ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ; ಗಜಪಡೆಗೆ ಸಿಂಗಾರ, ಅಂಬಾರಿ ಹೊರಲು ಪ್ರಶಾಂತ ಸಜ್ಜು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಭವ್ಯ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ವಿಜಯದಶಮಿಯ ಅಂಗವಾಗಿ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯಲಿವೆ. ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾದ ಗಜಪಡೆಯನ್ನು ಬಣ್ಣ ಬಣ್ಣದ ಚಿತ್ತಾರಗಳಿಂದ ಕಲಾವಿದರು ಸಿಂಗರಿಸಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 21, 2026 8:43 AM

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಭವ್ಯ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ವಿಜಯದಶಮಿಯ (Vijayadashami) ಅಂಗವಾಗಿ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಕ್ಯಾಪ್ಟನ್ ಪ್ರಶಾಂತ ಆನೆ ಮೊದಲ ಬಾರಿಗೆ ಚಾಮುಂಡೇಶ್ವರಿ ಉತ್ಸವಮೂರ್ತಿ ಇರುವ ಸುಮಾರು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ.

ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾದ ಗಜಪಡೆಯನ್ನು ಬಣ್ಣ ಬಣ್ಣದ ಚಿತ್ತಾರಗಳಿಂದ ಕಲಾವಿದರು ಸಿಂಗರಿಸಿದ್ದಾರೆ. ಸೊಂಡಿಲು, ಕಿವಿ, ದಂತ, ಕಾಲು ಹಾಗೂ ಅದರ ಬಾಲದ ಮೇಲೆ ಗಂಡುಬೇರುಂಡ, ಶಂಖ, ಎಲೆ ಆಕಾರ ಸೇರಿದಂತೆ ವಿವಿಧ ರೀತಿಯ ಚಿತ್ತಾರವನ್ನು ಬಿಡಿಸಿ ಸಜ್ಜುಗೊಳಿಸಿದ್ದಾರೆ. ಇಂದು ಬೆಳಗ್ಗೆ 8:00 ಗಂಟೆಗೆ ಪಟ್ಟದ ಆನೆ ಕುದುರೆ, ಹಸುಗಳನ್ನು ಆನೆ ಬಾಗಿಲಿನ ಮೂಲಕ ಕರೆತರಲಾಗುವುದು. ಆನಂತರ 8.15ಕ್ಕೆ ಕಲ್ಯಾಣ ಮಂಟಪದಲ್ಲಿ ಉತ್ತರಪೂಜೆ ಪ್ರಾರಂಭವಾಗಲಿದ್ದು, ಬಳಿಕ ಜಟ್ಟಿಕಾಳಗದ ನಂತರ 9:30ರಿಂದ 10:10ರವರೆಗೆ ವಿಜಯಯಾತ್ರೆ ನಡೆಯಲಿದೆ.

ಇಂದು ಸಂಜೆ 04:10ರಿಂದ 04:35ರವರೆಗಿನ ಶುಭ ಮೀನ ಲಗ್ನದಲ್ಲಿ ಮೈಸೂರು ಅರಮನೆಯ ಮುಂಭಾಗದಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿರುವ ತಾಯಿ ಚಾಮುಂಡೇಶ್ವರಿ ದೇವಿಗೆ CM ಡಿಕೆ ಶಿವಕುಮಾರ್‌ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಸಂಜೆ 4.35: ಅಂಬಾವಿಲಾಸ ಅರಮನೆಯಿಂದ ಜಂಬೂಸವಾರಿ ಆರಂಭವಾಗಲಿದೆ.

ಈ ಬಾರಿಯ ಜಂಬೂಸವಾರಿಯಲ್ಲಿ ಅಂಬಾರಿ ಹೊರಲು ಪ್ರಶಾಂತ ಆನೆ ಆಯ್ಕೆ; ಮಹೇಂದ್ರನಿಗೆ ಕೈ ತಪ್ಪಿದ ಚಾನ್ಸ್‌

ಅರಮನೆ ಅಂಗಳದಿಂದ ಹೊರಡುವ ಜಂಬೂಸವಾರಿಯು ಸಯ್ಯಾಜಿರಾವ್ ರಸ್ತೆ ಮೂಲಕ ಸಾಗಿ ಬನ್ನಿಮಂಟಪ ಮೈದಾನವನ್ನು ತಲುಪಲಿದೆ. ಈ ಭವ್ಯ ಹಾದಿಯಲ್ಲಿ ಕರ್ನಾಟಕದ ವಿಭಿನ್ನ ಸಂಸ್ಕೃತಿಯನ್ನು ಬಿಂಬಿಸುವ 70ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಮತ್ತು ವಿವಿಧ ಜಿಲ್ಲೆಗಳ ಆಕರ್ಷಕ 32 ಸ್ತಬ್ಧಚಿತ್ರಗಳು ಪ್ರದರ್ಶನಗಳು ನಡೆಯಲಿದೆ. ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ನಗಾರಿ, ಪೂಜಾ ಕುಣಿತ, ಗೊರವನ ಕುಣಿತ, ತಮಟೆ ಮತ್ತು ಕೋಲಾಟ ಸೇರಿದಂತೆ ವಿವಿಧ ಜಾನಪದ ಕಲಾಪ್ರಕಾರಗಳು ಜನರ ಗಮನ ಸೆಳೆಯಲಿವೆ. ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ತುಕಡಿಗಳೂ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.