ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಲಬುರಗಿಯ ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್‌; ನೀಟ್‌ ಬರೆದಿದ್ದ ವಿದ್ಯಾರ್ಥಿನಿ ಸಾವಿಗೆ ಕಾರಣ ಬಹಿರಂಗ!

ನೀಟ್ ಪರೀಕ್ಷೆ ಬರೆದಿದ್ದ ಕಲಬುರಗಿ ನಗರದ ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳು ಯಾವುದೋ ವಿಷಯದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಾರ ಮೇಲೂ ದೂರು ಇರುವುದಿಲ್ಲ ಎಂದು ಯುವತಿಯ ತಂದೆ ಸ್ಟೇಷನ್‌ ಬಜಾರ್ ಠಾಣೆಗೆ ದೂರು ನೀಡಿದ್ದರು. ಆದರೆ, ಇದೀಗ ಸಾವಿಗೆ ಕಾರಣ ಬಹಿರಂಗವಾಗಿದೆ.

ಕಲಬುರಗಿ ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆಗೆ ಕಾರಣ ಬಹಿರಂಗ

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಭಾಗ್ಯಶ್ರೀ. -

Prabhakara R
Prabhakara R May 24, 2026 5:09 PM

ಕಲಬುರಗಿ: ನೀಟ್ ಪರೀಕ್ಷೆ ಬರೆದ ಬೆನ್ನಲ್ಲೇ ನಗರದ ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ (Bhagyashree Suicide Case) ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಕೆ ಪಿಯುಸಿ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಳು ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಈ ವಿಷಯ ಮನೆಯವರಿಗೆ ಗೊತ್ತಾದರೆ ಎಲ್ಲಿ ಬೈಯುತ್ತಾರೋ ಎಂಬ ಭಯದಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ದ್ವಿತೀಯ ಪಿಯುಸಿ ಫಲಿತಾಂಶ ಬಂದಾಗ ವಿದ್ಯಾರ್ಥಿನಿ ಭಾಗ್ಯಶ್ರೀ ತನಗೆ 92% ಅಂಕಗಳು ಬಂದಿವೆ ಎಂದು ಹೆತ್ತವರ ಬಳಿ ಹೇಳಿಕೊಂಡಿದ್ದಳು. ಮಗಳ ಮಾತನ್ನು ನಂಬಿದ್ದ ಪೋಷಕರು, ಆಕೆ ವೈದ್ಯಕೀಯ ಶಿಕ್ಷಣ ಪಡೆಯಲು ನೀಟ್ ಪರೀಕ್ಷೆಗೆ ಸಂಪೂರ್ಣ ಬೆಂಬಲ ನೀಡಿದ್ದರು. ಇತ್ತೀಚೆಗಷ್ಟೇ ಭಾಗ್ಯಶ್ರೀ ನೀಟ್ ಪರೀಕ್ಷೆಯನ್ನೂ ಬರೆದಿದ್ದಳು.

ಈಗ ಲಭ್ಯವಾಗಿರುವ ಮಾರ್ಕ್ಸ್‌ಕಾರ್ಡ್ ಪ್ರಕಾರ ಭಾಗ್ಯಶ್ರೀ ದ್ವಿತೀಯ ಪಿಯುಸಿಯ ಗಣಿತ ಮತ್ತು ಭೌತಶಾಸ್ತ್ರ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಳು. ಬಳಿಕ ಆಕೆ ಭೌತಶಾಸ್ತ್ರ ಮತ್ತು ಗಣಿತ ಮರು ಪರೀಕ್ಷೆ ಬರೆದಿದ್ದಳು. ಭೌತಶಾಸ್ತ್ರದಲ್ಲಿ 51 ಅಂಕ ಪಡೆದು ತೇರ್ಗಡೆಯಾಗಿದ್ದರೆ, ಗಣಿತದಲ್ಲಿ 24 ಅಂಕ ಪಡೆದು ಅನುತ್ತೀರ್ಣಗೊಂಡಿದ್ದಳು. ಕಾಲೇಜಿನಿಂದ ನೀಡಲಾಗುವ 20 ಇಂಟರ್ನಲ್ (ಆಂತರಿಕ) ಅಂಕಗಳನ್ನು ಸೇರಿಸಿಯೂ ಆಕೆ ಗಣಿತದಲ್ಲಿ ಕೇವಲ 24 ಅಂಕ ಪಡೆದಿದ್ದಳು.

ದ್ವಿತೀಯ ಪಿಯುಸಿಯ ಪರೀಕ್ಷೆ-2ರ ಫಲಿತಾಂಶ ಮೇ 21 ರಂದು ಪ್ರಕಟವಾಗಿತ್ತು. ಪಿಯುಸಿ ಫಲಿತಾಂಶದಲ್ಲಿ ತಾನು ಫೇಲ್ ಆಗಿರುವ ವಿಷಯ ಮನೆಯವರಿಗೆ ಗೊತ್ತಾದರೆ ಎಲ್ಲಿ ಬೈಯುತ್ತಾರೋ ಅಥವಾ ಅವರ ನಿರೀಕ್ಷೆ ಸುಳ್ಳಾಯಿತಲ್ಲ ಎಂದು ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಯ ಹಾದಿ ಹಿಡಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮಗಳು ಯಾವುದೋ ವಿಷಯದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಾರ ಮೇಲೂ ದೂರು ಇರುವುದಿಲ್ಲ ಎಂದು ಯುವತಿಯ ತಂದೆ ಸ್ಟೇಷನ್‌ ಬಜಾರ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅವರ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Bhatkal Tragedy: ಭಟ್ಕಳದಲ್ಲಿ ಘೋರ ದುರಂತ; ತಟ್ಟಿಹಕ್ಕಲ ನದಿಯಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿದ್ದ 8 ಮಂದಿ ದಾರುಣ ಸಾವು

ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅನುಮಾನಗಳು ಸುಳಿದಾಡುತ್ತಿದ್ದವು. ಸದ್ಯ ವಿದ್ಯಾರ್ಥಿನಿಯ ಅಂಕಪಟ್ಟಿ ಕೈಸೇರುತ್ತಿದ್ದಂತೆ ತನಿಖೆಯ ದಿಕ್ಕು ಬದಲಾಗಿದೆ. ಈ ನಿಟ್ಟಿನಲ್ಲಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.