Chennamma's Funeral: ಹೊಳೆನರಸೀಪುರದ ಮಾವಿನಕೆರೆಯಲ್ಲಿ ನೆರವೇರಿದ ಚೆನ್ನಮ್ಮ ಅಂತ್ಯಸಂಸ್ಕಾರ; ತಾಯಿ ಕೆನ್ನೆಗೆ ಮುತ್ತಿಟ್ಟು ಕಣ್ಣೀರಿಟ್ಟ ಎಚ್‌ಡಿಕೆ, ರೇವಣ್ಣ
ಹೊಳೆನರಸೀಪುರದ ಹರದನಹಳ್ಳಿ ಸಮೀಪದ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಚೆನ್ನಮ್ಮ ಅವರ ಅಂತಿಮ ವಿಧಿವಿಧಾನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸೇರಿ ರಾಜ್ಯ, ಕೇಂದ್ರದ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಹೊಳೆನರಸೀಪುರದ ಮಾವಿನಕೆರೆ ಬೆಟ್ಟದ ಬಳಿ ಚೆನ್ನಮ್ಮ ಅಂತ್ಯಕ್ರಿಯೆ ಸೋಮವಾರ ನಡೆಯಿತು. -
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ (Chennamma's Funeral) ಅವರ ಅಂತ್ಯಸಂಸ್ಕಾರವು ಜಿಲ್ಲೆಯ ಹೊಳೆನರಸೀಪುರದ ಹರದನಹಳ್ಳಿ ಸಮೀಪದ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸೋಮವಾರ ಸಂಜೆ ಕುಟುಂಬಸ್ಥರು, ಬಂಧುಗಳು ಹಾಗೂ ಗಣ್ಯರು ಸೇರಿ ಸಾವಿರಾರು ಮಂದಿ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಒಕ್ಕಲಿಗ ಸಂಪ್ರದಾಯದಂತೆ, ಬೆಂಗಳೂರು ಜೆಪಿ ನಗರದ ಶ್ರೀ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಕಣ್ಣನ್ ಸ್ವಾಮೀಜಿ ಮಾರ್ಗದರ್ಶನದಲ್ಲಿ ಚೆನ್ನಮ್ಮ ಅವರ ಕಿರಿಯ ಪುತ್ರ ಎಚ್.ಡಿ.ರಮೇಶ್ ಅಂತಿಮ ವಿಧಿವಿಧಾನ ನೆರವೇರಿಸಿದರು.

ಅಂತ್ಯಕ್ರಿಯೆಗೂ ಮುನ್ನ ಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿ.ಸೋಮಣ್ಣ, ಸಚಿವರಾದ ಕೃಷ್ಣಬೈರೇಗೌಡ, ಕೆ.ಜೆ.ಜಾರ್ಜ್, ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಡಿಜಿ-ಐಜಿಪಿ ಎಂ.ಎ.ಸಲೀಂ, ನಿರ್ಮಲಾನಂದ ಸ್ವಾಮೀಜಿ, ನಂಜಾವಧೂತ ಸ್ವಾಮಿ, ರಂಭಾಪುರಿ ಶ್ರೀಗಳು, ಮಾದಾರ ಚೆನ್ನಯ್ಯ ಸ್ವಾಮೀಜಿ ಸೇರಿ ವಿವಿಧ ಗಣ್ಯರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.


ಬಳಿಕ ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಪೊಲೀಸರಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಮೃತರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಈ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಅವರು ರಾಷ್ಟ್ರಧ್ವಜವನ್ನು ಎಚ್.ಡಿ.ದೇವೇಗೌರಿಗೆ ಹಸ್ತಾಂತರಿಸಿ, ಗೌರವ ಸಲ್ಲಿಸಿದರು. ಅಂತಿಮ ದರ್ಶನದ ವೇಳೆ ದೇವೇಗೌಡರು ಸೇರಿ ಕುಟುಂಬಸ್ಥರು ಭಾವುಕರಾದರು. ಈ ವೇಳೆ ತಾಯಿ ಕೆನ್ನೆಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಅವರು ಮುತ್ತಿಟ್ಟು ಕಣ್ಣೀರಿಟ್ಟರು.


ಇದಕ್ಕೂ ಮೊದಲು ಹೊಳೆನರಸೀಪುರದ ನಿವಾಸದಲ್ಲಿ ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದಾದ ಬಳಿಕ ಹೊಳೆನರಸೀಪುರದಿಂದ ಹರದನಹಳ್ಳಿವರೆಗೆ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಯಿತು. ಬಳಿಕ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲೇ ಏಕೆ ಅಂತ್ಯಕ್ರಿಯೆ?
ಚೆನ್ನಮ್ಮ ಅವರು ದೀರ್ಘಕಾಲ ಹೊಳೆನರಸೀಪುರ ಭಾಗದಲ್ಲೇ ಇದ್ದವರು. ಹಳೆಕೋಟೆ, ಮುತ್ತಿಗೆ ಹಿರೀಹಳ್ಳಿ, ಹರದನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳು ಹಾಗೂ ಗ್ರಾಮಸ್ಥರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಇನ್ನು ಹರದನಹಳ್ಳಿಯು ದೇವೇಗೌಡರ ತವರೂರು ಮತ್ತು ಚೆನ್ನಮ್ಮನವರು ಪತಿಯೊಂದಿಗೆ ತಮ್ಮ ಬೇರುಗಳನ್ನು ಗಟ್ಟಿಯಾಗಿರಿಸಿಕೊಂಡಿದ್ದ ಸ್ಥಳವಾಗಿದೆ. ಅವರ ಒಡೆತನದ 32 ಎಕರೆ ವಿಶಾಲವಾದ ಕೃಷಿ ಜಮೀನು ಬೆಟ್ಟದ ತಪ್ಪಲಿನಲ್ಲಿದೆ. ಮಾವಿನಕೆರೆ ರಂಗನಾಥಸ್ವಾಮಿ ಬಗ್ಗೆ ಚೆನ್ನಮ್ಮನವರಿಗೆ ಅಪಾರವಾದ ಭಕ್ತಿ ಇತ್ತು. ಹೀಗಾಗಿ ಇದೇ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.