ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಾವೇರಿ ವಿವಿ ಗೌರವ ಡಾಕ್ಟರೇಟ್ ಸ್ವೀಕರಿಸಲು ನಿರಾಕರಿಸಿದ ಸಂಸದ ಬಸವರಾಜ ಬೊಮ್ಮಾಯಿ

Basavaraj Bommai: ನಾನು ಸಾರ್ವಜನಿಕ ಸೇವೆಯಲ್ಲಿ ಇರುವುದರಿಂದ, ಸಾರ್ವಜನಿಕ ಸೇವೆಗೆ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸುವುದಿಲ್ಲ. ಸಾರ್ವಜನಿಕ ಸೇವೆಗೆ ಜನರ ಪ್ರೀತಿ ಮತ್ತು ವಿಶ್ವಾಸವೇ ನನಗೆ ಅತ್ಯಂತ ದೊಡ್ಡ ಗೌರವವೆಂದು ಭಾವಿಸುತ್ತೇನೆ. ಆದ್ದರಿಂದ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ವಿನಮ್ರವಾಗಿ ತಿಳಿಸಿರುವುದಾಗಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ವಿವಿ ಗೌರವ ಡಾಕ್ಟರೇಟ್ ಸ್ವೀಕರಿಸಲು ಬಸವರಾಜ ಬೊಮ್ಮಾಯಿ ನಕಾರ

ಸಂಸದ ಬಸವರಾಜ ಬೊಮ್ಮಾಯಿ. -

Prabhakara R
Prabhakara R Apr 5, 2026 2:56 PM

ಹಾವೇರಿ: ಹಾವೇರಿ ವಿಶ್ವವಿದ್ಯಾಲಯದಿಂದ ಘೋಷಿಸಿರುವ ಗೌರವ ಡಾಕ್ಟರೇಟ್ ಪದವಿಯನ್ನು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಅವರು ನಿರಾಕರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಹಾವೇರಿ ವಿಶ್ವವಿದ್ಯಾಲಯವು ತಮ್ಮ ಸಿಂಡಿಕೇಟ್ ಸಭೆಯಲ್ಲಿ ನನಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿರುವುದಕ್ಕೆ ಕುಲಪತಿಗಳು, ಉಪಕುಲಪತಿಗಳು, ಕುಲಸಚಿವರು ಹಾಗೂ ಸಿಂಡಿಕೇಟ್ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಧನ್ಯವಾದವನ್ನು ತಿಳಿಸುತ್ತೇನೆ. ಆದರೆ, ನಾನು ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ಈಗಾಗಲೇ ಕುಲಪತಿಗಳಿಗೆ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.

ನಾನು ಸಾರ್ವಜನಿಕ ಸೇವೆಯಲ್ಲಿ ಇರುವುದರಿಂದ, ಸಾರ್ವಜನಿಕ ಸೇವೆಗೆ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸುವುದಿಲ್ಲ. ಸಾರ್ವಜನಿಕ ಸೇವೆಗೆ ಜನರ ಪ್ರೀತಿ ಮತ್ತು ವಿಶ್ವಾಸವೇ ನನಗೆ ಅತ್ಯಂತ ದೊಡ್ಡ ಗೌರವವೆಂದು ಭಾವಿಸುತ್ತೇನೆ. ಆದ್ದರಿಂದ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ವಿನಮ್ರವಾಗಿ ಪುನರುಚ್ಚರಿಸುತ್ತೇನೆ.

ಗೌರವ ಡಾಕ್ಟರೇಟ್ ಎಂಬುದು ದೀರ್ಘಕಾಲದಿಂದ ಯಾವುದಾದರೂ ಕ್ಷೇತ್ರದಲ್ಲಿ ವಿಶಿಷ್ಟ ಮತ್ತು ಮಹತ್ತರ ಸೇವೆ ಸಲ್ಲಿಸಿದವರಿಗೆ ನೀಡಬೇಕಾದ ಗೌರವವೆಂಬುದು ನನ್ನ ಅಭಿಪ್ರಾಯ. ಹೀಗಾಗಿ ಇದನ್ನು ಅಂಥ ಸಾಧಕರಿಗೆ ನೀಡಬೇಕು. ರಾಜಕಾರಣಿಗಳಿಗೆ ಅಥವಾ ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಗೌರವ ಡಾಕ್ಟರೇಟ್ ನೀಡುವುದು ಸಮಂಜಸವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವಿಷಯದಲ್ಲಿ ಪುನರ್ ವಿಚಾರ ಮಾಡಬೇಕೆಂದು ವಿನಂತಿಸುತ್ತೇನೆ.

Haveri University: ಏ.6ಕ್ಕೆ ಹಾವೇರಿ ವಿವಿ ಪ್ರಥಮ ಘಟಿಕೋತ್ಸವ; ಬಸವರಾಜ ಬೊಮ್ಮಾಯಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಪದವಿ

ಮತ್ತೊಮ್ಮೆ ವಿನಯಪೂರ್ವಕವಾಗಿ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ತಿಳಿಸುತ್ತಾ, ಹಾವೇರಿ ವಿಶ್ವವಿದ್ಯಾಲಯಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

ಮೂವರಿಗೆ ಗೌರವ ಡಾಕ್ಟರೇಟ್ ಘೋಷಿಸಿದ್ದ ಹಾವೇರಿ ವಿವಿ

ಏ.6 ರಂದು ಹಾವೇರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಮೂವರಿಗೆ ಗೌರವ ಡಾಕ್ಟರೇಟ್ ನೀಡಲು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಸಮಾಜ ಸೇವೆಯಿಂದ ಮಾಜಿ ಸಿ.ಎಂ ಹಾಲಿ ಹಾವೇರಿ- ಗದಗ ಸಂಸದ ಬಸವರಾಜ ಬೊಮ್ಮಾಯಿ, ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಇದೀಗ ಗೌರವ ಡಾಕ್ಟರೇಟ್ ಸ್ವೀಕರಿಸಲು ಸಂಸದ ಬಸವರಾಜ ಬೊಮ್ಮಾಯಿ ಅವರು ನಿರಾಕರಿಸಿದ್ದಾರೆ.