National Herald Case: ನ್ಯಾಷನಲ್ ಹೆರಾಲ್ಡ್ ಪ್ರಕರಣ: ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಸುವರ್ಣಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಪ್ಲೇ ಕಾರ್ಡ್ ಹಿಡಿದುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರ ಪ್ರತಿಭಟನೆ -
ಬೆಳಗಾವಿ, ಡಿ.17: ನ್ಯಾಷನಲ್ ಹೆರಾಲ್ಡ್ ಕೇಸ್ (National Herald Case) ಮೂಲಕ ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರ (Congress leaders) ವಿರುದ್ಧ ದ್ವೇಷ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೆಳಗಾವಿ ಸುವರ್ಣಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) , ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹಾಗೂ ಕಾಂಗ್ರೆಸ್ ಶಾಸಕರು, ಪರಿಷತ್ ಸದಸ್ಯರು ಭಾಗಿಯಾದರು.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ಲೇ ಕಾರ್ಡ್ ಹಿಡಿದುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ದ್ವೇಷದ ರಾಜಕೀಯದ ವಿರುದ್ಧದ ಹೋರಾಟ ಇದಾಗಿದೆ. ಅಧಿಕಾರ ಇರುವ ಕಡೆಗಳಲ್ಲಿ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗ್ತಿದೆ. ಅಪರಾಧಿಯನ್ನಾಗಿ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಭ್ರಷ್ಟಾಚಾರ, ನಿರುದ್ಯೋಗ ತಾಂಡವವಾಡುತ್ತಿದೆ. ತೆರಿಗೆ ಹೆಚ್ಚಳದ ಮೂಲಕ ರಾಷ್ಟ್ರವನ್ನು ಸಾಲಗಾರ ದೇಶವನ್ನಾಗಿ ಮಾಡಲಾಗ್ತಿದೆ. ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಕೊಡಲಾಗಿತ್ತು. ವಿದೇಶದಲ್ಲಿರುವ ನಮ್ಮ ಅಕ್ರಮ ಹಣ ವಾಪಸ್ ತರುವ ಭರವಸೆ ಕೊಡಲಾಗಿತ್ತು. ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆ ಆಗುತ್ತಿದೆ. ಹೀಗಿರುವಾಗ ದೇಶದ ಗಮನ ಬೇರೆ ಕಡೆ ಸೆಳೆಯಲು ಈ ರೀತಿ ಮಾಡಲಾಗುತ್ತಿದೆ ಎಂದರು.
ದ್ವೇಷದ ರಾಜಕಾರಣ ಬಿಜೆಪಿ ಆಸ್ತಿ
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಜನರ ಧ್ವನಿಯಾಗಬೇಕೆಂದು ಪ್ರಾರಂಭಿಸಲಾಗಿತ್ತು. ಆದರೆ ಇದೀಗ ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಇಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ನನಗೆ ಸೇರಿದಂತೆ ಅನೇಕರಿಗೆ ನೋಟಿಸ್ ಕೊಡಲಾಗಿದೆ. ಎಫ್ ಐ ಆರ್ ಪ್ರತಿ ಕೊಡಿ ಎಂದು ನಾನು ಪತ್ರ ಬರೆದಿದ್ದೇನೆ. ಯಾವ ದಾಖಲೆಯ ಆಧಾರದಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂಬುದು ಪ್ರಶ್ನೆಯಾಗಿದೆ ಎಂದರು.
ವೋಟ್ ಚೋರಿ ನೆಪದಲ್ಲಿ ಸುಳ್ಳು ಸಂಕಥನ ಸೃಷ್ಟಿ; ಕಾಂಗ್ರೆಸ್ ವಿರುದ್ಧ ಗುಡುಗಿದ ಎಚ್.ಡಿ. ದೇವೇಗೌಡ
ನನ್ನ ವಿರುದ್ಧ ಕೇಸ್ ದಾಖಲು ಮಾಡಿ ತಿಹಾರ್ ಜೈಲಿಗೆ ಕಳಿಸಿದ್ದರು. ಆದರೆ ಅದನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಭಾಷಣ ಮಾಡಿದ್ದಾರೆಂದು ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲು ಮಾಡಿ ಸಂಸದ ಸ್ಥಾನ ವಜಾ ಮಾಡಲಾಗಿತ್ತು. ಇಂತಹ ದ್ವೇಷದ ರಾಜಕಾರಣ ಮಾಡಲಾಗ್ತಿದೆ ಎಂದು ಡಿಕೆಶಿ ಕಿಡಿಕಾರಿದರು.
ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ, 13 ವರ್ಷಗಳ ಕಾಲ ನಿರಂತರವಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಕಿರುಕುಳ ನೀಡಲಾಗಿದೆ. ನ್ಯಾಷನಲ್ ಹೆರಾಲ್ಡ್ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಾಥ್ ಕೊಟ್ಟ ಪತ್ರಿಕೆಯಾಗಿದೆ. ಅವ್ಯವಹಾರ ಆಗಿಲ್ಲ ಎಂದು ಇದೀಗ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ತನಿಖಾ ಸಂಸ್ಥೆಗಳನ್ನು ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮಸಿ ಬಳಿಯುವ ಕೆಲಸ ಆಗುತ್ತಿದೆ. ಪಿಎಂ ಕೇರ್ ಫಂಡ್ ನಲ್ಲಿ ಎಷ್ಟು ದುರುಪಯೋಗ ಆಗಿದೆ, ಅಮಿತ್ ಶಾ ಮಗ ಆರು ಸಾವಿರ ಕೋಟಿ ಮಾಲಿಕ. ಹಾಗಾದರೆ ಎಲ್ಲಿಂದ ಹಣ ಬಂದಿದೆ ಎಂದು ಏಕೆ ತನಿಖೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಕಾಂಗ್ರೆಸ್ ನಾಯಕರ ವಿರುದ್ಧದ ಕೇಸ್ ವಜಾ ಮಾಡುವ ಮೂಲಕ ಬಿಜೆಪಿಗೆ ಮಂಗಳಾರತಿಯಾಗಿದೆ. ಇಡಿ ತನಿಖೆ ಕೇವಲ ರಾಜಕೀಯ ಪ್ರೇರಿತವಾಗಿದೆ. ವಿರೋಧ ಪಕ್ಷಗಳ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಸೀಳುನಾಯಿ ತರ ಬಳಕೆ ಮಾಡಲಾಗ್ತಿದೆ. ಇದು ದ್ವೇಷ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
Kangana Ranaut: ಕಾಂಗ್ರೆಸ್ ವೋಟ್ ಚೋರಿ ಆರೋಪ; ಬ್ರೆಜಿಲ್ ಮಾಡೆಲ್‌ಗೆ ಸಂಸತ್ತಿನಲ್ಲೇ ಕ್ಷಮೆ ಕೇಳಿದ ಕಂಗನಾ
ಬಿಜೆಪಿ ಸರ್ಕಾರದ 95%ನಷ್ಟು ಸಿಬಿಐ, ಇಡಿ ಕೇಸ್ ಗಳು ಕೇವಲ ವಿರೋಧ ಪಕ್ಷದ ಮೇಲಿದೆ. ಯಾರ ವಿರುದ್ಧ ಆರೋಪ ಬರುತ್ತೋ ಅವರು ಬಿಜೆಪಿ ಸೇರಿಕೊಂಡರೆ ರಾತ್ರೋ ರಾತ್ರಿ ಪಾಪ ನಿವಾರಣೆ ಆಗುತ್ತದೆ ಎಂದು ಕಿಡಿಕಾರಿದರು.
ಸಚಿವ ಎಂಬಿ ಪಾಟೀಲ್ ಮಾತನಾಡಿ, ಗಂಗಾನದಿಯಲ್ಲಿ ಪವಿತ್ರ ಸ್ಥಾನ ಮಾಡಿದರೆ ಪಾಪ ಪರಿಹಾರ ಆದಂತೆ ಬಿಜೆಪಿಗೆ ಸೇರ್ಪಡೆಯಾದರೆ ಅವರ ಪಾಪ ಪರಿಹಾರ ಮಾಡುವ ವಾಶಿಂಗ್ ಮಷೀನ್ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಇಡಿ, ಸಿಬಿಐ ನಂತಹ ತನಿಖಾ ಸಂಸ್ಥೆಗಳ ಮುಖ್ಯ ಕಚೇರಿಯನ್ನು ಬಿಜೆಪಿ ಹೆಡ್ ಕ್ವಾರ್ಟರ್ಸ್ ಗೆ ಸ್ಥಳಾಂತರ ಮಾಡಿದರೆ ಒಳ್ಳೆಯದು ಎಂದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣ
ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಆರೋಪಪಟ್ಟಿಯನ್ನು ಪರಿಗಣಿಸಲು ನ್ಯಾಯಾಲಯ ನಿರಾಕರಿಸಿದೆ. ಏಪ್ರಿಲ್ 9 ರಂದು ಪಿಎಂಎಲ್‌ಎ ಅಡಿಯಲ್ಲಿ ಸೋನಿಯಾ ಗಾಂಧಿ , ರಾಹುಲ್ ಗಾಂಧಿ ಮತ್ತು ಇತರ ಆರೋಪಿಗಳ ವಿರುದ್ಧ ಇಡಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಈ ಕುರಿತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ದೂರು ವಿಚಾರಣೆಗೆ ಅರ್ಹವಲ್ಲ. ಏಕೆಂದರೆ ಈ ಪ್ರಕರಣ ಖಾಸಗಿ ದೂರನ್ನು ಆಧರಿಸಿದೆಯೇ ಹೊರತು ಪ್ರಥಮ ಮಾಹಿತಿ ವರದಿ ಆಧರಿಸಿ ಅಲ್ಲ ಎಂದು ನ್ಯಾಯಾಲಯ ಹೇಳಿದೆ.