Chief minister: ಮುಖ್ಯಮಂತ್ರಿ ಬದಲಾವಣೆ ವಿಚಾರ ಮಾತನಾಡಿದ್ದ ನಾಯಕರಿಗೆ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್
KPCC Notice: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಅಂತ ಹೇಳಿಕೆ ನೀಡಿದ್ದ ಕುಣಿಗಲ್ ಶಾಸಕ ಡಾ. ಹೆಚ್‌ಡಿ ರಂಗನಾಥ್ ಹಾಗೂ ಹಿರಿಯ ನಾಯಕ ಎಲ್‌ಆರ್ ಶಿವರಾಮೇಗೌಡಗೆ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ನೋಟಿಸ್ ನೀಡಿ, ನೋಟಿಸ್ ತಲುಪಿದ 7 ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.

ಶಿವರಾಮೇಗೌಡ, ರಂಗನಾಥ್ -

ಬೆಂಗಳೂರು: ಮುಖ್ಯಮಂತ್ರಿ (Chief Minister) ಬದಲಾವಣೆ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ (Congress) ನಾಯಕರಿಗೆ ಕೆಪಿಸಿಸಿ (KPCC) ನೋಟೀಸ್ ಕೊಟ್ಟಿದೆ. ಕೆಪಿಸಿಸಿ ಅಧ್ಯಕ್ಷರೂ (KPCC President) ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ (CM DK Shivakumar) ಅವರ ಸಂಬಂಧಿ, ಕುಣಿಗಲ್ ಶಾಸಕ ಡಾ. ಹೆಚ್‌ಡಿ ರಂಗನಾಥ್ ಹಾಗೂ ಹಿರಿಯ ನಾಯಕ ಎಲ್.ಆರ್. ಶಿವರಾಮೇಗೌಡಗೆ ಕೆಪಿಸಿಸಿ ನೋಟಿಸ್ (Notice) ನೀಡಿದೆ. ಕೆಪಿಸಿಸಿ ಶಿಸ್ತುಪಾಲನಾ ಸಮೀತಿಯಿಂದ ನೋಟಿಸ್ ನೀಡಲಾಗಿದ್ದು, ಈ ನೋಟಿಸ್ ತಲುಪಿದ 7 ದಿನಗಳ ಒಳಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಅಂತ ಹೇಳಿಕೆ ನೀಡಿದ್ದ ಕುಣಿಗಲ್ ಶಾಸಕ ಡಾ. ಹೆಚ್‌ಡಿ ರಂಗನಾಥ್ ಹಾಗೂ ಹಿರಿಯ ನಾಯಕ ಎಲ್‌ಆರ್ ಶಿವರಾಮೇಗೌಡಗೆ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ನೋಟಿಸ್ ನೀಡಿದ್ದಾರೆ. ಈ ನೋಟಿಸ್ ತಲುಪಿದ 7 ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ. ಕುಣಿಗಲ್ ಶಾಸಕ ಡಾ. ರಂಗನಾಥ್ ಡಿಕೆ ಶಿವಕುಮಾರ್ ಅವರ ಸಂಬಂಧಿಕರಾಗಿದ್ದು, ಡಿಕೆಶಿ ಆಪ್ತ ಬಣದಲ್ಲಿ ಗುರುತಿಸಲ್ಪಟ್ಟಿದ್ದರು. ಆದರೆ ತಮ್ಮ ಸಂಬಂಧಿ ಎಂಬುದನ್ನೂ ನೋಡದೇ ಶಾಸಕ ರಂಗನಾಥ್‌ಗೆ ಡಿಕೆಶಿ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ. ಬೆಳಿಗ್ಗೆ ತಾನೇ ನೋಟಿಸ್ ನೀಡೋದಾಗಿ ಡಿಕೆಶಿ ಎಚ್ಚರಿಸಿದ್ದರು. ಹೇಳಿದ ಕೆಲವೇ ಗಂಟೆಯಲ್ಲಿ ನೋಟಿಸ್ ಜಾರಿಯಾಗಿದೆ.
ಡಾ. ರಂಗನಾಥ್, ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಅಂತ ಹೇಳಿಕೆ ನೀಡಿದ್ದರು. ಡಿ.ಕೆ.ಶಿವಕುಮಾರ್ ಅವರ ಶಕ್ತಿ ಮತ್ತು ಶ್ರಮವನ್ನು ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಿ, ಸೂಕ್ತ ಸ್ಥಾನಮಾನ ನೀಡಬೇಕು ಅಂತ ಆಗ್ರಹಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ 140 ಸ್ಥಾನಗಳನ್ನು ಗೆದ್ದಿರುವುದರ ಹಿಂದೆ ಡಿ.ಕೆ. ಶಿವಕುಮಾರ್ ಅವರ ಶಕ್ತಿ ಹಾಗೂ ಶ್ರಮವಿದೆ ಎಂದಿದ್ದ ಅವರು, ಡಿಕೆ ಶಿವಕುಮಾರ್ ಅವರು ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಅವರು ಮುಂದೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದರು.
ಅತ್ತ ನಾಗಮಂಗಲದಲ್ಲಿ ಮಾತನಾಡಿದ್ದ ಎಲ್ಆರ್ ಶಿವರಾಮೇಗೌಡ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನವೆಂಬರ್ನಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ನಂಬಿಕೆ ನಮಗಿದೆ ಎಂದಿದ್ದರು. ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಹಳೆ ಮೈಸೂರು ಭಾಗದವರಾದ ನಮ್ಮೆಲ್ಲರ ಇಚ್ಛೆ. ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಆದರೆ ಕಾಂಗ್ರೆಸ್‌ನಲ್ಲಿ ಏನೇ ಬೆಳವಣಿಗೆ ಆಗುವುದಿದ್ದರೂ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳುತ್ತದೆ ಎಂದಿದ್ದರು.
ಕೆಪಿಸಿಸಿ ನೀಡಿರೋ ನೋಟಿಸ್‌ನಲ್ಲಿ ಏನಿದೆ?
ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ತಾವುಗಳು ಹೇಳಿಕೆ ನೀಡಿರುವುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಗೊಂದಲ ಹಾಗೂ ಪಕ್ಷಕ್ಕೆ ಮುಜುಗರ ಉಂಟಾಗುವ ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದೆಂದು ಎಐಸಿಸಿ ಸೂಚನೆ ಇದ್ದಾಗ್ಯೂ ತಾವು ಈ ಬಗ್ಗೆ ಹೇಳಿಕೆ ನೀಡಿದ್ದೀರಿ ಅಂತ ನೋಟಿಸ್‌ನಲ್ಲಿ ಆಕ್ಷೇಪಿಸಲಾಗಿದೆ.
ನಿಮ್ಮ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡಿರುವುದಲ್ಲದೇ, ಪಕ್ಷದ ಶಿಸ್ತು ಉಲ್ಲಂಘನೆಗೆ ಕಾರಣವಾಗುತ್ತದೆ. ತಮ್ಮ ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ತಾವುಗಳು ಈ ನೋಟಿಸ್ ತಲುಪಿದ ಒಂದು ವಾರದ ಒಳಗಾಗಿ ತಮ್ಮ ಹೇಳಿಕೆಗಳ ಬಗ್ಗೆ ಸಮಜಾಯಿಷಿ ನೀಡಲು ಸೂಚಿಸಲಾಗಿದೆ ಎಂದು ನೋಟಿಸ್‌ನಲ್ಲಿ ತಾಕೀತು ಮಾಡಲಾಗಿದೆ.
ಈ ಹಿಂದೆಯೂ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್ ಶಾಸಕರಿಗೆ ಕಪಿಸಿಸಿ ಶಿಸ್ತು ಪಾಲನಾ ಸಮಿತಿ ನೋಟಿಸ್ ನೀಡಿತ್ತು. ಶಾಸಕರಾದ ಬಸವರಾಜ್ ಶಿವಗಂಗಾ, ಮಾಗಡಿ ಬಾಲಕೃಷ್ಣ, ಇಕ್ಬಾಲ್ ಹುಸೇನ್ ಸೇರಿದಂತೆ ಹಲವರಿಗೆ ನೋಟಿಸ್ ನೀಡಲಾಗಿತ್ತು.
ಇದನ್ನೂ ಓದಿ: G Parameshwar: ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಇಲ್ಲ, ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ: ಪರಮೇಶ್ವರ್