Heart Attack: ಎನ್‌ಸಿಸಿ ದೈಹಿಕ ಪರೀಕ್ಷೆ ವೇಳೆ ಹೃದಯಾಘಾತ; ಧಾರವಾಡದ ಐಐಟಿ ವಿದ್ಯಾರ್ಥಿ ಸಾವು
Dharwad News: ಎರಡು ದಿನಗಳ ಹಿಂದೆ ಧಾರವಾಡದ ಐಐಟಿ ಕ್ಯಾಂಪಸ್‌ನಲ್ಲಿ ಎನ್‌ಸಿಸಿ ಆಯ್ಕೆಗಾಗಿ ವಿದ್ಯಾರ್ಥಿಗಳಿಗೆ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬಿಹಾರ ಮೂಲದ ವಿದ್ಯಾರ್ಥಿ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.


ಧಾರವಾಡ: ಧಾರವಾಡದ ಐಐಟಿಯಲ್ಲಿ ಎನ್‌ಸಿಸಿ ಆಯ್ಕೆಗೆ ದೈಹಿಕ ಪರೀಕ್ಷೆ ವೇಳೆ ಹೃದಯಾಘಾತದಿಂದ ವಿದ್ಯಾರ್ಥಿಯೊಬ್ಬ ಕುಸಿದುಬಿದ್ದು ಮೃತಪಟ್ಟಿರುವ ಘಟನೆ (Heart Attack) ನಡೆದಿದೆ. ಬಿಹಾರ ಮೂಲದ ಅಸ್ತಿತ್ವ ಗುಪ್ತಾ (20) ಮೃತ ವಿದ್ಯಾರ್ಥಿ. ಈತ ಮೆಕ್ಯಾನಿಕಲ್ ಮೆಟೀರಿಯಲ್ಸ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ (ಎಂ-ಟೆಕ್) ವ್ಯಾಸಂಗ ಮಾಡುತ್ತಿದ್ದ.
ಎರಡು ದಿನಗಳ ಹಿಂದೆ ಐಐಟಿ ಕ್ಯಾಂಪಸ್‌ನಲ್ಲಿ ಎನ್‌ಸಿಸಿ ಆಯ್ಕೆಗಾಗಿ ವಿದ್ಯಾರ್ಥಿಗಳಿಗೆ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಸ್ತಿತ್ವ ಗುಪ್ತಾ ಓಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾನೆ. ಕೂಡಲೇ ಕ್ಯಾಂಪಸ್‌ನ ವೈದ್ಯಕೀಯ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ನಂತರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಸಂಜೆವರೆಗೂ ಆರೋಗ್ಯವಾಗಿಯೇ ಇದ್ದ ವಿದ್ಯಾರ್ಥಿ ರಾತ್ರಿ ವೇಳೆಗೆ ಮತ್ತೆ ಹೃದಯಾಘಾತವಾಗಿದೆ. ಈ ವೇಳೆ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡುತ್ತಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆಂದು ತಿಳಿದುಬಂದಿದೆ.
ಈ ನಡುವೆ ಅಧಿಕಾರಿಗಳು ಮೃತ ವಿದ್ಯಾರ್ಥಿಯ ಪೋಷಕರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದು, ಬಿಹಾರದ ಹುಟ್ಟೂರು ಗೋರ್ಗಾನ್‌ನಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಪೋಷಕರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Self Harming Case: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಪುಟ್ಟ ಕಂದಮ್ಮನಿಗೆ ಬೆಂಕಿ ಹಚ್ಚಿ ಮಹಿಳೆ ಆತ್ಮಹತ್ಯೆ
ವೈದ್ಯರು ಇದು ಸಹಜ ಸಾವು ಎಂದು ಹೇಳಿದ್ದು, ಮರಣೋತ್ತರ ಪರೀಕ್ಷೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಮೃತನ ಪೋಷಕರು ಸಹ ಪೊಲೀಸರಿಗೆ ಹೇಳಿಕೆ ನೀಡಿದ್ದು, ತಮ್ಮ ಮಗನ ಸಾವಿನ ಯಾವುದೇ ಪಿತೂರಿ ಇಲ್ಲ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.