OPS ಜಾರಿ ಮಾಡದಿದ್ದರೆ ಕರ್ನಾಟಕ ಬಂದ್; ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಎಚ್ಚರಿಕೆ
ರಾಜ್ಯದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ (OPS) ಜಾರಿ ಮಾಡದಿದ್ದರೆ ಕರ್ನಾಟಕ ಬಂದ್‌ಗೆ ಎಚ್ಚರಿಕೆ ನೀಡಲಾಗುವುದು ಎಂದು ರಾಜ್ಯ ಸರ್ಕಾರ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಟರಿ ಎಚ್ಚರಿಕೆ ನೀಡಿದ್ದಾರೆ.
ಸಂಗ್ರಹ ಚಿತ್ರ -
ದಾವಣಗೆರೆ: ರಾಜ್ಯದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ (OPS) ಜಾರಿ ಮಾಡದಿದ್ದರೆ ಕರ್ನಾಟಕ ಬಂದ್‌ಗೆ ಎಚ್ಚರಿಕೆ ನೀಡಲಾಗುವುದು ಎಂದು ರಾಜ್ಯ ಸರ್ಕಾರ (Government Employees Association) ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಟರಿ ಎಚ್ಚರಿಕೆ ನೀಡಿದ್ದಾರೆ. ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದ 2ನೇ ರಾಜ್ಯ ಕರ‍್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, " ಒಪಿಎಸ್ ಜಾರಿಗೊಳಿಸುವಂತೆ ನಾವು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ, ಪ್ರಯೋಜನ ಆಗಿಲ್ಲ. ಕಾರಣ, ಕರ್ನಾಟಕವನ್ನು ಬಂದ್ ಮಾಡಿಯಾದರೂ ಒಪಿಎಸ್ ಪಡೆದೇ ತೀರುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯಾಧ್ಯಕ್ಷ ಷಡಕ್ಷರಿಯನ್ನು ಅರೆಸ್ಟ್ ಮಾಡುತ್ತಾರೆ, ಜೈಲಿಗೆ ಕಳಿಸುತ್ತಾರೆ, ಕೆಲಸದಿಂದ ಸಸ್ಪೆಂಡ್ ಮಾಡುತ್ತಾರೆ ಎಂದು ಯಾರೂ ಹೆದರಿಕೊಳ್ಳಬೇಡಿ. ನಾವು ಇಂತಹ ಬೆದರಿಕೆಗಳನ್ನೆಲ್ಲಾ ಹಿಂದೆ ಸಾಕಷ್ಟು ನೋಡಿದ್ದೇವೆ. ನಾವು ಯಾರೂ ಹೆದರಿಕೊಳ್ಳುವ ಅಗತ್ಯವೇ ಇಲ್ಲ. ದೇವರು ನಮಗೆ ಜೀವ, ಜೀವನ ಕೊಟ್ಟಿದ್ದಾನೆ. ನನ್ನ ಸ್ವಸಾಮರ್ಥ್ಯದ ಆಧಾರದಲ್ಲಿ ಸರಕಾರಿ ಕೆಲಸ ಸಿಕ್ಕಿದೆ. ನನ್ನನ್ನು ಸರಕಾರಿ ನೌಕರಿಯಿಂದ ತೆಗೆಯಲಿಕ್ಕೆ ಯಾರಿಗೂ ಅಧಿಕಾರವಿಲ್ಲ ಎಂದು ಅವರು ಗುಡುಗಿದ್ದಾರೆ.
ನಮ್ಮ ಹೋರಾಟ ಹೇಗಿರಬೇಕು ಎಂದರೆ ಇಡೀ ಕರ್ನಾಟಕ ಬಂದ್ ಆಗಿ ಸರ್ಕಾರಿ ನೌಕರರು ಯಾರೂ ಕೆಲಸಕ್ಕೆ ಬರುತ್ತಿಲ್ಲ ಎಂದು ಗುಪ್ತಚರ ಇಲಾಖೆಯವರು ಸಿಎಂಗೆ ವರದಿ ನೀಡಬೇಕು. ಬಂದ್ ವೇಳೆ ಯಾರಾದರೂ ಕೆಲಸ ಮಾಡುತ್ತಿದ್ದರೆ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಕಚೇರಿಯ ಒಳಗೆ ಹೋಗಿ ಮುಲಾಜಿಲ್ಲದೆ ಅವರನ್ನು ಎಳೆದು ಹೊರಗೆ ಕರೆತರಬೇಕು ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಹೋಲಿಸಿದಲ್ಲಿ ದುಪ್ಪಟ್ಟು ಸರ್ಕಾರಿ ನೌಕರರನ್ನು ಹೊಂದಿರುವ ಮಹಾರಾಷ್ಟ್ರ ಪಶ್ಚಿಮ ಬಂಗಾಳದಲ್ಲಿ ಈಗಲೂ ಒಪಿಎಸ್ ಜಾರಿಯಲ್ಲಿದೆ. ಕೆಳಹಂತದ ನೌಕರರಿಗೆ ಹಳೆ ಪಿಂಚಣಿ ಯೋಜನೆ ಅನ್ವಯವಾಗುತ್ತದೆ. ಕರ್ನಾಟಕದಲ್ಲಿ ಒಪಿಎಸ್ ಜಾರಿ ಮಾಡಿದರೆ ವಾರ್ಷಿಕ ಕನಿಷ್ಠ 5000 ಕೋಟಿ ರೂ. ಉಳಿತಾಯವಾಗಲಿದೆ ಎಂಬ ಅಂಶವನ್ನು ಎನ್.ಪಿ.ಎಸ್. ಸಮಿತಿ ಅಧ್ಯಕ್ಷರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.