Chakravarti Sulibele: ನಮ್ಮ ಶ್ರದ್ದಾ ಕೇಂದ್ರಗಳ ಮೇಲೆ ನಾವೇ ಅನುಮಾನ ಪಡುವುದು ಸರಿಯೇ? ಚಕ್ರವರ್ತಿ ಸೂಲಿಬೆಲೆ ಪ್ರಶ್ನೆ
ಮಾಸ್ಕ್ ವ್ಯಕ್ತಿ ಹೇಳಿರುವ ಸ್ಥಳಗಳಲ್ಲಿ ಏನೂ ಸಿಗದೇ ಇದ್ದಾಗ ಎಸ್‌ಐಟಿ ಶೋಧ ಕಾರ್ಯವನ್ನು ನಿಲ್ಲಿಸಬಹುದಿತ್ತು. ಆದರೆ ಅವರು ಶೋಧವನ್ನು ಮುಂದುವರಿಸಿದ್ದರು. ಯಾಕೆಂದರೆ ಈ ಪ್ರಕರಣವನ್ನು ಎಡಪಂತೀಯರು ಮುಚ್ಚಲು ಬಯಸುತ್ತಿಲ್ಲ. ಅದನ್ನು ಜೀವಂತವಾಗಿ ಇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಲ್ಪೆಯಲ್ಲಿ ಮಾತಾನಾಡಿರುವ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಹೇಳಿದ್ದು, ಹಿಂದುತ್ವದ ವಿರುದ್ಧ ಏನೇ ನಡೆದರೂ ಅದರ ಹಿಂದೆ ಮುಸ್ಲಿಂ, ಕ್ರಿಶ್ಚಿಯನ್, ಕಾಂಗ್ರೆಸ್ ನ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದರು.


ಮಲ್ಪೆ: ಹಿಂದೂ ಧರ್ಮದ (Hindu dharma) ಬಗ್ಗೆ ಯಾರಾದರೂ ಆರೋಪ ಮಾಡಿದಾಗ ಒಂದೋ ಸುಮ್ಮನಿರಿ ಅಥವಾ ಅದರ ವಿರುದ್ಧ ಸೆಟೆದು ನಿಂತು ಧರ್ಮದ ರಕ್ಷಣೆಗೆ ಜೊತೆಗೆ ನಿಲ್ಲಿ. ಆರೋಪ ಮಾಡುವವರ ಜೊತೆ ನಿಂತು ನಾವು ನಾಲ್ಕು ಕಲ್ಲುಗಳನ್ನು ಎಸೆದರೆ ನಮ್ಮ ಧರ್ಮದ ಶ್ರದ್ಧಾ ಕೇಂದ್ರಗಳ ಮೇಲಿನ ನಂಬಿಕೆ ಕಳೆದುಹೋಗುವುದು. ಧರ್ಮಸ್ಥಳವನ್ನು (Dharmastala case) ಮುಜರಾಯಿ ಇಲಾಖೆಗೆ ಸೇರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಹೀಗಾದರೆ ರಾಜ್ಯದಲ್ಲಿ ಧರ್ಮಸ್ಥಳದ ವತಿಯಿಂದ ನಡೆಯುವ ಎಲ್ಲ ಕೆಲಸಗಳು ನಿಂತು ಹೋಗುತ್ತದೆ ನೆನಪಿರಲಿ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಹೇಳಿದರು.
ಮಲ್ಪೆ ಕೊಳ ಬಾಲಕರ ಶ್ರೀ ರಾಮ ಭಜನಾ ಮಂದಿರದಲ್ಲಿ ಬುಧವಾರ ನಡೆದ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಷಯ ಪ್ರಸ್ತಾಪಿಸಿದರು. ಸೌಜನ್ಯಾ ಪರ ಹೋರಾಟಗಾರರು ಬಾಯ್ಬಿಟ್ಟರೆ ಹೊಲಸು ಮಾತನಾಡುತ್ತಾರೆ. ಕೇಳಿದವರು ಅವರ ಕಪಾಳಕ್ಕೆ ಯಾಕೆ ಬಾರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಯೂಟ್ಯೂಬರ್ ಸಮೀರ್ ವಿರುದ್ಧ ವಾಗ್ದಾಳಿ ನಡೆಸಿದ ಚಕ್ರವರ್ತಿ ಸೂಲಿಬೆಲೆ, ಅಣ್ಣಪ್ಪ, ಮಂಜುನಾಥನಂತೆ ನಾವು ವೀರೇಂದ್ರ ಹೆಗ್ಡೆಯವರನ್ನು ಪೂಜಿಸುತ್ತಿದ್ದೆವು. ಆದರೆ ಸಮೀರ್ ಮಾಡಿದ ಆರೋಪಗಳಿಂದ ನಾವು ಅವರನ್ನು ಅನುಮಾನಿಸಿದೇವು. ಯಾಕೆ ನಾವು ಅದನ್ನು ವಿರೋಧಿಸುವ ಪ್ರಯತ್ನ ಮಾಡಲಿಲ್ಲ ಎಂದು ಪ್ರಶ್ನಿಸಿದರು.
2012ರಲ್ಲಿ ಸೌಜನ್ಯ ಹತ್ಯೆಯ ಎರಡು ದಿನ ಬಳಿಕ ಆರೋಪಿ ಸಿಕ್ಕಿದ. ಸಂಪೂರ್ಣ ತನಿಖೆಯ ಬಳಿಕವೇ ಈ ಪ್ರಕರಣವನ್ನು ಮುಚ್ಚಿರುವುದಾಗಿ ಪೊಲೀಸ್ ಅಧಿಕಾರಿಯೇ ನನ್ನ ಬಳಿ ಹೇಳಿದ್ದಾರೆ. ಆದರೆ ಈ ಪ್ರಕರಣದ ಬಗ್ಗೆ ಸಾಕಷ್ಟು ಅಪಪ್ರಚಾರಗಳು ಹುಟ್ಟಿಕೊಂಡವು. ಹೆಗ್ಗಡೆಯವರ ತಮ್ಮನ ಮಗ ಅಮೆರಿಕದಿಂದ ಹಾರಿ ಬಂದು ಅತ್ಯಾಚಾರ ಮಾಡಿ ಹೋಗಿದಾನೆ ಎನ್ನುವ ಆರೋಪವನ್ನೂ ನಾವು ಕೇಳಿ ಅವರನ್ನು ಅನುಮಾನಾಸ್ಪದವಾಗಿಯೇ ನೋಡಿದೇವು ಇದು ದುರಂತ ಎಂದರು.
ನಾವು ಆರೋಪಿಗಳಂದು ನೋಡುತ್ತಿರುವ ಹೆಗ್ಡೆ ಕುಟುಂಬದವರನ್ನು ನ್ಯಾಯಾಲಯವೇ ನಿರ್ದೋಷಿ ಎಂದು ತೀರ್ಮಾನಿಸಿ ಬಿಡುಗಡೆ ಮಾಡಿದರೂ ಪ್ರಜ್ಞಾವಂತ ಜನತೆ ಧರ್ಮಸ್ಥಳ ಕ್ಷೇತ್ರದ ಬಗೆಗಿನ ಅಪಪ್ರಚಾರ ಸಹಿಸಿಕೊಂಡು ಸುಮ್ಮನ್ನಿದ್ದರು. ಇದು ದುರ್ದೈವ ಎಂದು ಹೇಳಿದರು.
ಸಮೀರ್ ಹೇಳಿರುವ ಕಥೆಯನ್ನು ನಾವು ನಂಬಿ ನೂರಾರು ವರ್ಷಗಳಿಂದ ನಂಬಿಕೊಂಡು ಬಂದಿರುವ ಧರ್ಮಸ್ಥಳವನ್ನು ಕಟಕಟೆಯಲ್ಲಿ ನಿಲ್ಲಿಸಿದ್ದೇವೆ. ಚಕ್ರವರ್ತಿ, ವಸಂತ ಗಿಳಿಯಾರ್ ಕೂಡ ಧರ್ಮಸ್ಥಳದೊಂದಿಗೆ ಡೀಲ್ ಮಾಡಿದ್ದಾರೆ ಎನ್ನುವ ಆರೋಪಗಳಿವೆ. ಇದನ್ನು ಕೂಡ ಸಾಕಷ್ಟು ಮಂದಿ ನಂಬಿದ್ದಾರೆ. ಆದರೆ ಮೂರು ಕೋಟಿ ಅಲ್ಲ ಮುನ್ನೂರು ಕೋಟಿ ರೂ. ಕೊಟ್ಟರೂ ನನ್ನನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಂದರು.
ಸಮಾಜದ ಏಳಿಗೆಗಾಗಿ ದುಡಿದಿರುವ ವೀರೇಂದ್ರ ಹೆಗ್ಗೆಡೆ ಅವರಿಂದಾಗಿ ಆರೂವರೆ ಲಕ್ಷ ಸ್ವಸಹಾಯ ಸಂಘದ ಮೂಲಕ ಮಹಿಳೆಯರು ಬದುಕು ಕಟ್ಟಿದ್ದಾರೆ. 700ಕ್ಕೂ ಅಧಿಕ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಅವರ ಸಾಮಾಜಿಕ ಕಾರ್ಯಗಳ ಪ್ರಯೋಜನ ಪಡೆದಾಗ ನಾವು ಅವರ ಜಾತಿ ನೋಡಲಿಲ್ಲ. ಅವರ ಮೇಲೆ ಆರೋಪ ಬಂದಾಗ ಅವರು ಜೈನರು ಎನ್ನುವುದು ನಮಗೆ ನೆನಪಾಗಿದೆ ಎಂದು ಹೇಳಿದರು.
ಧರ್ಮಸ್ಥಳದಲ್ಲಿ ಯಾರೋ ಒಬ್ಬ ಸಹಜವಾಗಿ ಸತ್ತರೂ ಅದರ ಆರೋಪ ಕೂಡ ಹೆಗ್ಗಡೆ ಪರಿವಾರದ ಮೇಲೆ ಬರುತ್ತದೆ. ಐವತ್ತೈದು ವರ್ಷಗಳ ಕಾಲ ನಮ್ಮ ಪ್ರೀತಿಯನ್ನು ಗಳಿಸಿರುವ ಒಬ್ಬ ವ್ಯಕ್ತಿಯನ್ನು ನಾವು ಸುಳ್ಳು ಹೇಳುವ ನಾಲ್ಕು ಜನರ ಮಾತುಗಳನ್ನು ಕೇಳಿ ಅನುಮಾನಿಸಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಹೆಗ್ಗಡೆಯವರು ಧರ್ಮಸ್ಥಳವನ್ನು ಅಗಾಧವಾಗಿ ಬೆಳೆಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆ ಅಪಾರ. 50 ಕೋಟಿ ರೂ. ಸ್ಕಾಲರ್ ಶಿಪ್ ಅನ್ನು ಧರ್ಮಸ್ಥಳದಿಂದ ನೀಡಲಾಗುತ್ತಿದೆ. ಉದ್ಯೋಗ, ಶಿಕ್ಷಕರ ಕೊರತೆಯನ್ನು ನೀಗಿಸುವಲ್ಲಿ ಕೂಡ ಹೆಗ್ಗಡೆ ಅವರ ಕೊಡುಗೆ ಅಪಾರ. ಇವರ ವಿವಿಧ ಯೋಜನೆಗಳನ್ನೇ ಕೇಂದ್ರ ಸರ್ಕಾರ ಮಾದರಿಯನ್ನಾಗಿ ತೆಗೆದುಕೊಂಡಿದೆ. ಹಾಗಿದ್ದರೂ ನಾವು ಅವರನ್ನು ಇಂದು ಅನುಮಾನಿಸುತ್ತಿದ್ದೇವೆ ಎಂದರು.
ಹಿಂದುತ್ವದ ವಿರುದ್ಧ ಏನೇ ನಡೆದರೂ ಅದರ ಹಿಂದೆ ಮುಸ್ಲಿಂ, ಕ್ರಿಶ್ಚಿಯನ್, ಕಾಂಗ್ರೆಸ್ ನ ಕೈವಾಡವಿದೆ ಎಂದು ಆರೋಪಿಸಿದ ಚಕ್ರವರ್ತಿ, ಇದರ ಹಿಂದೆ ಕಮ್ಯುನಿಸ್ಟರ ದೊಡ್ಡ ಷಡ್ಯಂತ್ರವಿದೆ ಎಂದು ದೂರಿದರು.
ಮಾಸ್ಕ್ ವ್ಯಕ್ತಿ ಹೇಳಿರುವ ಸ್ಥಳಗಳಲ್ಲಿ ಏನೂ ಸಿಗದೇ ಇದ್ದಾಗ ಎಸ್ ಐಟಿ ಶೋಧ ಕಾರ್ಯವನ್ನು ನಿಲ್ಲಿಸಿ ಆತನನ್ನು ಸರಿಯಾಗಿ ವಿಚಾರಣೆ ಮಾಡಬೇಕಿತ್ತು. ಆದರೆ ಅವರು ಶೋಧವನ್ನು ಮುಂದುವರಿಸಿದ್ದರು. ಯಾಕೆಂದರೆ ಈ ಪ್ರಕರಣವನ್ನು ಮುಚ್ಚಲು ಬಯಸುತ್ತಿಲ್ಲ. ಅದನ್ನು ಜೀವಂತವಾಗಿ ಇರಿಸಲು ಪ್ರಯತ್ನಿಸುತ್ತಿದ್ದಾರೆ ಎಡಪಂತೀಯರು ಎಂದರು.
ಇದನ್ನೂ ಓದಿ: CM Siddaramaiah: ಮೈಸೂರು ದಸರಾದಲ್ಲಿ ಏರ್ ಶೋಗೆ ರಕ್ಷಣಾ ಇಲಾಖೆ ಅಸ್ತು, ಧನ್ಯವಾದ ಸಲ್ಲಿಸಿದ ಸಿಎಂ
ಈ ಸಂದರ್ಭದಲ್ಲಿ ವಸಂತ್ ಗಿಳಿಯಾರ್, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ನಾಗರಾಜ್ ಕುಂದರ್, ಬಾಲಕರ ರಾಮ ಭಜನಾ ಮಂದಿರದ ಅಧ್ಯಕ್ಷ ಸತೀಶ್ ಅಮೀನ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.