ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಯಿಲೆಗೆ ತಕ್ಕಂತೆ ಆಹಾರ ವಿತರಿಸಲು ಆರೋಗ್ಯ ಇಲಾಖೆ ಚಿಂತನೆ; ಹೀಗಿರಲಿದೆ ಮೆನು
Nutritional Meal Scheme: ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ವಯಸ್ಸು, ಕಾಯಿಲೆ ಹಾಗೂ ಚಿಕಿತ್ಸೆಗೆ ಅನುಗುಣವಾಗಿ ವಿಭಿನ್ನ ಮಾದರಿಯ ಪೌಷ್ಟಿಕ ಆಹಾರ ವಿತರಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಆ. 19: ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ವಯಸ್ಸು, ಕಾಯಿಲೆ ಹಾಗೂ ಚಿಕಿತ್ಸೆಗೆ ಅನುಗುಣವಾಗಿ ವಿಭಿನ್ನ ಮಾದರಿಯ ಪೌಷ್ಟಿಕ ಆಹಾರ ವಿತರಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ (Nutritional Meal Scheme). ಸದ್ಯ ಎಲ್ಲ ರೋಗಿಗಳಿಗೂ ಬಹುತೇಕ ಒಂದೇ ಮಾದರಿಯ ಸಾಮಾನ್ಯ ಆಹಾರ ನೀಡಲಾಗುತ್ತಿದ್ದು, ಈ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದೇ ಮಾದರಿಯ ಆಹಾರ ಪದ್ಧತಿ ಬೆಂಗಳೂರಿನಲ್ಲಿ ಅಳವಡಿಸಲಾಗಿದ್ದು, ಯಶಸ್ವಿಯಾದ ಹಿನ್ನೆಲೆಯಲ್ಲಿ ಎಲ್ಲ ಕಡೆ ಜಾರಿಗೊಳಿಗೊಳಿಸಲು ನಿರ್ಧರಿಸಲಾಗಿದೆ.
ಸಾಮಾನ್ಯ ರೋಗಿಗಳು, ಚಿಕಿತ್ಸಾ ಆಹಾರದ ಅಗತ್ಯವಿರುವ ರೋಗಿಗಳು, ಗರ್ಭಿಣಿ ಹಾಗೂ ಬಾಣಂತಿಯರು ಮತ್ತು ಮಕ್ಕಳು ಸೇರಿ ಒಟ್ಟು 4 ಮಾದರಿಯ ಆಹಾರ ನೀಡಲು ಇಲಾಖೆ ಚಿಂತನೆ ನಡೆಸಿದೆ. ಅಧಿಕೃತ ಅನುಮೋದನೆ ಬಳಿಕ ರಾಜ್ಯಾದ್ಯಂತ ಜಾರಿಗೆ ಬರಲಿದೆ.
ʼʼಮುಂದಿನ ದಿನಗಳಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ರೋಗಿಯ ಕಾಯಿಲೆ, ಚಿಕಿತ್ಸೆ ಹಾಗೂ ವಯಸ್ಸಿಗೆ ಅನುಗುಣವಾಗಿ ಆಹಾರ ನೀಡುವ ಬಗ್ಗೆ ಚಿಂತನೆ ನಡೆದಿದೆ. ಇದರ ಜತೆಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಆಹಾರ ಪದ್ಧತಿಗೆ ಅನುಗುಣವಾಗಿ ಮೆನು ರೂಪಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆʼʼ ಎಂದು ಆರೋಗ್ಯ ಇಲಾಖೆ ಆಯುಕ್ತ ಗುರುದತ್ ಹೆಗ್ಡೆ ವಿವರಿಸಿದ್ದಾರೆ.
ವರ್ಷಾರಂಭದಲ್ಲಿ ಜಾರಿ?
ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಹೊಸ ಮೆನು ಜಾರಿಗೆ ಬರುವ ಸಾಧ್ಯತೆ ಇದೆ. ʼʼಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆʼʼ ಎಂದು ಅವರು ತಿಳಿಸಿದ್ದಾರೆ. ವಾರದ ಎಲ್ಲ ದಿನಗಳಲ್ಲೂ ಒಂದೇ ರೀತಿಯ ಆಹಾರ ನೀಡದೆ, ಪ್ರತಿದಿನ ವಿಭಿನ್ನ ಪೌಷ್ಟಿಕ ಆಹಾರ ನೀಡುವ ವ್ಯವಸ್ಥೆ ರೂಪಿಸಲಾಗುತ್ತಿದೆ.
ಹೀಗಿರಲಿದೆ ಮೆನು
ಸಾಮಾನ್ಯ ರೋಗಿಗಳಿಗೆ: ರವೆ ಉಪ್ಪಿಟ್ಟು, ಕಾಫಿ, ಬಾಳೆಹಣ್ಣು, ರಾಗಿ ಮುದ್ದೆ-ಸಾಂಬಾರ್, ಸೋಯಾ ಚಂಕ್ಸ್, ಟೀ-ಬಿಸ್ಕೆಟ್, ಚಪಾತಿ-ಪಲ್ಯ, ಮೊಟ್ಟೆ ಅಥವಾ ಸೋಯಾ ಚಂಕ್ಸ್ ಹಾಗೂ ಗೋಧಿ ಗಂಜಿ.
ಚಿಕಿತ್ಸೆ ಪಡೆಯುತ್ತಿರುವವರಿಗೆ: ಉಪ್ಪಿಟ್ಟು, ಮೊಳಕೆಕಾಳು, ಕಾಫಿ, ಮಜ್ಜಿಗೆ, ರಾಗಿ ಮುದ್ದೆ-ಸಾಂಬಾರ್, ಸಕ್ಕರೆ ರಹಿತ ಟೀ-ಬಿಸ್ಕೆಟ್, ಚಪಾತಿ-ಪಲ್ಯ-ಸಾಂಬಾರ್, ಗೋಧಿ ಗಂಜಿ-ತರಕಾರಿ ಸಲಾಡ್, ಪೊಂಗಲ್, ಬ್ರೆಡ್ ಮತ್ತು ಕಾಫಿ.
ಗರ್ಭಿಣಿ ಹಾಗೂ ಬಾಣಂತಿಯರಿಗೆ: ಉಪ್ಪಿಟ್ಟು, ಮೊಳಕೆಕಾಳು, ಕಾಫಿ, ಹಾಲು, ಬಾಳೆಹಣ್ಣು, ಮುದ್ದೆ-ಸಾಂಬಾರ್, ಸೋಯಾ ಚಂಕ್ಸ್, ಟೀ-ಬಿಸ್ಕೆಟ್, ಚಿಕ್ಕಿ, ಚಪಾತಿ-ಪಲ್ಯ, ಮೊಟ್ಟೆ ಅಥವಾ ಕಿತ್ತಳೆ ಹಣ್ಣು.
ಮಕ್ಕಳಿಗೆ: ರವೆ ಇಡ್ಲಿ, ಗೋಧಿ ಗಂಜಿ, ಪೊಂಗಲ್, ಬ್ರೆಡ್-ಕಾಫಿ, ಹಾಲು-ಬಾಳೆಹಣ್ಣು, ಅನ್ನ-ಸಾಂಬಾರ್ ಹಾಗೂ ಮೊಟ್ಟೆ ಅಥವಾ ಸೋಯಾ ಚಂಕ್ಸ್ ನೀಡಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಆಸ್ಪತ್ರೆಗಳಿಗೆ ಇಸ್ಕಾನ್ ಊಟ
ಕಳೆದ ವರ್ಷ ಇದೇ ರೀತಿಯ ಯೋಜನೆಯನ್ನು ಇಸ್ಕಾನ್ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ಜಾರಿಗೆ ತರಲಾಗಿತ್ತು. ಆರೋಗ್ಯ ಇಲಾಖೆ ಇಸ್ಕಾನ್ ದೇವಾಲಯದ ಸಹಭಾಗಿತ್ವದಲ್ಲಿ ಐದು ಪ್ರತ್ಯೇಕ ಆಹಾರ ಯೋಜನೆಗಳನ್ನು ರೂಪಿಸಿದ್ದು, ಸಾಮಾನ್ಯ ಆಹಾರ, ಚಿಕಿತ್ಸಾ ಆಹಾರ, ಗರ್ಭಿಣಿ ಮತ್ತು ಬಾಣಂತಿಯರು, ಮಧುಮೇಹಿಗಳು ಹಾಗೂ ಮಕ್ಕಳಿಗೆ ಎಂದು ವಿಂಗಡಣೆ ಮಾಡಲಾಗಿತ್ತು. ಇದೀಗ ಈ ಮಾದರಿ ರಾಜ್ಯಾದ್ಯಂತ ಜಾರಿಗೆ ಬರಲಿದೆ.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.