್ತು. ನಾವು ಯಾರೂ ಶಾಶ್ವತವಲ್ಲ. ಬೇರೆ ಪಕ್ಷದಿಂದ ಬಂದವರನ್ನು ಮಂತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿಯವರೂ ಮಾಡಿಕೊಂಡಿದ್ದರು. ಕೇಂದ್ರ‌ ಸರ್ಕಾರದಲ್ಲಿ ಎಷ್ಟು ‌ಜನರನ್ನು ಮಂತ್ರಿ ಮಾಡಿಲ್ಲ? ಯಡಿಯೂರಪ್ಪ ‌ಬೇರೆ ಪಕ್ಷವನ್ನೇ ಕಟ್ಟಿದರು. ನಂತರ ಬಿಜೆಪಿಗೆ ಬಂದು ಮತ್ತೆ ಸಿಎಂ ಆದರು.‌ ಅವರು ಆಗ ಏನೇನು ಹೇಳಿದ್ದರು ಎಂದು ಎಲ್ಲ ದಾಖಲೆಯಾಗಿ ಉಳಿದಿದೆ. ಯಡಿಯೂರಪ್ಪ ಅವರನ್ನು ಮತ್ತೆ ಅನಿವಾರ್ಯವಾಗಿ ಪಕ್ಷಕ್ಕೆ ವಾಪಸ್ ಕರೆದುಕೊಳ್ಳಲಾಯಿತು ಎಂದರು.

ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆಗಿ ಮಂಕಾಳ ವೈದ್ಯ, ಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ

ನಮ್ಮ ಸಭಾಧ್ಯಕ್ಷರು ಹಾಗೂ ಉಪ ಸಭಾಧ್ಯಕ್ಷರ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ನಾವೆಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ. ಕರ್ನಾಟಕವನ್ನು ಬಲಿಷ್ಠ ಮಾಡಿ ಭಾರತ ಬೆಳೆಯುವಂತೆ ಮಾಡೋಣ. ವೈದ್ಯ ಅವರು ಶುದ್ಧ ಮನಸ್ಸಿನ ಮಿತ್ರ. ಸಮುದ್ರದಲ್ಲಿ ಈಜುವ ಶಕ್ತಿ ಇದೆ ಅವರಿಗೆ. ಪ್ರಕೃತಿ ನಾಡಿನಲ್ಲಿ ಬೆಳೆದ ಸ್ನೇಹಿತ. ಅಲ್ಲಿನ ಪ್ರಕೃತಿ ಸಂಪತ್ತು ಬಳಸಿಕೊಳ್ಳಲು ಸಂಪುಟದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.