ದಾಸೋಹಕ್ಕೆ ಯೋಗ್ಯವಲ್ಲದ ನಾನಾ ಮಿಶ್ರಿತ ಉಲ್ಪಿ ಅಕ್ಕಿ ಮಾರಾಟ: ಯಾವುದೇ ಅಕ್ರಮ ನಡೆದಿಲ್ಲ!
ದಸರಾ ಸಂದರ್ಭದಲ್ಲಿ ಭಕ್ತರಿಂದ ಅಪಾರ ಪ್ರಮಾಣದಲ್ಲಿ ಉಲ್ಪಿ ಅಕ್ಕಿ ಸಂಗ್ರಹವಾಗಿತ್ತು. ಈ ಅಕ್ಕಿಯಲ್ಲಿ ವಿವಿಧ ಬಗೆಯ ಅಕ್ಕಿ ಮಿಶ್ರಣವಾಗಿದ್ದಲ್ಲದೆ, ಸಾಕಷ್ಟು ಪ್ರಮಾಣದ ಅಕ್ಕಿ ಹಾಳಾಗಿತ್ತು. ಹೀಗಾಗಿ ದಾಸೋಹಕ್ಕೆ ಬಳಸಲು ಯೋಗ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಳಕೆಗೆ ಯೋಗ್ಯವಲ್ಲದ ಅಕ್ಕಿಯನ್ನು ಮಾರಾಟ ಮಾಡಿ ಬಂದ ಹಣವನ್ನು ದೇವಸ್ಥಾನದ ಅಧಿಕೃತ ಖಾತೆಗೆ ಜಮೆ ಮಾಡಲಾಗಿದೆ. ಇದರಲ್ಲಿ ಯಾವುದೇ ವೈಯಕ್ತಿಕ ಲಾಭವಾಗಲಿ, ಹಣ ದುರುಪಯೋಗವಾಗಲಿ ನಡೆದಿಲ್ಲ
-
ಹಾವೇರಿ: ದಸರಾ(Dasara) ಸಂದರ್ಭದಲ್ಲಿ ದೇವರಗುಡ್ಡದ ಮಾಲತೇಶ ದೇವರಿಗೆ ಲಕ್ಷಾಂತರ ಭಕ್ತರು ಭಕ್ತಿಯಿಂದ ಸಮರ್ಪಿಸಿದ್ದ ಉಲ್ಪಿ ಅಕ್ಕಿಯನ್ನು ಮಾರಾಟ ಮಾಡಿರುವುದು ನಿಜ. ಆದರೆ ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ದೇವರಗುಡ್ಡ ಮಾಲತೇಶ ದೇವರ ಸಮಿತಿ ಅಧ್ಯಕ್ಷ ಗವಿಸಿದ್ದಪ್ಪ ದ್ಯಾಮಣ್ಣನವರ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಸರಾ ಸಂದರ್ಭದಲ್ಲಿ ಭಕ್ತರಿಂದ ಅಪಾರ ಪ್ರಮಾಣದಲ್ಲಿ ಉಲ್ಪಿ ಅಕ್ಕಿ ಸಂಗ್ರಹವಾಗಿತ್ತು. ಈ ಅಕ್ಕಿಯಲ್ಲಿ ವಿವಿಧ ಬಗೆಯ ಅಕ್ಕಿ ಮಿಶ್ರಣವಾಗಿದ್ದಲ್ಲದೆ, ಸಾಕಷ್ಟು ಪ್ರಮಾಣದ ಅಕ್ಕಿ ಹಾಳಾಗಿತ್ತು. ಹೀಗಾಗಿ ದಾಸೋಹಕ್ಕೆ ಬಳಸಲು ಯೋಗ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಳಕೆಗೆ ಯೋಗ್ಯವಲ್ಲದ ಅಕ್ಕಿಯನ್ನು ಮಾರಾಟ ಮಾಡಿ ಬಂದ ಹಣವನ್ನು ದೇವಸ್ಥಾನದ ಅಧಿಕೃತ ಖಾತೆಗೆ ಜಮೆ ಮಾಡಲಾಗಿದೆ. ಇದರಲ್ಲಿ ಯಾವುದೇ ವೈಯಕ್ತಿಕ ಲಾಭವಾಗಲಿ, ಹಣ ದುರುಪಯೋಗವಾಗಲಿ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.
ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯವೈಖರಿಗೆ ಮಸಿ ಬಳಿಯುವ ಉದ್ದೇಶದಿಂದ ಕೆಲವರು ಪಿತೂರಿ ನಡೆಸಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಇಂತಹ ಆಧಾರರಹಿತ ಆರೋಪಗಳಿಂದ ದೇವಸ್ಥಾನದ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಸಹಿಸುವುದಿಲ್ಲ. ಸುಳ್ಳು ಮಾಹಿತಿ ಹರಡಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಭರಮಣ್ಣ ಉಳವಿ, ಸುರೇಶ ತಳಗೇರಿ, ಪ್ರಕಾಶ ಬಳ್ಳಾರಿ ಹಾಗೂ ಬಸವಂತಪ್ಪ ಮೈಲಾರ ಉಪಸ್ಥಿತರಿದ್ದರು.