Digital Arrest: ಡಿಜಿಟಲ್ ಆರೆಸ್ಟ್ ಹೆಸರಿನಲ್ಲಿ ಇಬ್ಬರು ಯುವತಿಯರನ್ನು ವಿವಸ್ತ್ರಗೊಳಿಸಿ ಕಿರುಕುಳ
Cyber Crime: ಮನಿ ಲಾಂಡರಿಂಗ್ ಆರೋಪದ ನೆಪದಲ್ಲಿ ವಿಡಿಯೋ ಕರೆ ಮಾಡಿದ ಸೈಬರ್ ವಂಚಕ, ದೈಹಿಕ ತಪಾಸಣೆ ನೆಪದಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಸತತ 9 ಗಂಟೆಗಳ ಕಾಲ ಕಿರುಕುಳ ನೀಡಿದ್ದಾನೆ. ಬಳಿಕ 58 ಸಾವಿರ ಹಣವನ್ನು ಸುಲಿಗೆ ಮಾಡಿದ್ದಲ್ಲದೆ, ಮತ್ತಷ್ಟು ಹಣ ನೀಡುವಂತೆ ಕಿರುಕುಳ ನೀಡಿದ್ದಾನೆ.


ಬೆಂಗಳೂರು: ಬೆಂಗಳೂರಿನಲ್ಲಿ ಇಬ್ಬರು ಯುವತಿಯರನ್ನು ‘ಡಿಜಿಟಲ್ ಆರೆಸ್ಟ್’ (digital arrest) ಮಾಡಿ, ದೈಹಿಕ ಪರೀಕ್ಷೆಯ ನೆಪದಲ್ಲಿ ವಿವಸ್ತ್ರಗೊಳಿಸಿ ಕಿರುಕುಳ (Harassment) ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಣ ಅಕ್ರಮ ವರ್ಗಾವಣೆ, ಕಳ್ಳ ಸಾಗಣೆಯ ಆರೋಪದ ಹೆಸರಿನಲ್ಲಿ ಕರೆ ಮಾಡಿದ್ದ ಸೈಬರ್ ವಂಚಕನೊಬ್ಬ (cyber crime), ಡಿಜಿಟಲ್ ಆರೆಸ್ಟ್ ಹೆಸರಿನಲ್ಲಿ ಬೆದರಿಸಿ ದೈಹಿಕ ತಪಾಸಣೆ ನೆಪದಲ್ಲಿ ಸ್ನೇಹಿತೆಯರನ್ನು ಬೆತ್ತಲೆಗೊಳಿಸಿ ಕಿರುಕುಳ ನೀಡಿದ್ದು, ಬಳಿಕ 58 ಸಾವಿರ ರೂಪಾಯಿ ಸುಲಿಗೆ ಮಾಡಿದ್ದಾನೆ. ಈ ಸಂಬಂಧ ಬೆಂಗಳೂರು (Bengaluru crime news) ಪೂರ್ವ ವಿಭಾಗದ ಸೈಬರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮನಿ ಲಾಂಡರಿಂಗ್ ಆರೋಪದ ನೆಪದಲ್ಲಿ ವಿಡಿಯೋ ಕರೆ ಮಾಡಿದ ಸೈಬರ್ ವಂಚಕ, ದೈಹಿಕ ತಪಾಸಣೆ ನೆಪದಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಸತತ 9 ಗಂಟೆಗಳ ಕಾಲ ಕಿರುಕುಳ ನೀಡಿದ್ದಾನೆ. ಬಳಿಕ 58 ಸಾವಿರ ಹಣವನ್ನು ಸುಲಿಗೆ ಮಾಡಿದ್ದಲ್ಲದೆ, ಮತ್ತಷ್ಟು ಹಣ ನೀಡುವಂತೆ ಕಿರುಕುಳ ನೀಡಿದ್ದಾನೆ. ಕೊನೆಗೆ ಈ ಇಬ್ಬರು ಯುವತಿಯರು ಬೆಂಗಳೂರು ಪೂರ್ವ ವಿಭಾಗ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆಯರು ನೀಡಿದ ದೂರಿನ ಮೇರೆಗೆ ಸೈಬರ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಥಾಯ್ಲೆಂಡ್‌ನಲ್ಲಿ ಬೋಧಕಿಯಾಗಿರುವ ಮಹಿಳೆ, ತನ್ನ ಬಾಲ್ಯ ಸ್ನೇಹಿತೆಯನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು. ಸ್ನೇಹಿತೆಯ ಮನೆಯಲ್ಲಿ ತಂಗಿದ್ದ ಮಹಿಳೆಗೆ ಜುಲೈ 17ರಂದು ಬೆಳಿಗ್ಗೆ 11ರ ಸುಮಾರಿಗೆ ಅನಾಮಧೇಯ ನಂಬರ್‌ನಿಂದ ಕರೆಯೊಂದು ಬಂದಿತ್ತು. ಕರೆ ಮಾಡಿದ್ದ ವ್ಯಕ್ತಿ, ತಾನು ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ‘ಜೆಟ್ ಏರ್‌ವೇಸ್‌ಗೆ ಸಂಬಂಧಿಸಿದ ಹಣ ವರ್ಗಾವಣೆಯಲ್ಲಿ ತಾವು ಭಾಗಿಯಾಗಿದ್ದೀರಿ’ ಎಂದು ಆರೋಪಿಸಿದ್ದ. ಅಲ್ಲದೇ ಅಕ್ರಮ ಹಣ ವರ್ಗಾವಣೆ, ಕಳ್ಳಸಾಗಣೆ ಹಾಗೂ ಹತ್ಯೆ ಪ್ರಕರಣದಲ್ಲೂ ತಮ್ಮ ಹೆಸರಿದೆ. ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳು ತಮ್ಮ ಬಳಿಯಿವೆ ಎಂದು ಹೇಳಿದ್ದ. ಇದರಿಂದ ಆಘಾತಕ್ಕೆ ಒಳಗಾದ ಮಹಿಳೆ, ತಾನು ಕೆಲವು ದಿನಗಳ ಹಿಂದೆಯಷ್ಟೇ ಭಾರತಕ್ಕೆ ಭೇಟಿ ನೀಡಿದ್ದೇನೆ. ಆ ಪ್ರಕರಣಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ವಿವರಿಸಿದ್ದರು. ಮಹಿಳೆಯ ಡೆಬಿಟ್ ಕಾರ್ಡ್ ನಂಬರ್ ಅನ್ನು ಸರಿಯಾಗಿ ಹೇಳಿದ್ದ ಆರೋಪಿ, ಇಬ್ಬರನ್ನೂ ಬಂಧಿಸುವುದಾಗಿ ಬೆದರಿಕೆ ಹಾಕಿದ್ದ’ ಎಂದು ಎಂದು ತಿಳಿದುಬಂದಿದೆ.
ಅದಾದ ಕೆಲವೇ ಹೊತ್ತಿನಲ್ಲಿ ಮಹಿಳೆಯರಿಗೆ ನಕಲಿ ಬಂಧನದ ವಾರಂಟ್ ಕಳುಹಿಸಿದ್ದ ವಂಚಕ, ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ವರ್ಗಾವಣೆ ಮಾಡುವಂತೆಯೂ ಬೆದರಿಕೆ ಹಾಕಿದ್ದ. ಹೆದರಿದ ಮಹಿಳೆಯರು, 58,477 ರೂ.ಗಳನ್ನು ಆರೋಪಿ ಹೇಳಿದ್ದ ಖಾತೆಗೆ ಹಾಕಿದ್ದರು. ಈ ಪ್ರಕರಣದಿಂದ ಕೈಬಿಡಬೇಕಾದರೆ ದೈಹಿಕ ತಪಾಸಣೆ ನಡೆಸುವುದು ಅಗತ್ಯವಿದೆ ಎಂದು ಹೇಳಿ ಇಬ್ಬರೂ ಸ್ನೇಹಿತೆಯರನ್ನು ಬೆತ್ತಲಾಗುವಂತೆ ಒತ್ತಾಯಿಸಿದ್ದ. ಮೈಮೇಲಿರುವ ಮಚ್ಚೆ ಅಥವಾ ಗುರುತುಗಳನ್ನು ತೋರಿಸುವಂತೆ ಸೂಚಿಸಿದ್ದ. ವಿಧಿ ಇಲ್ಲದೇ ಸಂತ್ರಸ್ತೆಯರು ಬೆತ್ತಲೆಯಾಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Cyber Fraud: ಸೈಬರ್ ವಂಚನೆ, ದಯಾನಾಯಕ್ ಹೆಸರು ಬಳಸಿ ಭೂವಿಜ್ಞಾನಿಯಿಂದ ಲಕ್ಷಾಂತರ ಹಣ ಸುಲಿಗೆ