ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಡ್ಡ ಮತದಾನ ಮಾಡಿರೋದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ: ಜೋಶಿ

Pralhad Joshi: ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ತಮಗೆ ತಿಳಿದಿಲ್ಲ. ಆ ಬಗ್ಗೆ ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಅಡ್ಡ ಮತದಾನವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ: ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ) -

Profile
Siddalinga Swamy Jun 20, 2026 8:26 PM

ಹುಬ್ಬಳ್ಳಿ, ಜೂ.20: ವಿಧಾನ‌ ಪರಿಷತ್ ಚುನಾವಣೆಯಲ್ಲಿ ಶಾಸಕರು ಅಡ್ಡ ಮತದಾನ ಮಾಡಿರುವುದನ್ನು ಹೈಕಮಾಂಡ್ ಗಂಭೀರವಾಗಿ ತೆಗೆದುಕೊಂಡಿದ್ದು, ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದರು. ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಪಕ್ಷದಲ್ಲಿ ಇದ್ದುಕೊಂಡು ಶಾಸಕರು ಅಡ್ಡ ಮತದಾನ ಮಾಡಿರುವುದು ದುರದೃಷ್ಟಕರ. ಅಂಥವರು ಮುಂದೆ ಪಶ್ಚಾತ್ತಾಪ ಪಡುತ್ತಾರೆ ಎಂದು ಎಚ್ಚರಿಸಿದರು.

ಒಂದಿಬ್ಬರು ದುಡ್ಡಿನ ಆಮಿಷಕ್ಕೆ ಈ ರೀತಿ‌ ಮಾಡಿದಂತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಕಮಿಟಿ ಸಹ ರಚಿಸಲಾಗಿದೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ ಎಂದು ಹೇಳಿದರು.

ಶಾಸಕರು ಪಕ್ಷದಿಂದ ಆಯ್ಕೆ ಆಗಿರುತ್ತಾರೆ. ಶಾಸಕರು ಸ್ವಯಂ ಆಗಿ ಪಕ್ಷದ ಪರ ಮತದಾನ ಮಾಡುವುದು ಅವರ ಹಕ್ಕು. ಆದರೆ, ಹಣ, ಆಸೆ-ಆಮಿಷಕ್ಕೆ ಒಳಗಾಗಿ ದ್ರೋಹ ಬಗೆಯುವುದು ತಪ್ಪು. ಅಂಥವರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಯುತ್ತಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ದೆಹಲಿಗೆ ಬರುತ್ತಿದ್ದಾರೆ. ಹೈಕಮಾಂಡ್ ಜತೆ ಚರ್ಚಿಸಲಿದ್ದಾರೆ ಎಂದು ಹೇಳಿದರು.

ರಾಜ್ಯಾಧ್ಯಕ್ಷರ ಬದಲಾವಣೆ ಗೊತ್ತಿಲ್ಲ

ಇನ್ನು ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ತಮಗೆ ತಿಳಿದಿಲ್ಲ. ಆ ಬಗ್ಗೆ ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ತಮ್ಮ ಹೆಸರು ಕೇಳಿಬರುತ್ತಿದೆ? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆ ರಾಜನಾಥ ಸಿಂಗ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಅವರ ನಿರ್ದೇಶನದಂತೆ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದೆ. ಈಗ ಕೇಂದ್ರದಲ್ಲಿ ಮಂತ್ರಿ ಆಗಿದ್ದೇನೆ. ನಾನೇನು ರೇಸ್ ಅಲ್ಲಿ ಇಲ್ಲವೆಂದು ಜೋಶಿ ಸ್ಪಷ್ಟಪಡಿಸಿದರು.

ಪಶ್ಚಿಮ‌ ಬಂಗಾಳದಲ್ಲಿ ಟಿಎಂಸಿ, ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷಗಳ ಕುಟುಂಬ ರಾಜಕಾರಣ ಹಾಗೂ ಆ ಪಕ್ಷಗಳಲ್ಲಿ ಭವಿಷ್ಯವಿಲ್ಲದ ಕಾರಣ ಅಲ್ಲಿಯ ಶಾಸಕರು, ಸಂಸದರು ಬಿಜೆಪಿಗೆ ಬರುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಭ್ರಷ್ಟಾಚಾರ, ಅತ್ಯಾಚಾರ, ಜನರ ಸುಲಿಗೆ ಹಾಗೂ ಕುಟುಂಬ ರಾಜಕಾರಣದಿಂದ ಜನರು ಬೇಸತ್ತಿದ್ದರು. ಇಷ್ಟಾದರೂ ಮಮತಾ ಬ್ಯಾನರ್ಜಿ ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಹಾಗಾಗಿ ಈಗ ಶಾಸಕರು, ಸಂಸದರು ಒಬ್ಬೊಬ್ಬರೇ ಪಕ್ಷ ಬಿಡುತ್ತಿದ್ದಾರೆ ಎಂದು ಜೋಶಿ ಆರೋಪಿಸಿದ್ದಾರೆ.

ಪ್ರಿಯಾಂಕ್ ಖರ್ಗೆ 'ಹಳೇ ರೇಡಿಯೋ'

ನೂರು ವರ್ಷ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಯಾವುದೇ ನೋಂದಣಿ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಸಚಿವ ಪ್ರಿಯಾಂಕ ಖರ್ಗೆ ಅವರು 'ಹಳೇಯ ರೆಡಿಯೋ ಹಾಗೇ'. ಹಾಡಿದ್ದನ್ನೇ ರಿಪೀಟ್ ರಿಪೀಟ್ ಹಾಡುತ್ತಿರುತ್ತಾರೆ. ಹಾಗಾಗಿ ಅವರ ಮಾತುಗಳಿಗೆ ಬೆಲೆಯೇ ಇಲ್ಲ ಎಂದು ಪ್ರಲ್ಹಾದ್‌ ಜೋಶಿ ತಿರುಗೇಟು ನೀಡಿದರು.

ಪ್ರಿಯಾಂಕ್ ಖರ್ಗೆ ಅವರು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಿಕೊಳ್ಳಲು ಏನೇನೋ ಮಾಡುತ್ತಿದ್ದಾರೆ. ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವುದು ಅಪ್ರಸ್ತುತ. ಈಗಾಗಲೇ ಸಂಘದ ಹಿರಿಯರು ಉತ್ತರಿಸಿದ್ದಾರೆ ಎಂದು ಜೋಶಿ ಸ್ಪಷ್ಟಪಡಿಸಿದರು.‌

ಮಾವು ಬೆಳೆಗಾರರಿಗೆ ನೆರವು ನೀಡಿ: ಕೃಷಿ ಸಚಿವರಿಗೆ ಪ್ರಲ್ಹಾದ್‌ ಜೋಶಿ ಪತ್ರ

ಭ್ರಷ್ಟಾಚಾರಯುಕ್ತ ಸರ್ಕಾರವಿದು

ಬೆಂಗಳೂರನ್ನು ಅಧೋಗತಿಗೆ ತಂದ ಡಿಕೆ ಶಿವಕುಮಾರ್ ಸಿಎಂ ಆಗಿದ್ದಾರೆ. ಮುಂದೆ ರಾಜ್ಯವೂ ಅದೇ ಸ್ಥಿತಿಗೆ ಬರಲಿದೆ. "ಕರ್ನಾಟಕ ಸರ್ಕಾರ ಭ್ರಷ್ಟಾಚಾರಮುಕ್ತ ಅಲ್ಲ; ಭ್ರಷ್ಟಾಚಾರಯುಕ್ತ ಸರ್ಕಾರವಾಗಿದೆ" ಎಂಬುದನ್ನು ಸ್ವತಃ ಆ ಪಕ್ಷದ ಶಾಸಕರೇ ಆರೋಪಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.