ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಹುಲ್‌ ಗಾಂಧಿ 40 ದಿನದಿಂದ ಕಾಣೆ; ಡಿಕೆಶಿ ಹುಡುಕುತ್ತಿದ್ದಾರೆ ಎಂದು ಪ್ರಲ್ಹಾದ್‌ ಜೋಶಿ ಲೇವಡಿ

Pralhad Joshi: ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ 40 ದಿನ ಕಳೆದರೂ ಪೂರ್ಣ ಸಚಿವ ಸಂಪುಟ ರಚನೆ ಮಾಡಲಾಗಿಲ್ಲ. ರಾಹುಲ್‌ ಗಾಂಧಿಗಾಗಿ ಕಾಯುತ್ತಿದ್ದಾರೆ. ಆದರೆ, ಅವರು ನೋಡಿದರೆ ಕಾಣೆಯಾಗಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಲೇವಡಿ ಮಾಡಿದ್ದಾರೆ.

ರಾಹುಲ್‌ ಗಾಂಧಿ 40 ದಿನದಿಂದ ಕಾಣೆ: ಪ್ರಲ್ಹಾದ್‌ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ) -

Profile
Siddalinga Swamy Jul 11, 2026 10:50 PM

ಹಾವೇರಿ, ಜು.11: ರಾಹುಲ್‌ ಗಾಂಧಿ ಕಾಣೆಯಾಗಿ 40 ದಿನವಾದಂತಿದೆ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಇನ್ನೂ ಸಚಿವ ಸಂಪುಟ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇದನ್ನೆಲ್ಲಾ ಮರೆಮಾಚಲು ಒಬ್ಬೊಬ್ಬರು ಒಂದೊಂದು ರೀತಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ವಾಗ್ದಾಳಿ ನಡೆಸಿದರು. ಹಾವೇರಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ 40 ದಿನ ಕಳೆದರೂ ಪೂರ್ಣ ಸಚಿವ ಸಂಪುಟ ರಚನೆ ಮಾಡಲಾಗಿಲ್ಲ. ರಾಹುಲ್‌ ಗಾಂಧಿಗಾಗಿ ಕಾಯುತ್ತಿದ್ದಾರೆ. ಆದರೆ, ಅವರು ನೋಡಿದರೆ ಕಾಣೆಯಾಗಿದ್ದಾರೆ ಎಂದು ಲೇವಡಿ ಮಾಡಿದರು.

ಡಿ.ಕೆ. ಶಿವಕುಮಾರ್‌ ಇನ್ನೂ ಸಿಎಂ ಆದ ಸಂಭ್ರಮದಲ್ಲೇ ಇದ್ದಾರೆ. ಆಡಳಿತದ ಬಗ್ಗೆ ಗಮನ ಹರಿಸಿಲ್ಲ. ಸಚಿವ ಸಂಪುಟ ರಚನೆ ಸಹ ಮಾಡಲಾಗದೆ ವಿಮಾನದಲ್ಲೇ ಭಾಷಣ ಮಾಡುತ್ತಿದ್ದಾರೆ. ಇನ್ನು, ಸಚಿವರು, ಪಕ್ಷದ ರಾಜ್ಯಾಧ್ಯಕ್ಷರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಇದನ್ನು ತಡೆಯದಿದ್ದರೆ ಜನರೇ ಉತ್ತರ ಕೊಡುತ್ತಾರೆ ಎಂದು ಎಚ್ಚರಿಸಿದರು.

ಹೊಸ ರಾಜ್ಯಾಧ್ಯಕ್ಷರಿಗೆ ಮಾತಿನ ಕಬರೇ ಇಲ್ಲ

ಹೊಸದಾಗಿ ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾದವರಿಗೆ ತಾವೇನು ಮಾತನಾಡುತ್ತಿದ್ದೇನೆ ಎಂಬ ಕಬರೇ ಇಲ್ಲ ಎಂದು ತರಾಟೆಗೆ ತೆಗೆದುಕೊಂಡ ಜೋಶಿ, ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ʼಬೇಬಿ ಯಡಿಯೂರಪ್ಪʼ ಎಂದು ಕರೆದಿದ್ದಾರೆ. ಹಾಗಾದರೆ ಇವರ‍್ಯಾರು? ನಕಲಿ ಬೇಬಿಗಳೇ? ಮರಿ ಬೇಬಿಗಳೇ? ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರು ತೀರಾ ಹಾಸ್ಯಾಸ್ಪದವಾಗಿ ಮಾತನಾಡುತ್ತಿದ್ದಾರೆ. ರಾಹುಲ್‌ ಗಾಂಧಿಯಂತೆ ಚೈಲ್ಡಿಷ್‌ ಆಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ನಕಲಿ ಬೇಬಿಗಳ ಜತೆ ಕೆಲಸ ಮಾಡುತ್ತಿರುವ ನೀವೂ ನಕಲಿ ಬೇಬಿಗಳೇ? ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಸಚಿವರು ಮತ್ತು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರು ಸ್ವಲ್ಪ ಭಾಷೆ ಅರಿತು ಮಾತನಾಡಲಿ. ಮುಖ್ಯಮಂತ್ರಿಗಳು ಇವರಿಗೆ ಮೊದಲು ರಾಜಕಾರಣದಲ್ಲಿ ಸಭ್ಯ ಭಾಷೆಯಲ್ಲಿ ಮಾತನಾಡುವುದನ್ನು ಕಲಿಸಲಿ. ಸಾರ್ವಜನಿಕ ಜೀವನದಲ್ಲಿ ಇರುವವರ ಬಗ್ಗೆ ಹೇಗೆ? ಏನು ಮಾತನಾಡಬೇಕು ಎಂಬ ಪಾಠ ಮಾಡಲಿ ಎಂದು ಕಿವಿಮಾತು ಹೇಳಿದರು ಪ್ರಲ್ಹಾದ್‌ ಜೋಶಿ.

ಕಾಂಗ್ರೆಸ್‌ಗೆ ರಾಷ್ಟ್ರೀಯ ಪ್ರತಿನಿಧಿತ್ವದ ಬಲ ಇಲ್ಲವೆಂದರೆ ಅದು ಮೋದಿ ತಪ್ಪೇ? ಯಾವುದೇ ಪಕ್ಷಗಳ ಅಧಿಕಾರವನ್ನು, ರಾಜ್ಯಗಳ ಅಧಿಕಾರವನ್ನು ಕೇಂದ್ರವೇನು ಕಸಿದುಕೊಂಡಿಲ್ಲ. ಬದಲಾಗಿ ಮತ್ತಷ್ಟು ಬಲಪಡಿಸುವ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.

ಆಗತ್ಯವಿದ್ದಾಗ ಆರೆಸ್ಸೆಸ್ಸೇ ಉತ್ತರಿಸುತ್ತದೆ

ಪ್ರಧಾನಿ ಮೋದಿ, ಗಡ್ಕರಿ, ರಾಜನಾಥಸಿಂಗ್‌ ಮತ್ತು ನಾನು ಆರೆಸ್ಸೆಸ್‌ನಿಂದ ಬಂದವರೇ. ಆದರೆ, ಬಿಜೆಪಿ ಪ್ರತಿನಿಧಿಸುತ್ತಿದ್ದೇವೆ. ಆರೆಸ್ಸೆಸ್‌ ಬಗ್ಗೆ ನಾವೇನೂ ಹೇಳುವ ಅವಶ್ಯಕತೆಯಿಲ್ಲ. ಅಗತ್ಯವಿದ್ದಾಗ ಆರೆಸ್ಸೆಸ್ಸೇ ಇಲ್ಲದಕ್ಕೂ ಉತ್ತರ ಕೊಡುತ್ತದೆ ಎಂದರು.

ರಾಜ್ಯದಲ್ಲಿ ಡ್ರಗ್ಸ್‌ ಪೆಡ್ಲರ್‌ ಹೆಚ್ಚಿದ್ದಾರೆ. ಪಟಾಕಿ ಸಿಡಿಸಿದ್ದಕ್ಕೆ ರೈತರ ಕೈ ಕತ್ತರಿಸುತ್ತಾರೆ. ಇದ್ಯಾವುದೂ ಇವರ ಕಣ್ಣಿಗೆ ಕಾಣಿಸುವುದಿಲ್ಲ. ಆರೆಸ್ಸೆಸ್‌ ಮಾತ್ರ ಕಣ್ಣು ಕುಕ್ಕುತ್ತದೆಯೇ? ಎಂದು ಅವರು ಪ್ರಶ್ನಿಸಿದರು.

ಮಹದಾಯಿ ಅಡೆತಡೆ ನಿವಾರಿಸಿದ್ದೇ ಬಿಜೆಪಿ ಸರ್ಕಾರ

ಇನ್ನು, ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಎಲ್ಲವನ್ನೂ ಪರಿಶೀಲಿಸಿಯೇ ತೀರ್ಮಾನ ತೆಗೆದುಕೊಳ್ಳುತ್ತದೆ. ವನ್ಯಜೀವಿ ಸಂರಕ್ಷಣಾ ಮಂಡಳಿ ವರದಿ, ನ್ಯಾಯಾಧಿಕರಣದ ವರದಿ ಕೇಂದ್ರಕ್ಕೆ ಸಲ್ಲಿಕೆಯಾಗಬೇಕು. ಬಳಿಕ ಕೇಂದ್ರ ಕ್ರಮ ಕೈಗೊಳ್ಳುತ್ತದೆ. ಆಡಳಿತದಲ್ಲಿದ್ದಾಗ ವಿರೋಧಿಸಿದ್ದವರೇ ಇವರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆಯೇ ಎಲ್ಲ ಅಡೆತಡೆಗಳನ್ನು ಒಂದೊಂದಾಗಿ ನಿವಾರಿಸುತ್ತ ಬಂದಿದ್ದೇವೆ ಎಂದು ಜೋಶಿ ಸ್ಪಷ್ಟಪಡಿಸಿದರು.

ʼಗ್ಯಾರೆಂಟಿʼ ಹೊಸ ಸಮೀಕ್ಷೆಗೆ ಟೀಕೆ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದವರು ಗೃಹಲಕ್ಷ್ಮಿ, ಗೃಹಜ್ಯೋತಿ ಗ್ಯಾರೆಂಟಿ ಯೋಜನೆಗೆ ಹೊಸದಾಗಿ ಸಮೀಕ್ಷೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಹಾಗಾದರೆ ಇಷ್ಟು ದಿನ ಯಾರಿಗೆ ಕೊಟ್ಟಿದ್ದೀರಿ? ಎಲ್ಲರಿಗೂ ಉಚಿತವೆಂದು ಈಗೇಕೆ ಒಂದೊಂದೇ ಷರತ್ತುಗಳು? ಎಂದು ಪ್ರಶ್ನಿಸಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಗ್ಯಾರೆಂಟಿ ನಿಭಾಯಿಸಲು ಆಗದ ಸ್ಥಿತಿ ತಲುಪಿದೆ ಈ ಸರ್ಕಾರ ಎಂದು ಟೀಕಿಸಿದರು.

SIR ಅಕ್ರಮ ತಡೆಯುವಲ್ಲಿ ʼಚುನಾವಣಾ ಆಯೋಗ ಕತ್ತೆ ಕಾಯುತ್ತಿದೆಯೇʼ? ಎಂದು ಕೇಳುತ್ತಾರೆ. ಹಾಗಾದರೆ ಗ್ಯಾರೆಂಟಿ ವಂಚನೆ ತಡೆಯಲಾಗದೆ ನೀವೇನು ಕಾಯುತ್ತಿದ್ದೀರಿ? ಎಂದು ತರಾಟೆಗೆ ತೆಗೆದುಕೊಂಡರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣ ಆಡಳಿತ ವೈಫಲ್ಯಕ್ಕೆ ಸಾಕ್ಷಿ: ಜೋಶಿ ಕಿಡಿ

ಅಯೋಗ್ಯ ಸರ್ಕಾರ

ಅಕ್ಷರ ದಾಸೋಹಕ್ಕೆ ಕೊಡಬೇಕಾದ ಅಕ್ಕಿ ಸಾಗಣೆ ಮಾಡಲೂ ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅಕ್ಕಿ ಫ್ರೀ ಕೊಡುತ್ತಿದ್ದರೂ ಸಾರಿಗೆ, ಸಾಗಣೆ ವೆಚ್ಚವನ್ನೂ ಭರಿಸಲಾಗದಂತಹ ಅಯೋಗ್ಯ ಸರ್ಕಾರವಿದು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.