“ಸಿಜೆಪಿಯನ್ನು ಎಂದಿಗೂ ಬೆಂಬಲಿಸಲ್ಲ”: ಬಿಜೆಪಿ ವಿರುದ್ಧದ ಟೀಕೆಯ ನಡುವೆ ಅಣ್ಣಾಮಲೈ ಸ್ಪಷ್ಟನೆ
Annamalai Clarifies: ಸಿಜೆಪಿ ಪರವಾಗಿ ಬ್ಯಾಟಿಂಗ್ ಮಾಡಿದ್ದ ಕೆ. ಅಣ್ಣಾಮಲೈ ಈಗ ಉಲ್ಟಾ ಹೊಡೆದಿದ್ದಾರೆ. ಸಿಜೆಪಿಯನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ತಮ್ಮ ಹೇಳಿಕೆಗಳನ್ನು ಅಭಿಜೀತ್ ದೀಪ್ಕೆ ನೇತೃತ್ವದ ಸಂಘಟನೆಗೆ ನೀಡಿದ ಬೆಂಬಲವೆಂದು ಅರ್ಥೈಸಬಾರದು ಎಂದು ಅವರು ಸ್ಪಷ್ಟಪಡಿಸಿದರು.
ಅಣ್ಣಾಮಲೈ (ಸಂಗ್ರಹ ಚಿತ್ರ) -
ಚೆನ್ನೈ, ಅ.23: ಸಿಜೆಪಿ ಪರವಾಗಿ ಬ್ಯಾಟಿಂಗ್ ಮಾಡಿದ್ದ ಕೆ. ಅಣ್ಣಾಮಲೈ (Annamalai) ಈಗ ಉಲ್ಟಾ ಹೊಡೆದಿದ್ದಾರೆ. ಸಿಜೆಪಿಯನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನೆಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ಟೀಕಿಸುವ ಮೂಲಕ ಕೆ. ಅಣ್ಣಾಮಲೈ ಅವರ ಹೇಳಿಗೆ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ತಮ್ಮ ಹೇಳಿಕೆಗಳನ್ನು ಅಭಿಜೀತ್ ದೀಪ್ಕೆ ನೇತೃತ್ವದ ಸಂಘಟನೆಗೆ ನೀಡಿದ ಬೆಂಬಲವೆಂದು ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
‘ವಿ ದಿ ಲೀಡರ್ಸ್’ ಚಳವಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ, ಸಿಜೆಪಿ ಪ್ರತಿಭಟನೆಗಳ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ಟೀಕಿಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ಅವರು, ಸಿಜೆಪಿ ಪ್ರತಿಭಟನೆಗಳ ಹಿಂದಿನ ಉದ್ದೇಶಕ್ಕೂ ಬೆಂಬಲ ವ್ಯಕ್ತಪಡಿಸಿದರು. ಆದರೆ, ತಮ್ಮ ಹೇಳಿಕೆಗಳನ್ನು ಅಭಿಜೀತ್ ದೀಪ್ಕೆ ನೇತೃತ್ವದ ಸಂಘಟನೆಗೆ ನೀಡಿದ ಬೆಂಬಲವೆಂದು ಅರ್ಥೈಸಬಾರದು ಎಂದು ಸ್ಪಷ್ಟಪಡಿಸಿದರು.
ನಾವು ಎಂದಿಗೂ ಕಾಕ್ರೋಚ್ ಜನತಾ ಪಾರ್ಟಿಯನ್ನು ಬೆಂಬಲಿಸುವುದಿಲ್ಲ. ಅವರ ಕಾರ್ಯಸೂಚಿಯೇ ಬೇರೆ, ನಮ್ಮ ಕಾರ್ಯಸೂಚಿಯೇ ಬೇರೆ ಎಂದು ಅಣ್ಣಾಮಲೈ ಹೇಳಿದರು. ಇದೇ ವೇಳೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಹೋರಾಟ ನಡೆಸುವ ಹಕ್ಕಿದೆ ಎಂದು ಅವರು ಪ್ರತಿಪಾದಿಸಿದರು.
ಜ್ಞಾನೇಶ್ ಕುಮಾರ್ ವಜಾ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಮಹತ್ವದ ಹೇಳಿಕೆ
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಸಿಜೆಪಿ ಕಾರ್ಯಕರ್ತರ ವಿರುದ್ಧ ಅಕ್ಟೋಬರ್ 10ರಂದು ಪೊಲೀಸರು ಕೈಗೊಂಡ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದರು. ಈ ಹೇಳಿಕೆಯ ಬಳಿಕ ಅವರು ಬಿಜೆಪಿ ನಾಯಕರ ಟೀಕೆಗೆ ಗುರಿಯಾಗಿದ್ದರು.
ಇನ್ನು ಇದೇ ವೇಳೆ, ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿದ ಅಣ್ಣಾಮಲೈ, ದೇಶಭಕ್ತಿಯ ಬಗ್ಗೆ ಯಾರಿಂದಲೂ ಪಾಠ ಕಲಿಯುವ ಅಗತ್ಯ ತಮಗಿಲ್ಲ ಎಂದು ಒತ್ತಿಹೇಳಿದರು. ನನಗೆ ದೇಶದ ಹಲವು ರಾಜ್ಯಗಳಲ್ಲಿ ವಾಸ ಮಾಡಿ, ಕೆಲಸ ಮಾಡಿದ ಅನುಭವವಿದೆ. ಭಾರತದ ಏಕತೆ ಮತ್ತು ಸಾರ್ವಭೌಮತ್ವದ ಬಗ್ಗೆ ನನಗೆ ತಿಳಿದಿದೆ. ಆದ್ದರಿಂದ, ಯಾರೂ ನನಗೆ ದೇಶಭಕ್ತಿಯ ಬಗ್ಗೆ ಉಪನ್ಯಾಸ ನೀಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಸಿಜೆಪಿ ಪ್ರತಿಭಟನಾಕಾರರು ಯಾವುದೇ ತಪ್ಪು ಮಾಡಿದ್ದರೆ, ದ್ವೇಷದ ವಿಧಾನವನ್ನು ಅಳವಡಿಸಿಕೊಳ್ಳುವ ಬದಲು, ಅಧಿಕಾರಿಗಳು ಕಾನೂನಿನ ಪ್ರಕಾರ ಮುಂದುವರಿಯಬೇಕು ಎಂದು ಅಣ್ಣಾಮಲೈ ಒತ್ತಿ ಹೇಳಿದರು. ಅದೇ ರೀತಿ, ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ಸೇರಿದಂತೆ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಸಹಿಸಲಾಗುವುದಿಲ್ಲ ಎಂದು ಅಣ್ಣಾಮಲೈ ಹೇಳಿದರು. ಈ ವರ್ಷದ ಆರಂಭದಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿ, ತಮ್ಮದೇ ರಾಜಕೀಯ ಅಭಿಯಾನವನ್ನು ಅಣ್ಣಾಮಲೈ ಆರಂಭಿಸಿದ್ದಾರೆ.