T20 World Cup final: ಮೋದಿ ಫೈನಲ್ ಮ್ಯಾಚ್ ನೋಡಲು ಹೋಗದಿದ್ರೆ ಭಾರತ ಗೆಲ್ಲುತ್ತೆ ಎಂದ ಪ್ರಿಯಾಂಕ್ ಖರ್ಗೆ
Kalaburagi News: ಮೊನ್ನೆ ಮದುವೆಯಾದ ರಶ್ಮಿಕಾ-ವಿಜಯ್ ಅವರನ್ನು ಭೇಟಿಯಾಗಲು ಪ್ರಧಾನಿ ಮೋದಿ ಅವರಿಗೆ ಸಮಯವಿದೆ. ಆದರೆ, ಆದರೆ, ನಮ್ಮ ದೇಶದ ಮರ್ಯಾದೆ ಹರಾಜಾಗುತ್ತಿರುವಾಗ ಈ ಬಗ್ಗೆ ಮಾತನಾಡಲು ಪುರಸೊತ್ತಿಲ್ಲ ಎಂದು ಪ್ರಧಾನಿ ಮೋದಿ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ. -
ಕಲಬುರಗಿ: ಮೋದಿ ಸರ್ಕಾರ ನಮ್ಮ ವಿದೇಶಾಂಗ ನೀತಿಯನ್ನು ಅಮೆರಿಕಕ್ಕೆ ಅಡ ಇಟ್ಟಿದೆ. ನಮ್ಮ ಗೌರವಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿ (PM Narendra Modi) ಹಾಗೂ ದೇಶದ ಮರ್ಯಾದೆ ಹೋಗುತ್ತಿದ್ದರೂ ಒಬ್ಬರೂ ಮಾತನಾಡುತ್ತಿಲ್ಲ ಯಾಕೆ ಎಂದು ಬಿಜೆಪಿ ಸಂಸದರನ್ನು ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ಪ್ರಶ್ನಿಸಿದ್ದಾರೆ.
ಎಲ್‌ಪಿಜಿ ಸಿಲಿಂಡರ್ ಏರಿಕೆ ಹಾಗೂ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಅನುಮತಿ ವಿಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ನೆನ್ನೆ ಯುಎಸ್ ಡೆಪ್ಯೂಟಿ ಸೆಕ್ರಟರಿ ಕ್ರಿಸ್ಟೋಫರ್ ದೆಹಲಿಯಲ್ಲಿ ಹೇಳ್ತಾರೆ, ನಾವು ಚೀನಾ ಜತೆ ಮಾಡಿದ ತಪ್ಪು ಭಾರತದೊಂದಿಗೆ ಮಾಡಲ್ಲ, ಭಾರತವನ್ನು ಬೆಳೆಯಲು ಬಿಡಲ್ಲ ಎಂದು ನಮ್ಮ ದೇಶದಲ್ಲೇ ಹೇಳುತ್ತಾರೆ ಎಂದರೆ ಪರಿಸ್ಥಿತಿ ಹೇಗಿದೆ ನೋಡಿ. ಮತ್ತೊಬ್ಬರು ಯುಎಸ್ ಸೆಕ್ರಟರಿ ಆಫ್ ಟ್ರೆಶರಿ ಸ್ಕಾಟ್ ಅವರು ನಾವು ಯುದ್ಧದ ಪರಿಣಾಮ 30 ದಿನ ರಷ್ಯಾ ಕಚ್ಚಾ ತೈಲ ಖರೀದಿಗೆ ಅನುಮತಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಇದಕ್ಕೆ ಒಬ್ಬ ಸಚಿವರಾದ ಎದೆಗಾರಿಕೆ ತೋರಿಸಿ ಪ್ರತಿಕ್ರಿಯಿಸಿಲ್ಲ ಎಂದು ಕಿಡಿಕಾರಿದರು.
ಮೊನ್ನೆ ಮದುವೆಯಾದ ರಶ್ಮಿಕಾ-ವಿಜಯ್ ಅವರನ್ನು ಭೇಟಿಯಾಗಲು ಪ್ರಧಾನಿ ಮೋದಿ ಅವರಿಗೆ ಸಮಯವಿದೆ. ಆದರೆ, ಆದರೆ, ನಮ್ಮ ದೇಶದ ಮರ್ಯಾದೆ ಹರಾಜಾಗುತ್ತಿರುವಾಗ ಈ ಬಗ್ಗೆ ಮಾತನಾಡಲು ಪುರಸೊತ್ತಿಲ್ಲ. ಮೊನ್ನೆ ಇಂಡಿಯಾ ತಂಡದ ಟಿ20 ಸೆಮಿಫೈನಲ್ ಪಂದ್ಯಕ್ಕೆ ವಿಶ್ ಮಾಡಿದ್ದರು. ನಾಳೆ ಫೈನಲ್ ಪಂದ್ಯಕ್ಕೂ ಆಲ್ ದ ಬೆಸ್ಟ್ ಎಂತಾರೆ ಎಂದರು.
ಈ ವೇಳೆ ಪ್ರಧಾನಿ ಮೋದಿ ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್ ಪಂದ್ಯ (IND vs NZ T20 World Cup final) ವೀಕ್ಷಣೆಗೆ ಹೋಗುವುದಿಲ್ಲವಂತೆ ಎಂದು ವರದಿಗಾರರು ಹೇಳಿದ್ದಕ್ಕೆ ಉತ್ತರಿಸಿದ ಸಚಿವ, ಒಳ್ಳೇದಾಯ್ತು, ಮೋದಿ ಹೋಗದಿದ್ದರೆ ಮ್ಯಾಚ್ ಗೆಲ್ಲಬಹುದು. ಅವರು ಕಾಲಿಟ್ಟಾಗೆಲ್ಲಾ ನಾವು ಸೋತಿದ್ದೇವೆ. ಇದನ್ನು ನಾನು ಹೇಳುತ್ತಿಲ್ಲ, ಅಂಕಿ ಅಂಶ ನೋಡಿ, ವಿತೌಟ್ ಡೇಟಾ ನಾನು ಮಾತನಾಡಲ್ಲ ಎಂದು ಹೇಳಿದರು.
ಹಿಲರಿ ಕ್ಲಿಂಟನ್ ಅವರ ಜತೆ ಮಾತುಕತೆ ವೇಳೆ ಇರಾನ್‌ನಿಂದ ತೈಲ ಖರೀದಿಸಬೇಕೋ, ಬೇಡವೋ ಎಂಬುವುದರ ಬಗ್ಗೆ ನಿರ್ಧಾರ ತೆಗದುಕೊಳ್ಳುವುದು ನನ್ನ ವ್ಯಾಪ್ತಿಗೆ ಬರುತ್ತೆ, ನಿಮ್ಮ ವ್ಯಾಪ್ತಿಗೆ ಬರಲ್ಲ ಎಂದು ಹೇಳಿದ್ದರು. ಅದೇ ರೀತಿ ಅಮೆರಿಕದಲ್ಲಿ ಸುದ್ದಿಗೋಷ್ಠಿ ಮಾಡಿ ಇರಾಕ್ ಮೇಲೆ ಅಮೆರಿಕ ದಾಳಿ ಮಾಡುತ್ತಿರುವುದು ತಪ್ಪು, ಮಧ್ಯ ಪ್ರಾಚ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ತಪ್ಪು ಎಂದು ಅಮೆರಿಕ ಅಧ್ಯಕ್ಷ ರಿಚರ್ಡ್ ಅವರು ಪಕ್ಕದಲ್ಲಿ ಕುಳಿತಿದ್ದಾಗಲೇ ಹೇಳಿದ್ದರು. ಅಂತಹ ಧೈರ್ಯ ಮೋದಿ ಅವರಿಗೆ ಇದೆಯೇ ಎಂದು ಪ್ರಶ್ನಿಸಿದರು.