ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಬ್ಬಿನ ದರದ ಕಗ್ಗಂಟು: ಹಾವೇರಿ ಡಿಸಿ ಕಚೇರಿಗೆ ನುಗ್ಗಿದ ರೈತರು, ಟನ್‌ಗೆ 3,600 ರೂ. ನೀಡಲು ಪಟ್ಟು

Haveri Sugarcane Farmers Protest: ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರ ಸಮ್ಮುಖದಲ್ಲಿ ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳ ಸಭೆ ನಡೆಯಿತು. ಸಂಧಾನ ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ರೈತರು ನುಗ್ಗಿ ಆಕ್ರೋಶ ಹೊರಹಾಕಿದರು.

ಹಾವೇರಿ ಡಿಸಿ ಕಚೇರಿಗೆ ನುಗ್ಗಿದ ರೈತರು, ಟನ್‌ ಕಬ್ಬಿಗೆ 3,600 ನೀಡಲು ಪಟ್ಟು

-

Prabhakara R
Prabhakara R Nov 23, 2026 6:10 PM

ಹಾವೇರಿ: ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದಂತೆ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ಹಗ್ಗಜಗ್ಗಾಟ ತಾರಕಕ್ಕೇರಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಬ್ಬು ಬೆಳೆಗಾರರು (Sugarcane Farmers Protest) ಕಚೇರಿಯ ಮುಖ್ಯ ಗೇಟ್ ಹಾರಿ ಒಳನುಗ್ಗಿದ ಘಟನೆ ಸೋಮವಾರ ನಡೆದಿದೆ.

ಪ್ರತಿ ಟನ್ ಕಬ್ಬಿಗೆ 3,600 ದರ ನೀಡಲೇಬೇಕು ಎಂದು ರೈತರು ಪಟ್ಟು ಹಿಡಿದರೆ, ಕಾರ್ಖಾನೆ ಮಾಲೀಕರು 3,000 ಹಾಗೂ 3,100ಕ್ಕಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದರಿಂದ ಸಭೆಯಲ್ಲಿ ತೀವ್ರ ವಾಗ್ವಾದ ನಡೆದಿದ್ದು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರ ಸಮ್ಮುಖದಲ್ಲಿ ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳ ಸಭೆ ಆರಂಭವಾಯಿತು. ಸಭೆಯ ಮಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಕೂಡ ಆಗಮಿಸಿ ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಸಭೆಯಲ್ಲಿ ಜಿಎಂ ಶುಗರ್ಸ್ ಕಾರ್ಖಾನೆಯ ಎಕ್ಸಿಕ್ಯೂಟಿವ್ ಮ್ಯಾನೇಜರ್ ಬಸವರಾಜ್ ಹಾಗೂ ವಿಐಎಂಪಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಹೆಬ್ಬಾರ್ ಸೇರಿದಂತೆ ಕಾರ್ಖಾನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ರೈತ ಮುಖಂಡ ಚುನ್ನಪ್ಪ ಪೂಜಾರಿ ನೇತೃತ್ವದಲ್ಲಿ 36 ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

3,600ಕ್ಕೆ ರೈತರ ಪಟ್ಟು; ಮಾಲೀಕರದ್ದು 3,000–3,100!

ಸಭೆಯಲ್ಲಿ ರೈತ ಮುಖಂಡ ಚುನ್ನಪ್ಪ ಪೂಜಾರಿ ಮಾತನಾಡಿ, ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಮೊದಲ ಕಂತಿನಲ್ಲಿ ಪ್ರತಿ ಟನ್‌ಗೆ 3,500 ಹಾಗೂ ನಂತರ ಹೆಚ್ಚುವರಿಯಾಗಿ 100 ನೀಡುವಂತೆ ಒತ್ತಾಯಿಸಲಾಗಿದೆ. ರೈತರಿಗೆ ಒಟ್ಟು 3,600 ದರ ನೀಡಲೇಬೇಕು. ಈ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಆದರೆ ಜಿಎಂ ಶುಗರ್ಸ್ ಕಾರ್ಖಾನೆ ಪ್ರತಿ ಟನ್‌ಗೆ 3,000 ನೀಡುವುದಾಗಿ ತಿಳಿಸಿದರೆ, ವಿಐಎಂಪಿ ಕಾರ್ಖಾನೆ 3,100 ಅಂತಿಮ ದರ ಎಂದು ಹೇಳಿದೆ. ರೈತರ ₹3,600 ಬೇಡಿಕೆಗೆ ಕಾರ್ಖಾನೆಗಳು ಒಪ್ಪದ ಹಿನ್ನೆಲೆಯಲ್ಲಿ ಸಂಧಾನ ಸಭೆಯಲ್ಲಿ ಒಮ್ಮತ ಮೂಡಲಿಲ್ಲ.

ಗೇಟ್ ಹಾರಿ ಒಳನುಗ್ಗಿದ ರೈತರು

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲೂ ದರದ ಬಗ್ಗೆ ತೀರ್ಮಾನವಾಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಜಮಾಯಿಸಲಾರಂಭಿಸಿದರು. ಪ್ರತಿಭಟನೆಗಾಗಿ ಬೃಹತ್ ಶಾಮಿಯಾನ ಅಳವಡಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಕಚೇರಿಯ ಮುಖ್ಯ ಗೇಟ್ ಬಂದ್ ಮಾಡಿದರು.

ಇದರಿಂದ ಮತ್ತಷ್ಟು ಆಕ್ರೋಶಗೊಂಡ ರೈತರು ಮುಖ್ಯದ್ವಾರದ ಗೇಟ್ ಹಾರಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿತ್ತು.

ರೈತರಿಗೆ ನ್ಯಾಯಯುತ ದರ ದೊರೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು. ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿಯೂ ದರದ ಒಮ್ಮತ ಮೂಡದಿರುವುದು ಕಬ್ಬು ಬೆಳೆಗಾರರ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ನೀಡಿದೆ.

ASHA Workers Protest: ಆಶಾ ಸಹೋದರಿಯರ ಹೋರಾಟಕ್ಕೆ ಸಿಎಂ ಸ್ಪಂದಿಸಲಿ: ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಒತ್ತಾಯ

ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ, ಶಶಿಕಾಂತ ಗುರೂಜಿ, ಸಂಘದ ಅಧ್ಯಕ್ಷ ಅಶೋಕ ಮರ್ಚರೇಡ್ಡೇರ, ಸಂಗೂರು ಸಕ್ಕರೆ ಕಾರ್ಖಾನೆ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಹನುಮಂತಪ್ಪ ಹುಚ್ಚಣ್ಣನವರ, ಮಾಲತೇಶ ಪೂಜಾರ, ಮಲ್ಲಿಕಾರ್ಜುನ ಬಳ್ಳಾರಿ, ಹನುಮಂತಪ್ಪ ಕಬ್ಬಾರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.