PDO Suspended: ಬೀದಿ ದೀಪ ಅಳವಡಿಸದಿರುವುದು, ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳದ ಆರೋಪ: ಪಂಚಾಯಿತಿ ಅವ್ಯವಸ್ಥೆ; ಫರಹತಾಬಾದ್ ಪಿಡಿಒ ಅಮಾನತು
ಕಲಬುರಗಿ ತಾಲೂಕಿನ ಫರಹತಾಬಾದ್ ಗ್ರಾಮ ಪಂಚಾಯಿತಿಯಲ್ಲಿ ಬೀದಿ ದೀಪಗಳ ಅಳವಡಿಕೆ ಹಾಗೂ ಚರಂಡಿ ಸ್ವಚ್ಛತೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಪಿಡಿಒ ವಿರುದ್ಧದ ಕ್ರಮಕ್ಕೆ ಕಾರಣ ವಾಗಿದೆ. ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ್ ಅಮಾನತು ಆದೇಶ ಹೊರಡಿಸಿದ್ದಾರೆ.
-
ಕಲಬುರಗಿ: ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಸಮಸ್ಯೆಗಳು ತೀವ್ರವಾಗಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಆರೋಪದ ಹಿನ್ನೆಲೆ ಫರಹತಾಬಾದ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರೇಮಾ ಎಸ್. ಅವರನ್ನು ಅಮಾನತುಗೊಳಿಸಲಾಗಿದೆ.
ಕಲಬುರಗಿ ತಾಲೂಕಿನ ಫರಹತಾಬಾದ್ ಗ್ರಾಮ ಪಂಚಾಯಿತಿಯಲ್ಲಿ ಬೀದಿ ದೀಪಗಳ ಅಳವಡಿಕೆ ಹಾಗೂ ಚರಂಡಿ ಸ್ವಚ್ಛತೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಪಿಡಿಒ ವಿರುದ್ಧದ ಕ್ರಮಕ್ಕೆ ಕಾರಣವಾಗಿದೆ. ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ್ ಅಮಾನತು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: PDO caught in Lokayukta trap: ಸರಕಾರಿ ಜಾಗ ಮ್ಯುಟೇಷನ್‌ಗೆ 18 ಸಾವಿರ ಲಂಚ: ಪಿಡಿಒ ಲೋಕಾಯುಕ್ತ ಬಲೆಗೆ
ಗ್ರಾಮದಲ್ಲಿ ಪಂಚಾಯಿತಿಗೆ ತೆರಿಗೆ ವಸೂಲಿ ಉತ್ತಮವಾಗಿದ್ದರೂ ಸಾರ್ವಜನಿಕರಿಗೆ ಅಗತ್ಯವಿರುವ ಬೀದಿ ದೀಪಗಳ ವ್ಯವಸ್ಥೆ ಮಾಡಿರಲಿಲ್ಲ. ಪರಿಣಾಮ ರಾತ್ರಿ ವೇಳೆ ಹಲವು ಪ್ರದೇಶಗಳು ಕತ್ತಲಿನಿಂದ ಕೂಡಿದ್ದವು. ಇದರ ಜತೆಗೆ ಪಂಚಾಯಿತಿ ಕಚೇರಿ ಮುಂಭಾಗದಲ್ಲೇ ಚರಂಡಿ ತುಂಬಿ ಹರಿಯು ತ್ತಿದ್ದರೂ ಸ್ವಚ್ಛತೆಗೆ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ದುರ್ವಾಸನೆ ಹಾಗೂ ಅನೈರ್ಮಲ್ಯ ಉಂಟಾಗಿತ್ತು.
ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಗ್ರಾಮದ 50ಕ್ಕೂ ಅಧಿಕ ಮಹಿಳೆಯರು ಇತ್ತೀಚೆಗೆ ಪಂಚಾಯಿತಿ ಕಚೇರಿ ಎದುರು ಬೆಳಗ್ಗೆಯಿಂದ ರಾತ್ರಿವರೆಗೂ ಧರಣಿ ನಡೆಸಿದ್ದರು. ಪ್ರತಿಭಟನೆಯ ಮಾಹಿತಿ ಹಿನ್ನೆಲೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಮನಿ ಗ್ರಾಮಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದರು.
ಪರಿಶೀಲನೆ ಸಂದರ್ಭದಲ್ಲಿಯೂ ಗ್ರಾಮದಲ್ಲಿ ಬೀದಿ ದೀಪಗಳ ಕೊರತೆ ಸೇರಿ ಮೂಲಸೌಕರ್ಯ ಸಮಸ್ಯೆಗಳು ಕಂಡುಬಂದಿದ್ದವು. ಈ ಕುರಿತು ಹಿರಿಯ ಅಧಿಕಾರಿಗಳಿಂದ ಸಲ್ಲಿಕೆಯಾದ ವರದಿ ಪರಿಶೀಲಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಪಿಡಿಒ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.