Mysuru Dasara 2026: ನಾಡಿನ ಭೂತ, ವರ್ತಮಾನ, ಭವಿಷ್ಯದ ಸಂಗಮವೇ ಮೈಸೂರು ದಸರಾ: ಅಭಿನವ ಗವಿಸಿದ್ದೇಶ್ವರ ಶ್ರೀ
ಚಾಮುಂಡಿ ಬೆಟ್ಟದಲ್ಲಿ ಭಾನುವಾರ ನಡೆದ ದಸರಾ ಉದ್ಘಾಟನೆ ಕಾರ್ಯಕ್ರಮಲ್ಲಿ ಗವಿಮಠದ ಶ್ರೀಗಳು ಮಾತನಾಡಿದ್ದಾರೆ. ಒಂದು ಕಾಲಕ್ಕೆ ಯಾವ ದಸರಾ ಕೇವಲ ದೊರೆಗಳ ಹಬ್ಬವಾಗಿತ್ತೋ ಇಂದು ಅದು ಧರೆಯ ಹಬ್ಬವಾಗಿ ವಿಶ್ವವಿಖ್ಯಾತವಾಗಿದೆ. ಇಡೀ ಆರು ಕೋಟಿ ಕನ್ನಡಿಗರ ಪರವಾಗಿ ಚಾಮುಂಡಿ ತಾಯಿ ಸನ್ನಿಧಿಯನ್ನು ದೀಪ ಹಚ್ಚಿ, ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಶ್ರೀಗಳು ಹೇಳಿದ್ದಾರೆ.
ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ. -
ಮೈಸೂರು: ಮೈಸೂರು ದಸರಾ (Mysuru Dasara 2026) ನಮ್ಮ ನಾಡಿನ ಗತ ವೈಭವವನ್ನು ಹೇಳುತ್ತದೆ, ವರ್ತಮಾನದ ಉತ್ಸಾಹವನ್ನು ತುಂಬುತ್ತದೆ, ನಾಡಿನ ಭವಿಷ್ಯಕ್ಕೆ ದಿಕ್ಸೂಚಿಯಾಗಿದೆ. ಹೀಗೆ ಇದು ಭೂತ, ವರ್ತಮಾನ ಹಾಗೂ ಭವಿಷ್ಯದ ಸಂಗಮವಾಗಿದೆ ಎಂದು ಕೊಪ್ಪಳದ ಗವಿ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ (Abhinava Gavishhteshwara swamiji) ತಿಳಿಸಿದರು.
ಚಾಮುಂಡಿ ಬೆಟ್ಟದಲ್ಲಿ ಭಾನುವಾರ ನಡೆದ ದಸರಾ ಉದ್ಘಾಟನೆ ಕಾರ್ಯಕ್ರಮಲ್ಲಿ ಶ್ರೀಗಳು ಮಾತನಾಡಿದರು. ಕೆಲವು ಇತಿಹಾಸಕಾರರ ಅಭಿಪ್ರಾಯದಂತೆ ಕೊಪ್ಪಳ ಜಿಲ್ಲೆಯ ಕುಮ್ಮಟದುರ್ಗದಿಂದ ಗಂಡುಗಲಿ ಕುಮಾರರಾಮನಿಂದ ಈ ದಸರಾ ಆರಂಭವಾಯಿತು ಎಂದು ಹೇಳಲಾಗುತ್ತದೆ. ಒಟ್ಟಾರೆ ಈ ದಸರಾ ಮಹೋತ್ಸವ ತುಂಗಭದ್ರಾ ತೀರದಿಂದ ಕಾವೇರಿ ತೀರಕ್ಕ ಹರಿದುಬಂದಿದೆ. ಮಹಾನವಮಿ ದಿಬ್ಬದಿಂದ ಮೈಸೂರಿಗೆ ಹಬ್ಬವಾಗಿ ಬಂದಿದೆ ಎಂದು ಹೇಳಿದರು.
ಒಂದು ಕಾಲಕ್ಕೆ ಯಾವ ದಸರಾ ಕೇವಲ ದೊರೆಗಳ ಹಬ್ಬವಾಗಿತ್ತೋ ಇಂದು ಅದು ಧರೆಯ ಹಬ್ಬವಾಗಿ ವಿಶ್ವವಿಖ್ಯಾತವಾಗಿದೆ. ಇಂತಹ ಹಬ್ಬದ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದ್ದರು. ಆದರೆ, ಮೈಸೂರು ದಸರಾವನ್ನು ಉದ್ಘಾಟನೆ ಮಾಡುವಷ್ಟು ದೊಡ್ಡವನು ನಾನಲ್ಲ. ಈ ಹಿಂದೆ ಜ್ಞಾನಿಗಳು, ವಿಜ್ಞಾನಿಗಳು ಸೇರಿ ಹಲವು ಗಣ್ಯರು ಉದ್ಘಾಟಿಸಿದ್ದಾರೆ. ನಾನು ಬಂದಿದ್ದು ದಸರಾ ಉದ್ಘಾಟಿಸಲು ಅಲ್ಲ, ಚಾಮುಂಡಿ ಸನ್ನಿಧಿಯಲ್ಲಿ ದೀಪ ಹಚ್ಚಿ ಪ್ರಾರ್ಥಿಸಲು ಎಂದರು.
ಈ ಹಿಂದೆ ಗಣ್ಯರು ನಿನ್ನ ಸನ್ನಿಧಿಯಲ್ಲಿ ಯಾವ ದೀಪವನ್ನು ಹಚ್ಚಿದ್ದರೋ, ಆ ದೀಪ ಆರದಿರಲಿ ಎಂದು ನಾನು ಆಗಮಿಸಿದ್ದೇನೆ ಎಂದು ತಾಯಿ ಚಾಮುಂಡಿಯಲ್ಲಿ ಪ್ರಾರ್ಥಿಸಿದ್ದು, ಒಬ್ಬ ಸನ್ಯಾಸಿ ಪ್ರಾರ್ಥನೆಯನ್ನು ಬಿಟ್ಟರೆ ಏನು ಮಾಡಬಹುದು. ನಾನು ಕೇವಲ ಜೋಳಿಗೆಯ ಸನ್ಯಾಸಿ. ಇಡೀ ಆರು ಕೋಟಿ ಕನ್ನಡಿಗರ ಪರವಾಗಿ ದೀಪ ಹಚ್ಚಿ, ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಆದಿಕವಿ ಪಂಪನಿಂದ ಹಿಡಿದು ಆಧುನಿಕ ಕವಿ ಕುವೆಂಪುವರೆಗೆ ಎಲ್ಲರೂ ಸಾಮರಸ್ಯದ ಸಂದೇಶ ಸಾರಿದ್ದಾರೆ. ಮಣ್ಣನ್ನು ಮಣ್ಣಿನಂತೆ ಪ್ರೀತಿಸುತ್ತೇವೆ, ಗಿಡವನ್ನು ಗಿಡದಂತೆ ಪ್ರೀತಿಸುತ್ತೇವೆ, ಮರವನ್ನು ಮರದಂತೆ ಪ್ರೀತಿಸುತ್ತೇವೆ, ಹಾಗೆ ಮನುಷ್ಯನನ್ನು ಮನುಷ್ಯನಂತೆ ಪ್ರೀತಿಸುವುದು ನಿಜವಾದ ಧರ್ಮ. ಇಲ್ಲಿ ಪಂಥಗಳು ಬೇರೆ ಇರಬಹುದು, ಗ್ರಂಥಗಳು ಭಿನ್ನ ಇರಬಹುದು, ಸಂತರು ಭಿನ್ನ ಇರಬಹುದು, ಆದರೆ, ಅವರು ಸಾರಿದ ಸಂದೇಶದ ಸತ್ಯ ಮಾತ್ರ ಒಂದೇ ಇದೆ ಎಂದರು.
ಮೈಸೂರಿನ ರಾಜಮನೆತನದ ಕೊಡುಗೆಯನ್ನೂ ಸ್ಮರಿಸಿದ ಶ್ರೀಗಳು, ಸುಗಂಧವನ್ನು ತೆಗೆದು ಹೂವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸಿಹಿಯನ್ನು ಹೊರಗಿಟ್ಟು ಸಕ್ಕರೆಯನ್ನು ಅನುಭವಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆ ಮೈಸೂರು ರಾಜಮನೆತನವನ್ನು ಹೊರಗಿಟ್ಟು ಕರ್ನಾಟಕದ ಇತಿಹಾಸವನ್ನು ಊಹಿಸುವುದು ಕಷ್ಟವಾಗುತ್ತದೆ. ಆಗಿನ ಕಾಲಕ್ಕೇ ಮೈಸೂರು ಮಾದರಿ ರಾಜ್ಯವಾಗಿತ್ತು.
ಕನ್ನಂಬಾಡಿ ಕಟ್ಟೆ ನಿರ್ಮಾಣದ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆ ಎದುರಾದಾಗ ರಾಜಮಾತೆ ಕೆಂಪನಂಜಮ್ಮಣ್ಣಿ ತಮ್ಮ ಆಭರಣಗಳನ್ನು ನೀಡಿದ್ದರು. ಆಡಳಿತ ನಡೆಸುವವರು ಜನರನ್ನು ಆಳುವುದಷ್ಟೇ ಅಲ್ಲ, ಜನರ ಅಳಲನ್ನು ಕೇಳುವವರು ಎಂಬುದನ್ನು ಮೈಸೂರು ರಾಜಮನೆತನ ತೋರಿಸಿಕೊಟ್ಟಿದೆ ಎಂದರು.
ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಗವಿಸಿದ್ದೇಶ್ವರ ಸ್ವಾಮೀಜಿ; ಈ ಬಾರಿ ವಿಶೇಷತೆ ಏನು?
ಧರ್ಮವೆಂದರೆ ಮನುಷ್ಯನನ್ನು ಸ್ವರ್ಗಕ್ಕೆ ಕರೆದೊಯ್ಯುವುದಷ್ಟೇ ಅಲ್ಲ, ಭೂಮಿಯನ್ನೇ ಸ್ವರ್ಗದಂತೆ ಮಾಡುವುದು. ಬುದ್ಧನ ಬೆಳಕಿನ ಸಂದೇಶ ಮತ್ತು ಜಾನಪದ ಸಾಹಿತ್ಯದ ಆಶಯವೂ ಇದೇ ಆಗಿದೆ. ಕತ್ತಲೆಯ ವಿರುದ್ಧ ಹೋರಾಡುವುದಕ್ಕಿಂತ ದೀಪ ಹಚ್ಚುವ ಮೂಲಕ ಕತ್ತಲೆಯನ್ನು ದೂರ ಮಾಡಬೇಕು. ಪ್ರತಿಯೊಬ್ಬರೂ ಸಮಾಜಕ್ಕೆ ಬೆಳಕು ನೀಡುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಇನ್ನು ಆಯುಧಪೂಜೆ ಎಂದರೆ ನಮ್ಮ ಬದುಕಿಗೆ ನೆರವಾಗುವ ಸಾಧನಗಳ ಬಗ್ಗೆ ಕೃತಜ್ಞತೆ ಸಲ್ಲಿಸುವುದು ಎಂದು ವಿವರಿಸಿದರು.