ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಲ್ಲಿಕಾರ್ಜುನ ಖರ್ಗೆ ಸೇರಿ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧ ಆಯ್ಕೆ

Rajya Sabha: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಕಣದಲ್ಲಿ ಯಾವುದೇ ಸ್ಪರ್ಧಿಗಳಿಲ್ಲದ ಕಾರಣ ಮೂವರು ಕಾಂಗ್ರೆಸ್ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿಖಾನ್, ಪವನ್ ಖೇರಾ ಹಾಗೂ ಬಿಜೆಪಿಯ ಪ್ರೊ. ಎಂ. ನಾಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧ ಆಯ್ಕೆ

ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದ ಮಲ್ಲಿಕಾರ್ಜುನ ಖರ್ಗೆ -

Ramesh Ballamoole
Ramesh Ballamoole Jun 11, 2026 5:46 PM

ಬೆಂಗಳೂರು, ಜೂ. 11: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ (Rajya Sabha) ನಾಲ್ಕು ಸ್ಥಾನಗಳಿಗೆ ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಕಣದಲ್ಲಿ ಯಾವುದೇ ಸ್ಪರ್ಧಿಗಳಿಲ್ಲದ ಕಾರಣ ಮೂವರು ಕಾಂಗ್ರೆಸ್ (Congress) ಮತ್ತು ಓರ್ವ ಬಿಜೆಪಿ (BJP) ಅಭ್ಯರ್ಥಿ ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿಖಾನ್, ಪವನ್ ಖೇರಾ ಹಾಗೂ ಬಿಜೆಪಿಯ ಪ್ರೊ. ಎಂ. ನಾಗರಾಜು ಅವಿರೋಧವಾಗಿ ಆಯ್ಕೆಯಾದವರು.

ʼʼಪ್ರತಿಸ್ಪರ್ಧಿಗಳಿಲ್ಲದ ಕಾರಣ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿಖಾನ್, ಪವನ್ ಖೇರಾ ಹಾಗೂ ಪ್ರೊ. ಎಂ. ನಾಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆʼʼ ಎಂದು ವಿಧಾನಸಭೆ ಕಾರ್ಯದರ್ಶಿ, ಚುನಾವಣಾಧಿಕಾರಿ ಕೆ.ಎಂ. ವಿಶಾಲಾಕ್ಷಿ ಘೋಷಿಸಿದ್ದಾರೆ.

ಡಿ.ಕೆ. ಸುರೇಶ್‌ ಅವರ ಎಕ್ಸ್ ಪೋಸ್ಟ್‌:



ರಾಜ್ಯಸಭೆಗೆ ಆಯ್ಕೆಯಾದ ನಾಲ್ವರ ಪರಿಚಯ

ಮಲ್ಲಿಕಾರ್ಜುನ ಖರ್ಗೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ಜಿಲ್ಲೆಯಿಂದ ರಾಜಕೀಯ ಜೀವನ ಆರಂಭಿಸಿದರು. ಸುಮಾರು 40 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಅವರು 9 ವಿಧಾನಸಭೆ ಹಾಗೂ 2 ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಭೀಮ್ ಸೇನೆಯ ಕಲಬುರಗಿ ಜಿಲ್ಲಾಧ್ಯಕ್ಷರಾಗಿದ್ದ ಖರ್ಗೆ 1969ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಭಾರತದ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ, ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 3 ಬಾರಿ ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ಅವರ ಹೆಸರು ಕೇಳಿ ಬಂದಿತ್ತು.

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ; ರಾಹುಲ್‌ ಗಾಂಧಿ, ಸಿಎಂ ಡಿಕೆಶಿ, ಸಿದ್ದರಾಮಯ್ಯ ಸಾಥ್

ಮನ್ಸೂರ್ ಅಲಿ ಖಾನ್: ಮಂಡ್ಯ ಮೂಲದ ಕಾಂಗ್ರೆಸ್‌ ಹಿರಿಯ ನಾಯಕ ಕೆ. ರೆಹಮಾನ್‌ ಖಾನ್‌ ಅವರ ಪುತ್ರ ಮನ್ಸೂರ್ ಅಲಿ ಖಾನ್. 2023ರ ತೆಲಂಗಾಣ ವಿಧಾನಸಭಾ ಚುನಾವಣೆ ಮತ್ತು 2026ರ ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ಮನ್ಸೂರ್ ಎಐಸಿಸಿಯ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಅವರು ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಆದರೆ ಬಿಜೆಪಿಯ ಪಿ.ಸಿ. ಮೋಹನ್ ವಿರುದ್ದ ಪರಾಭವಗೊಂಡಿದ್ದರು.

ಪವನ್ ಖೇರಾ: ದೆಹಲಿ ಮೂಲದ ಪವನ್‌ ಖೇರಾ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯರಾಗಿದ್ದು, ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಅನೇಕ ಪಾಸ್‌ಪೋರ್ಟ್‌ಗಳನ್ನು ಮತ್ತು ಅಮೆರಿಕದಲ್ಲಿ ಬಹಿರಂಗಪಡಿಸದ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಖೇರಾ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿ ಸಂಚಲನ ಮೂಡಿಸಿದ್ದರು.

ನನ್ನ ಮತ್ತು ಮೋದಿಯವರ ನಡುವಿನ ಬಾಂಧವ್ಯ ರಾಜ್ಯಸಭೆ ಸ್ಥಾನವನ್ನು ಮೀರಿದ್ದು: ಎಚ್.ಡಿ.ದೇವೇಗೌಡ

ಪ್ರೊ. ಎಂ. ನಾಗರಾಜ್: ಪ್ರೊ. ಎಂ. ನಾಗರಾಜ್ ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿರುವ ಕರ್ನಾಟಕ ಬಿಜೆಪಿಯ ಹಿರಿಯ ಮುಖಂಡರು. ಮೂಲತಃ ಹುಬ್ಬಳ್ಳಿ-ಧಾರವಾಡದವರಾದ ನಾಗರಾಜ್, ಶೈಕ್ಷಣಿಕ ವಲಯದಿಂದ ಬಂದವರಾಗಿದ್ದು, ದೀರ್ಘಕಾಲ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇದರೊಂದಿಗೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಆಡಳಿತಾತ್ಮಕ ಅನುಭವ ಇವರಿಗಿದೆ. ಜನಸಂಘದ ಸ್ಥಾಪಕ‌ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಮನೋತ್ಸವ ವರ್ಷದ ನಿಮಿತ್ತ ಪ್ರತಿ ಜಿಲ್ಲೆಯಲ್ಲೂ ಬಿಜೆಪಿಯ ಸ್ವಂತ ಕಾರ್ಯಾಲಯ ನಿರ್ಮಿಸುವ ಅಮಿತ್ ಶಾ ಅವರ ಕನಸಿನ ಯೋಜನೆಯಲ್ಲಿ ಭವನ ನಿರ್ಮಾಣ ಸಮಿತಿಗೆ ಕರ್ನಾಟಕದ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.