ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Haveri Rain Deficit: ಕೈಕೊಟ್ಟ ಮುಂಗಾರು ಮಳೆ; ಕಂಗಾಲಾದ ಹಾವೇರಿ ಜಿಲ್ಲೆಯ ರೈತರು

Haveri News: ಕಳೆದ ಐದು ದಿನಗಳಿಂದ ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾದ್ಯಂತ ತೀವ್ರ ಬಿಸಿಲು ಆವರಿಸಿದ್ದು, ಬಂಪರ್ ಬೆಳೆ ಕನಸು ಕಂಡಿದ್ದ ಸಾವಿರಾರು ರೈತರಲ್ಲಿ ಆತಂಕ ಮನೆಮಾಡಿದೆ. ಕೆಲವೇ ದಿನಗಳ ಹಿಂದೆ ಧಾರಾಕಾರ ಮಳೆಯಿಂದ ಹಸಿರು ಹೊದಿಕೆ ಹೊದ್ದಿದ್ದ ಜಿಲ್ಲೆಯ ಕೃಷಿ ಭೂಮಿ ಈಗ ಮತ್ತೆ ಬಿರು ಬಿಸಿಲಿನ ಹೊಡೆತಕ್ಕೆ ತತ್ತರಿಸಿದೆ.

ಕೈಕೊಟ್ಟ ಮುಂಗಾರು ಮಳೆ; ಕಂಗಾಲಾದ ಹಾವೇರಿ ಜಿಲ್ಲೆಯ ರೈತರು

-

Profile
Siddalinga Swamy Jul 14, 2026 8:08 PM

| ಪರಶುರಾಮ ಎಸ್.ಡಿ, ಹಾವೇರಿ

ಕೆಲವೇ ದಿನಗಳ ಹಿಂದೆ ಧಾರಾಕಾರ ಮಳೆಯಿಂದ ಹಸಿರು ಹೊದಿಕೆ ಹೊದ್ದಿದ್ದ ಹಾವೇರಿ ಜಿಲ್ಲೆಯ (Haveri News) ಕೃಷಿ ಭೂಮಿ ಈಗ ಮತ್ತೆ ಬಿರು ಬಿಸಿಲಿನ ಹೊಡೆತಕ್ಕೆ ತತ್ತರಿಸಿದೆ. ಕಳೆದ ಐದು ದಿನಗಳಿಂದ ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ತೀವ್ರ ಬಿಸಿಲು ಆವರಿಸಿದ್ದು, ಬಂಪರ್ ಬೆಳೆ ಕನಸು ಕಂಡಿದ್ದ ಸಾವಿರಾರು ರೈತರಲ್ಲಿ ಆತಂಕ ಮನೆಮಾಡಿದೆ.

ಮುಂಗಾರು ಆರಂಭದಲ್ಲಿ ಸುರಿದ ಉತ್ತಮ ಮಳೆಯಿಂದ ರೈತರು ಜೋಳ, ಮೆಕ್ಕೆಜೋಳ, ಹತ್ತಿ, ಸೋಯಾಬೀನ್, ಮೆಣಸಿನಕಾಯಿ ಹಾಗೂ ಇತರೆ ಬೆಳೆಗಳನ್ನು ಭರವಸೆಯಿಂದ ಬಿತ್ತನೆ ಮಾಡಿದ್ದರು. ಉತ್ತಮ ಇಳುವರಿ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಗೊಬ್ಬರ, ಬೀಜ, ಔಷಧಿ ಹಾಗೂ ಕೃಷಿ ಕಾರ್ಯಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದರು. ಆದರೆ ಇದೀಗ ಮಳೆ ಕೈಕೊಟ್ಟು ಬಿರು ಬಿಸಿಲು ಹೆಚ್ಚಾಗಿರುವುದರಿಂದ ಮೊಳಕೆಯೊಡೆದ ಬೆಳೆಗಳು ಒಣಗುವ ಸ್ಥಿತಿಗೆ ತಲುಪಿವೆ.

ಬಿಸಿಲಿನ ತೀವ್ರತೆಗೆ ಮಣ್ಣಿನ ತೇವಾಂಶ ವೇಗವಾಗಿ ಕಡಿಮೆಯಾಗುತ್ತಿದ್ದು, ನೀರಾವರಿ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ಬೆಳೆಗಳು ಜೀವ ಉಳಿಸಿಕೊಳ್ಳುವುದೇ ಕಷ್ಟಕರವಾಗಿದೆ. ದಿನದಿಂದ ದಿನಕ್ಕೆ ಹೊಲಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು, ರೈತರ ಆತಂಕವೂ ಹೆಚ್ಚುತ್ತಿದೆ.

ಹವಾಮಾನ ವೈಪರೀತ್ಯದಿಂದ ಕೃಷಿ ಸಂಪೂರ್ಣ ಅನಿಶ್ಚಿತತೆಯತ್ತ ಸಾಗುತ್ತಿದೆ. ಕೆಲ ದಿನಗಳ ಹಿಂದೆ ಅತಿವೃಷ್ಟಿಯ ಭೀತಿ ಎದುರಿಸಿದ್ದ ರೈತರು ಈಗ ಅನಾವೃಷ್ಟಿಯ ಭಯದಲ್ಲಿ ದಿನ ಕಳೆಯುತ್ತಿದ್ದಾರೆ. ಒಂದೆಡೆ ಹೆಚ್ಚುತ್ತಿರುವ ಕೃಷಿ ವೆಚ್ಚ, ಮತ್ತೊಂದೆಡೆ ಮಳೆಯ ಅನಿಶ್ಚಿತತೆ ರೈತನ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ.

ಕೃಷಿ ತಜ್ಞರ ಪ್ರಕಾರ, ಮುಂದಿನ ಕೆಲವೇ ದಿನಗಳಲ್ಲಿ ಸಮರ್ಪಕ ಮಳೆಯಾಗದಿದ್ದರೆ ಆರಂಭಿಕ ಹಂತದಲ್ಲಿರುವ ಬೆಳೆಗಳಿಗೆ ಗಂಭೀರ ಹಾನಿಯಾಗುವ ಸಾಧ್ಯತೆ ಇದೆ. ಇದರಿಂದ ಇಳುವರಿ ಕುಸಿತವಾಗುವುದರ ಜತೆಗೆ ರೈತರಿಗೆ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.

ಸರ್ಕಾರ ಹಾಗೂ ಕೃಷಿ ಇಲಾಖೆಯು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಬೆಳೆಗಳ ಸ್ಥಿತಿಗತಿ ಪರಿಶೀಲನೆ ನಡೆಸಬೇಕು, ಅಗತ್ಯ ಸಲಹೆ ಹಾಗೂ ನೆರವು ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಹವಾಮಾನ ಇಲಾಖೆ ಕೂಡ ನಿಖರ ಮುನ್ಸೂಚನೆ ನೀಡುವ ಮೂಲಕ ರೈತರಿಗೆ ನೆರವಾಗಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಕರಾವಳಿ ಸೇರಿ ಹಲವೆಡೆ ಸಾಧಾರಣ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ

ʼಮಳೆ ಬಂದಾಗ ಭರವಸೆಯಿಂದ ಬಿತ್ತನೆ ಮಾಡಿದ್ದೇವೆ. ಈಗ ಐದು ದಿನಗಳಿಂದ ಮಳೆ ಇಲ್ಲ. ಬಿಸಿಲಿನ ತಾಪಕ್ಕೆ ಬೆಳೆ ಒಣಗುತ್ತಿದೆ. ಇನ್ನೆರಡು ದಿನಗಳಲ್ಲಾದರೂ ಮಳೆಯಾಗದಿದ್ದರೆ ಮಾಡಿದ ಹೂಡಿಕೆಯೆಲ್ಲ ವ್ಯರ್ಥವಾಗುತ್ತದೆʼ ಎಂದು ಜಿಲ್ಲೆಯ ಹಲವಾರು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.