ಶ್ರೀರಂಗಪಟ್ಟಣದಲ್ಲಿ ಸೆಕ್ಷನ್ 144 ಜಾರಿ
ಶ್ರೀರಂಗಪಟ್ಟಣದಲ್ಲಿ ಸೆಕ್ಷನ್ 144 ಜಾರಿ
-
Vishwavani News
Jun 4, 2022 5:55 PM
ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದಕ್ಕೆ ಸಂಬಂಧಿಸಿ ವಿಶ್ವ ಹಿಂದೂ ಪರಿಷತ್ ಶನಿವಾರ ಆಂಜನೇಯ ಸ್ವಾಮಿ ಮೂಲ ಮಂದಿರ ಚಲೋಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಗೊಳಿಸಲಾಗಿದೆ.
ತಹಶೀಲ್ದಾರ್ ಶ್ವೇತಾ ರವೀಂದ್ರ ಸೆಕ್ಷನ್ 144 ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ಸಾರ್ವಜನಿಕ ಸಭೆ, ಮೆರವಣಿಗೆ, ಪ್ರತಿಭಟನೆ ಅಥವಾ ರಥಯಾತ್ರೆಗಳನ್ನು ನಿರ್ಬಂಧಿಸಿದ್ದಾರೆ. ಸೆಕ್ಷನ್ 144 ರ ಅಡಿಯಲ್ಲಿ ನಿರ್ಬಂಧಗಳು ಜೂನ್ 3ರ ಸಂಜೆ 6 ಗಂಟೆ ಯಿಂದ ಜೂನ್.5ರ ಬೆಳಿಗ್ಗೆ 6 ಗಂಟೆಯವರೆಗೆ ಸೆಕ್ಷನ್144 ಜಾರಿಯಲ್ಲಿರಲಿದೆ.
ಮಂದಿರಕ್ಕೆ ಚಲೋ ಹಿನ್ನೆಲೆಯಲ್ಲಿ ಪ್ರತೀ ಶನಿವಾರ ನಡೆಯುವ ಸಂತೆಯನ್ನು ಮುಂದೂಡಿರುವುದಾಗಿ ಪುರಸಭಾ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಅಂದು ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ನಡೆಯುವ ಶನಿವಾರದ ಸಂತೆ ರದ್ದುಪಡಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ರೈತರು, ವರ್ತಕರು, ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಕೊಂಡಿ ದ್ದಾರೆ. ಅಲ್ಲದೆ, ಸಂತೆಯನ್ನು ಜೂನ್ 6ರ ಭಾನುವಾರಕ್ಕೆ ಮುಂದೂಡಿರುವುದಾಗಿ ತಿಳಿಸಿದ್ದಾರೆ.
500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ನಾಲ್ಕು ಕಡೆ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. ಎಸ್'ಪಿ ಎನ್ ಸತೀಶ್ ಅವರ ನೇತೃತ್ವದಲ್ಲಿ ರೂಟ್ ಮಾರ್ಚ್ ಕೂಡ ನಡೆಯಲಿದೆ.
ಹಿಂದೂಪರ ಸಂಘಟನೆಗಳಿಂದ ಶ್ರೀರಂಗಪಟ್ಟಣದಲ್ಲಿ ಮೂಲ ಮಂದಿರ ಚಲೋಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜಾಮಿಯ ಮಸೀದಿ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಪೊಲೀಸರನ್ನು ಮಸೀದಿಗೆ ಕಣ್ಗಾವಲು ಹಾಕಿ ಭದ್ರತೆ ನಿಯೋಜಿಸಲಾಗಿದೆ.
ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಹಿಂದೂಪರ ಸಂಘಟನೆಗಳ ಮನವಿಯನ್ನು ಭಾರತೀಯ ಪುರಾತತ್ವ ಇಲಾಖೆಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿಗಾಗಿ ಕಾಯುತ್ತಿದ್ದೇವೆಂದು ಹೇಳಿದ್ದಾರೆ.