Baldota Steel Factory: ಬಲ್ಡೋಟಾ ವಿರುದ್ಧ ಮತ್ತೆ ಭುಗಿಲೆದ್ದ ರೈತರ ಆಕ್ರೋಶ; ಕಾರ್ಖಾನೆ ಗೇಟ್, ಕಾಂಪೌಂಡ್ ಛಿದ್ರ
Farmers protest in Koppal: ಕೊಪ್ಪಳ ತಾಲೂಕಿನ ಬಸಾಪುರ ಬಳಿಯ ಬಲ್ಡೋಟಾ ಕಾರ್ಖಾನೆ ಬಳಿ 46ನೇ ರೈತ ಹುತಾತ್ಮ ದಿನಾಚರಣೆಯ ಪ್ರಯುಕ್ತ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ನೂರಾರು ರೈತರು, ಕಾರ್ಖಾನೆ ಆವರಣಕ್ಕೆ ನುಗ್ಗಿ, ಆಕ್ರೋಶ ವ್ಯಕ್ತಪಡಿಸಿದರು. ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
-
ಕೊಪ್ಪಳ: ಬಲ್ಡೋಟಾ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಕಾರ್ಖಾನೆ (Baldota Steel Factory) ವಿರುದ್ಧ ಮತ್ತೆ ರೈತರ ಆಕ್ರೋಶ ಭುಗಿಲೆದ್ದಿದೆ. ನಗರದ ಹೊರವಲಯದಲ್ಲಿರುವ ಬಲ್ಡೋಟಾ ಕಾರ್ಖಾನೆ ಎದುರು ಮಂಗಳವಾರ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಿಡಿದೆದ್ದ ನೂರಾರು ರೈತರು, ಕಾರ್ಖಾನೆಯ ಗೇಟ್ ಮುರಿದು, ಕಾಂಪೌಂಡ್ ಒಡೆದು ಒಳ ನುಗ್ಗಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ತಾಲೂಕಿನ ಬಸಾಪುರ ಬಳಿಯ ಬಲ್ಡೋಟಾ ಕಾರ್ಖಾನೆ ಬಳಿ 46ನೇ ರೈತ ಹುತಾತ್ಮ ದಿನಾಚರಣೆಯ ಪ್ರಯುಕ್ತ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಸೇರಿ ರಾಜ್ಯದ ವಿವಿಧ ಭಾಗಗಳ ರೈತ ನಾಯಕರು ಮತ್ತು ಸಾವಿರಾರು ರೈತರು ಭಾಗವಹಿಸಿದ್ದರು.

ಸಮಾವೇಶದ ವೇಳೆ ರೈತರು, ಕಾರ್ಖಾನೆ ಆವರಣಕ್ಕೆ ನುಗ್ಗಿ, "ಬಲ್ಡೋಟಾ ಹಠಾವೋ, ಕೊಪ್ಪಳ ಬಚಾವೋ' ಎಂದು ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಸದ್ಯ ಕಾರ್ಖಾನೆಯ ಸುತ್ತಮುತ್ತ ಉದ್ವಿಗ್ನ ಸ್ಥಿತಿ ಮುಂದುವರಿದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
#Karnataka #Breaking
— Mahesh M Goudar (@IamMGoudar) July 21, 2026
Farmers Storm Baldota Factory, Break Main Gate and Breach Compound Wall
Koppal: The farmers’ protest on the occasion of #Farmers’ Martyrs’ Day turned volatile as hundreds of protesters stormed the #Baldota factory premises by breaking the main entrance… pic.twitter.com/jTqjjzb0J3
ಬಸಾಪುರ ಕೆರೆ ಮರಳಿಸಲು ಒತ್ತಾಯ
ಬಲ್ಡೋಟಾ ಕಂಪನಿಗೆ ಸರ್ಕಾರ ಸುಮಾರು 35 ಎಕರೆ ವಿಸ್ತೀರ್ಣದ ಬಸಾಪುರ ಕೆರೆಯನ್ನು ನೀಡಿರುವ ಕ್ರಮವನ್ನು ರೈತರು ತೀವ್ರವಾಗಿ ವಿರೋಧಿಸಿದ್ದಾರೆ. ಸಾರ್ವಜನಿಕರ ಉಪಯೋಗಕ್ಕೆ, ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಹಾಗೂ ರೈತರ ಜಮೀನುಗಳಿಗೆ ನೀರು ಪೂರೈಸಲು ಬಳಸಬೇಕಾದ ಬಸಾಪುರ ಕೆರೆಯನ್ನು ಖಾಸಗಿ ಕಂಪನಿಗೆ ನೀಡಿರುವುದು ರೈತ ವಿರೋಧಿ ನಿರ್ಧಾರವಾಗಿದೆ ಎಂದು ಕೊಪ್ಪಳ ಭಾಗದ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ಬಸಾಪುರ ಕೆರೆಯನ್ನು ಸಾರ್ವಜನಿಕರ ಬಳಕೆಗೆ ಮರಳಿ ನೀಡಬೇಕು ಹಾಗೂ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು ಎಂಬುವುದು ರೈತರ ಆಗ್ರಹವಾಗಿದೆ.
ಬೃಹತ್ ಉಕ್ಕಿನ ಕಾರ್ಖಾನೆಯಿಂದ ಹೊರಸೂಸುವ ರಾಸಾಯನಿಕಗಳು, ಧೂಳು ಮತ್ತು ತ್ಯಾಜ್ಯದಿಂದಾಗಿ ಗಾಳಿ, ನೀರು ಮಲಿನಗೊಂಡು ಕೃಷಿ ಭೂಮಿ, ಬೆಳೆ ಹಾಗೂ ಸ್ಥಳೀಯರ ಆರೋಗ್ಯಕ್ಕೆ ಹಾನಿಯಾಗಲಿದೆ ಎಂಬುವುದು ರೈತರ ಆತಂಕವಾಗಿದೆ. ಹೀಗಾಗಿ ಬಲ್ಡೋಟಾ ಕಂಪನಿ ವಿರುದ್ಧ ರೈತರ ಹೋರಾಟ ಮುಂದುವರಿದಿದೆ.