ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karnataka Weather: ರಾಜ್ಯದಲ್ಲಿ ತಾಪಮಾನ ತೀವ್ರ ಏರಿಕೆ, ಹಲವೆಡೆ ಆಲಿಕಲ್ಲು ಮಳೆ ಸಾಧ್ಯತೆ

ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದನ್ನು ತಪ್ಪಿಸಲು, ಮಕ್ಕಳು ಬಿಸಿಲಿನಲ್ಲಿ ಆಟವಾಡುವುದನ್ನು ನಿಯಂತ್ರಿಸಲು ಸೂಚಿಸಲಾಗಿದೆ.

ರಾಜ್ಯದಲ್ಲಿ ತಾಪಮಾನ ತೀವ್ರ ಏರಿಕೆ, ಹಲವೆಡೆ ಆಲಿಕಲ್ಲು ಮಳೆ ಸಾಧ್ಯತೆ

ಸಾಂದರ್ಭಿಕ ಚಿತ್ರ -

ಹರೀಶ್‌ ಕೇರ
ಹರೀಶ್‌ ಕೇರ Apr 25, 2026 7:46 AM

ಬೆಂಗಳೂರು, ಏ. 25: ಬೆಂಗಳೂರು (Bengaluru) ಸೇರಿದಂತೆ ಹಲವೆಡೆ ತಾಪಮಾನ (heat) ಹೆಚ್ಚಾಗಿದ್ದು, ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕ ಬಿಸಿಲಿನ ಬೇಗೆಗೆ ತತ್ತರಿಸಿದೆ. ಇಂದು ಕರಾವಳಿಯಲ್ಲಿ ಉಷ್ಣ ಅಲೆಯ (heat wave) ಆರ್ಭಟವಿರಲಿದೆ. ಜೊತೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ (hailstorm) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (Karnataka Weather) ನೀಡಿದೆ.

ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಉತ್ತರ ಒಳನಾಡಿನ ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಲಿದ್ದು, ಈ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ನೀಡಲಾಗಿದೆ. ಉಳಿದೆಡೆ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ 30-40 ಕಿ. ಮೀ ವೇಗದಲ್ಲಿ ಗಾಳಿಯೂ ಬೀಸಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿಯ ತಾಪಮಾನದಲ್ಲಿ ಏರುಪೇರಾಗುತ್ತಿದ್ದು, ಬಿಸಿಲ ಬೇಗೆಗೆ ಜನರು ತತ್ತರಿಸಿಹೋಗಿದ್ದಾರೆ. ಇಂದು ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೀಟ್​ ವೇವ್ ಅಲರ್ಟ್​ ಘೋಷಿಸಲಾಗಿದೆ. ಅದರ ಜೊತೆಗೆ ಗುಡುಗು ಸಹಿತ ಗಾಳಿ-ಮಳೆಯಾಗುವ ಸಂಭವವೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನದವರೆಗೂ ಕರಾವಳಿಯಲ್ಲಿ ಇದೇ ರೀತಿಯ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

Dharwad Rain: ಆಲಿಕಲ್ಲು ಮಳೆಯಿಂದ ಕಾಶ್ಮೀರದಂತೆ ಬದಲಾದ ಧಾರವಾಡದ ಕಲಘಟಗಿ; ವಿಡಿಯೊ ವೈರಲ್‌

ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದನ್ನು ತಪ್ಪಿಸುಂತೆ ಹೇಳಲಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಲ್ಲಿ ಆಟವಾಡುವುದನ್ನು ಆದಷ್ಟು ನಿಯಂತ್ರಿಸುವಂತೆ ಸೂಚಿಸಲಾಗಿದೆ.

ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.