Hasanamba Jathra 2025: ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
CM Siddaramaiah: ಹಾಸನ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಶಿಷ್ಟಾಚಾರದ ವಾಹನದಲ್ಲಿ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸ್ವಾಗತಿಸಿದರು. ಸಿದ್ದರಾಮಯ್ಯ ಅವರ ಜತೆ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಆಗಮಿಸಿದ್ದರು.

-

ಹಾಸನ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹಾಸನಾಂಬ ದೇವಿ ದೇಗುಲಕ್ಕೆ (Hasanamba Jathra 2025) ಭೇಟಿ ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಹಾಸನದ ಅಧಿದೇವತೆ ಹಾಸನಾಂಬೆ ದೇವಿ ದರ್ಶನ ಪಡೆದರು. ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಶಿಷ್ಟಾಚಾರದ ವಾಹನದಲ್ಲಿ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸ್ವಾಗತಿಸಿದರು. ಸಿದ್ದರಾಮಯ್ಯ ಅವರ ಜತೆ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಆಗಮಿಸಿದ್ದರು. ಜಿಲ್ಲಾಡಳಿತ ಸಿಎಂ ಅವರನ್ನು ಮಂಗಳವಾದ್ಯಗಳೊಂದಿಗೆ ದೇವಿ ದರ್ಶನಕ್ಕೆ ಕರೆದೊಯ್ಯಿತು.
ಕಳೆದ ಎರಡು ವರ್ಷಗಳಿಂದ ಸಿಎಂ ಸಿದ್ದರಾಮಯ್ಯ ದೇವಿ ದರ್ಶನ ಪಡೆಯುತ್ತಿದ್ದು, ಈ ಮೂಲಕ ಮೂರನೇ ಬಾರೀ ದೇವಿ ದರ್ಶನ ಪಡೆದುಕೊಂಡಿದ್ದಾರೆ. ದೇವಿ ದರ್ಶನ ಪಡೆದು ದರ್ಬಾರ್ ಗಣಪತಿ ಹಾಗೂ ಸಿದ್ದೇಶ್ವರಸ್ವಾಮಿ ದೇವರ ದರ್ಶನ ಪಡೆದರು.
ಇದೇ ವೇಳೆ ಶಾಸಕ ಹಾಗೂ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಡಿಸಿ ಕೆ.ಎಸ್.ಲತಾಕುಮಾರಿ, ದಕ್ಷಿಣ ವಯಲ ಐಜಿಪಿ, ಬೋರಲಿಂಗಯ್ಯ ಎಸ್ಪಿ ಮಹಮದ್ ಸುಜೀತಾ ಉಪಸ್ಥಿತರಿದ್ದರು. ಸಿಎಂ ಆಗಮನದ ಹಿನ್ನೆಲೆ ದೇವಾಲಯದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.

ನಾಯಕತ್ವ ಬದಲಾವಣೆಯಾಗಲಿ ಬಗ್ಗೆ ಚರ್ಚೆಯಾಗಿಲ್ಲ
ಹಾಸನ: ಸಂಪುಟ ಸಹೋದ್ಯೋಗಿಗಳಿಗೆ ನಾನು ಮೊನ್ನೆ ಆಯೋಜಿಸಿದ್ದ ಡಿನ್ನರ್ ಪಾರ್ಟಿಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಆಗಾಗ ಹೀಗೆ ಪಾರ್ಟಿ ಕೊಡುತ್ತಿರುತ್ತೇನೆ, ಆಗಾಗ ಸೇರುತ್ತೀವಿ, ಊಟ ಮಾಡುತ್ತೀವಿ, ಗೆಟ್ ಟುಗೆದರ್ ಮಾಡುತ್ತಿರುತ್ತೇವೆ, ಪಕ್ಷದ ವಿಚಾರವಾಗಿ ಚರ್ಚೆ ಮಾಡುತ್ತೀವೆ, ಅದು ಬಿಟ್ಟರೆ ಔತಣಕೂಟದಲ್ಲಿ ನಾಯಕತ್ವ ಬದಲಾವಣೆಯಾಗಲಿ, ಬೇರೆ ರಾಜಕೀಯ ವಿಚಾರಗಳು ಚರ್ಚೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಹೈಕಮಾಂಡ್ ಈಗ ಬಿಹಾರ ಚುನಾವಣೆ ಮೇಲೆ ಗಮನ ಹರಿಸಿದ್ದಾರೆ. ಆಮೇಲೆ ಹೈಕಮಾಂಡ್ ಏನು ಹೇಳುತ್ತಾರೆ ನೋಡೋಣ ಎಂದರು.
ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ
ನವೆಂಬರ್‌ನಲ್ಲಿ ರಾಜ್ಯ ಸರ್ಕಾರದಲ್ಲಿ ಕ್ರಾಂತಿಯಾಗುತ್ತದೆ ಎಂಬ ಚರ್ಚೆ ನಡೆಯುತ್ತಿದೆಯಲ್ಲವೇ ಎಂದು ಸುದ್ದಿಗಾರರು ಕೇಳಿದಾಗ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ, ಯಾವ ಶಾಸಕರೂ ಇದರ ಬಗ್ಗೆ ಅಪಸ್ವರ, ಕೂಗು ಎತ್ತುತ್ತಿಲ್ಲ, ಎಲ್ಲ ನೀವೇ ಊಹಿಸಿಕೊಳ್ಳುತ್ತಿದ್ದೀರಷ್ಟೆ ಎಂದರು.
ಈ ಸುದ್ದಿಯನ್ನೂ ಓದಿ | CM Siddaramaiah: ವಿಜ್ಞಾನ ಓದಿಯೂ ಮೌಢ್ಯ ನಂಬುತ್ತೀರಿ ಅಂದರೆ ನೀವು ಓದಿದ್ದೇ ದಂಡ ತಾನೇ- ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ನಿಷೇಧ ವಿಚಾರದ ಬಗ್ಗೆ ಕೇಳಿದಾಗ ಆರ್‌ಎಸ್‌ಎಸ್ ಮಾತ್ರವಲ್ಲ ಯಾವುದೇ ಸಂಘಟನೆಗಳು ಶಾಲೆ, ಕಾಲೇಜು ಆವರಣದಲ್ಲಿ, ಪಾರ್ಕ್‌ಗಳು ಅಥವಾ ಇತರ ಸಾರ್ವಜನಿಕ ಜಾಗದಲ್ಲಿ ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮಾಡಬಾರದು ಎಂದು ಹೇಳಿದ್ದೇವೆ. ತಮಿಳುನಾಡು ಸರ್ಕಾರ ಯಾವ ರೀತಿ ನಿಷೇಧ ಹೇರಿದೆ ಎಂದು ತಿಳಿದುಕೊಳ್ಳಲು ವರದಿ ತರಿಸಿಕೊಳ್ಳುತ್ತಿದ್ದೇವೆ ಎಂದರು.