ವೋಟ್ ಚೋರಿ ವಿರುದ್ಧ ಕಾಂಗ್ರೆಸ್ ಸಮರ; ಬಿಜೆಪಿ ವಿರುದ್ಧ ಮಧ್ಯಪ್ರದೇಶದ ಮಾಜಿ ಸಚಿವ ಕಲ್ಮೇಶ ಪಟೇಲ್ ವಾಗ್ದಾಳಿ
Haveri News: ಕಾಂಗ್ರೆಸ್ ಪಕ್ಷ ದೇಶದ ಪ್ರಜಾಪ್ರಭುತ್ವ ಹಾಗೂ ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ರಕ್ಷಿಸಲು ಹೋರಾಡುತ್ತ ಬಂದಿದೆ. ಮತದಾನದ ಪಾವಿತ್ರ್ಯ ಕಾಪಾಡಲು ‘ವೋಟ್ ಬಚಾವೋ, ದೇಶ ಬಚಾವೋʼ ಅಭಿಯಾನದ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಮಧ್ಯಪ್ರದೇಶದ ಮಾಜಿ ಸಚಿವ ಕಲ್ಮೇಶ ಪಟೇಲ್ ತಿಳಿಸಿದ್ದಾರೆ.
-
ಹಾವೇರಿ, ಅ.27: ದೇಶದಲ್ಲಿ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಕಾಂಗ್ರೆಸ್ ನಿರಂತರ ಹೋರಾಟ ನಡೆಸುತ್ತಿದ್ದು, ಮತದಾರರ ಹಕ್ಕುಗಳ ಸಂರಕ್ಷಣೆಗಾಗಿ ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಜನಜಾಗೃತಿ ಮೂಡಿಸಲಾಗುವುದು ಎಂದು ಮಧ್ಯಪ್ರದೇಶದ ಮಾಜಿ ಸಚಿವ ಕಲ್ಮೇಶ ಪಟೇಲ್ ಹೇಳಿದರು. ನಗರದ (Haveri News) ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ‘ವೋಟ್ ಬಚಾವೋ, ದೇಶ ಬಚಾವೋʼ ಅಭಿಯಾನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಳೆದ 12 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕಪ್ಪುಹಣ ನಿಯಂತ್ರಣ, ಯುವಕರಿಗೆ ಉದ್ಯೋಗ, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಅಧಿಕಾರ ಉಳಿಸಿಕೊಳ್ಳಲು ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸಲಾಗುತ್ತಿದೆ ಎಂಬ ಆರೋಪಗಳು ಗಂಭೀರವಾಗಿದ್ದು, ಮತದಾನದ ಹಕ್ಕು ಕಸಿದುಕೊಳ್ಳುವ ಪ್ರಯತ್ನಗಳ ವಿರುದ್ಧ ಜನರು ಜಾಗೃತರಾಗಬೇಕು ಎಂದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಕುರಿತು ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಮತದಾರರ ಪಟ್ಟಿಯಿಂದ ಅರ್ಹ ಮತದಾರರು ಹೊರಗುಳಿಯದಂತೆ ನೋಡಿಕೊಳ್ಳುವುದು ಪ್ರಜಾಪ್ರಭುತ್ವದ ರಕ್ಷಣೆಗೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ಉಳಿಸುವ ಹೋರಾಟ
ಕಾಂಗ್ರೆಸ್ ಪಕ್ಷ ದೇಶದ ಪ್ರಜಾಪ್ರಭುತ್ವ ಹಾಗೂ ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ರಕ್ಷಿಸಲು ಹೋರಾಡುತ್ತ ಬಂದಿದೆ. ಮತದಾನದ ಪಾವಿತ್ರ್ಯ ಕಾಪಾಡಲು ‘ವೋಟ್ ಬಚಾವೋ, ದೇಶ ಬಚಾವೋ’ ಅಭಿಯಾನದ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ವೆಂಕಟೇಶ, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಶಾಸಕ ಬಸವರಾಜ ಶಿವಣ್ಣನವರ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಡಿ. ಬಸವರಾಜ, ಪ್ರಕಾಶಗೌಡ ಪಾಟೀಲ, ಪ್ರಭುಗೌಡ ಬಿಷ್ಟನಗೌಡ್ರ, ಗುಡ್ಡನಗೌಡ ಅಂದಾನಿಗೌಡ್ರ, ಕೋಟ್ರೇಶಪ್ಪ ಬಸೇಗಣ್ಣಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.