ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mysuru Dasara 2026: ಆಕರ್ಷಕ ಪಂಜಿನ ಕವಾಯತಿನೊಂದಿಗೆ ಮೈಸೂರು ದಸರಾಗೆ ಅದ್ಧೂರಿ ತೆರೆ

Torchlight Parade and Drone Show: ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ಆಯೋಜನೆಯಾಗಿದ್ದ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌, ರಾಜ್ಯಪಾಲೆ ಡಾ.ಸುಧಾ ಯಾದವ್, ಕೇರಳಂ ಸಿಎಂ ವಿ.ಡಿ.ಸತೀಶನ್‌, ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಪಂಜಿನ ಕವಾಯತಿನೊಂದಿಗೆ ಮೈಸೂರು ದಸರಾಗೆ ಅದ್ಧೂರಿ ತೆರೆ

-

Prabhakara R
Prabhakara R Oct 21, 2026 10:14 PM

ಮೈಸೂರು: ವೈಭವದ ಜಂಬೂ ಸವಾರಿ ಬಳಿಕ ವರ್ಣರಂಜಿತ ಪಂಜಿನ ಕವಾಯತು (Torchlight Parade) ಕಾರ್ಯಕ್ರಮದೊಂದಿಗೆ 11 ದಿನಗಳ ಮೈಸೂರು ದಸರಾ ಮಹೋತ್ಸವವು (Mysuru Dasara 2026) ಬುಧವಾರ ರಾತ್ರಿ ಅಧಿಕೃತವಾಗಿ ಮುಕ್ತಾಯಗೊಂಡಿತು.

ನಗರದ ಬನ್ನಿಮಂಟಪ ಮೈದಾನದಲ್ಲಿ ಆಯೋಜನೆಯಾಗಿದ್ದ ಸಮಾರೋಪ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌, ರಾಜ್ಯಪಾಲೆ ಡಾ.ಸುಧಾ ಯಾದವ್, ಕೇರಳಂ ಸಿಎಂ ವಿ.ಡಿ.ಸತೀಶನ್‌, ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ, ವಿವಿಧ ಸಚಿವರು, ಶಾಸಕರು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಮೊದಲಿಗೆ ಪೊಲೀಸ್‌, ಅಶ್ವಪಡೆ, ಗೃಹರಕ್ಷಕ ದಳ, ಎನ್‌ಸಿಸಿ, ಪೊಲೀಸ್ ಬ್ಯಾಂಡ್ ಸೇರಿ ವಿವಿಧ ಪಡೆಗಳಿಂದ ಪಥಸಂಚಲನ ಜರುಗಿತು. ನಂತರ ಹಲವು ತಂಡಗಳಿಂದ ಮೈದಾನದಲ್ಲಿ ಮೂಡಿದ ವಿವಿಧ ಕಲಾತ್ಮಕ ವಿನ್ಯಾಸಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.



ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಡ್ರೋನ್‌ ಶೋ

Mysuru Dasara 2026 (5)

ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ನಡೆದ ಡ್ರೋನ್‌ ಶೋ ಬಾನಂಗಳದಲ್ಲಿ ಚಿತ್ತಾರ ಮೂಡಿಸಿತು. ಈ ವೇಳೆ ಮೈಸೂರಿನ ಸಾಂಸ್ಕೃತಿಕ ವೈಭವವನ್ನು ಹೊಸ ತಂತ್ರಜ್ಞಾನದ ಮೂಲಕ ಪರಿಚಯಿಸಲಾಯಿತು. ಈ ಬಾರಿ 3500 ಡ್ರೋನ್‌ ಬಳಸಿ, ಒಟ್ಟು 12 ವಿವಿಧ ವಿನ್ಯಾಸ ಪ್ರದರ್ಶಿಸಲಾಯಿತು.

ಮುಖ್ಯಮಂತ್ರಿ ಡಿಕೆಶಿ ಅವರು ಕನ್ನಡದಲ್ಲಿ ದಸರಾ ಶುಭಾಶಯ ಕೋರುವ ಸಂದೇಶ, ರಾಷ್ಟ್ರಧ್ವಜ ಹಾರಿಸುವ ಸೈನಿಕ, ಚಿಟ್ಟೆ, ಗರ್ಜಿಸುವ ಸಿಂಹ, ವಿವಿಧ ಕಲ್ಯಾಣ ಯೋಜನೆಗಳ ಸಂಕೇತಗಳಿರುವ ಕರ್ನಾಟಕದ ನಕ್ಷೆ, ವಿಷ್ಣುವಿನ ಸುದರ್ಶನ ಚಕ್ರ, ಶಿವ, ನಂದಿ, ಅಂಬಾರಿ ಆನೆ ಹಾಗೂ ತಾಯಿ ಚಾಮುಂಡೇಶ್ವರಿಯ ಆಕೃತಿಗಳು ಪ್ರೇಕ್ಷಕರ ಗಮನ ಸೆಳೆದವು.

ವಿವಿಧ ರಾಜ್ಯಗಳ ನೃತ್ಯ ಸಂಗಮ

Mysuru Dasara 2026 (1)

ಬಳಿಕ ʼಕಲರ್ಸ್‌ ಆಫ್‌ ಇಂಡಿಯಾʼ ಕಾರ್ಯಕ್ರಮದ ಮೂಲಕ ಭಾರತ ವಿವಿಧ ರಾಜ್ಯಗಳ ನೃತ್ಯ ಸಂಗಮವಾಯಿತು. ಮೈಸೂರಿನ ಸುಮಾರು 160 ವಿದ್ಯಾರ್ಥಿಗಳು ಹಾಗೂ 450ಕ್ಕೂ ನುರಿತ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಿತು.

ರೋಮಾಂಚನಗೊಳಿಸಿದ ಮೋಟಾರ್ ಸೈಕಲ್, ಅಶ್ವದಳದ ಸಾಹಸ

Mysuru Dasara 2026 (2)

ಭಾರತೀಯ ಸೇನೆಯ ಆರ್ಮಿ ಸರ್ವಿಸ್ ಕಾರ್ಪ್ಸ್ (ASC) ಸಂಸ್ಥೆ, ಬೆಂಗಳೂರಿನ ವಿಶ್ವಪ್ರಸಿದ್ಧ ಮೋಟಾರ್ ಸೈಕಲ್ ಸಾಹಸ ತಂಡ, ಮೇಜರ್ ಅಮೃತ್ ಪಾಂಡ ನೇತೃತ್ವದ 'ಟೊರ್ನಾಡೋಸ್' (ASC Tornadoes) ಟೀಮ್‌ ತನ್ನ ಪ್ರದರ್ಶನದ ಮೂಲಕ ಜನರನ್ನು ರೋಮಾಂಚನಗೊಳಿಸಿತು. ನಂತರ ಕರ್ನಾಟಕ ರಾಜ್ಯ ರಿಸರ್ವ್‌ ಪೊಲೀಸ್ ಅಶ್ವದಳದ ಮೈಸೂರು ಘಟಕದ (KARP Mounted Company, Mysore) ಶೋ ಜಂಪಿಂಗ್, ಟೆಂಟ್ ಪೆಗ್ಗಿಂಗ್ ಗಮನ ಸೆಳೆಯಿತು.

Mysuru Dasara 2026 (3)

ಅಂತಿಮವಾಗಿ ಮೈದಾನದಲ್ಲಿ ಪೊಲೀಸ್‌ ಸಿಬ್ಬಂದಿ ಕೈಯಲ್ಲಿ ಉರಿಯುವ ಪಂಜುಗಳನ್ನು ಹಿಡಿದು ವಿವಿಧ ಆಕೃತಿಗಳಲ್ಲಿ ಓಡುತ್ತಾ, ಮೈದಾನದಲ್ಲಿ ಕಲಾತ್ಮಕ ವಿನ್ಯಾಸಗಳನ್ನು ಮೂಡಿಸಿ ಗಮನಸೆಳೆದರು. ಈ ವೇಳೆ ಪೊಲೀಸ್ ಬ್ಯಾಂಡ್ ವಾದನ ತಂಡದವರು ನುಡಿಸಿದ ಸುಮಧುರ ಹಾಗೂ ದೇಶಭಕ್ತಿಯ ಹಾಡುಗಳು ಮನಸೂರೆಗೊಂಡವು. ಇದೇ ವೇಳೆ ಸಿಡಿಮದ್ದುಗಳ ಪ್ರದರ್ಶನ ಮೂಲಕ ದಸರಾ ಮಹೋತ್ಸವ ಸಮಾಪನಗೊಂಡಿತು.

Mysuru Dasara 2026 (4)