Pahalgam Terror Attcak: ಶ್ರೀನಗರ ತಲುಪಿದ ಸಂತೋಷ್ ಲಾಡ್, ಕಾಶ್ಮೀರ ಪ್ರವಾಸಿಗರಿಗಾಗಿ ಸಹಾಯವಾಣಿ
ಕರ್ನಾಟಕದ ಇಬ್ಬರು ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದು, ಮೃತರಾದ ಶಿವಮೊಗ್ಗದ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಅವರ ಶವಗಳನ್ನು ಬೆಂಗಳೂರಿಗೆ ಕಳಿಸುವ ಪ್ರಕ್ರಿಯೆಯಲ್ಲಿ ಸಂತೋಷ್ ಲಾಡ್ ತೊಡಗಿಕೊಂಡರು. ಕಾಶ್ಮೀರದಲ್ಲಿರುವ ಕನ್ನಡಿಗರಿಗೆ ಸಹಾಯವಾಣಿ ತೆರೆಯಲಾಗಿದೆ.

ಶ್ರೀನಗರದಲ್ಲಿ ಸಂತೋಷ್ ಲಾಡ್

ಶ್ರೀನಗರ: ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ (Pahalgam Terror Attcak) ಇಸ್ಲಾಮಿಕ್ ಭಯೋತ್ಪಾದಕರಿಂದ (Terrorists) ಭೀಕರ ಗುಂಡಿನ ದಾಳಿಗೀಡಾಗಿ ಮೃತಪಟ್ಟ ಕರ್ನಾಟಕದ ಪ್ರವಾಸಿಗರ (Karnataka tourists) ಕುಟುಂಬಗಳಿಗೆ ಸಹಾಯ ಒದಗಿಸಲು ಕರ್ನಾಟಕ ಸರ್ಕಾರ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಅವರನ್ನು ಕಳಿಸಿದ್ದು, ಅವರು ಶ್ರೀನಗರ (Srinagar) ತಲುಪಿದ್ದಾರೆ. ಮೃತ ದೇಹಗಳನ್ನು ಗುರುತಿಸುವ ಹಾಗೂ ಬೆಂಗಳೂರಿಗೆ ಕಳಿಸುವ ಪ್ರಕ್ರಿಯೆಯಲ್ಲಿ ಅವರು ಭಾಗಿಯಾಗಿದ್ದಾರೆ. ಈ ನಡುವೆ, ಪ್ರಸ್ತುತ ಕಾಶ್ಮೀರ ಕಣಿವೆಯಲ್ಲಿರುವ ಕನ್ನಡದ ಪ್ರವಾಸಿಗರಿಗಾಗಿ ಸಹಾಯವಾಣಿ ತೆರೆಯಲಾಗಿದೆ.
ಕರ್ನಾಟಕದ ಇಬ್ಬರು ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಶಿವಮೊಗ್ಗದ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಹತರಾಗಿದ್ದು, ಅವರ ಶವಗಳನ್ನು ಬೆಂಗಳೂರಿಗೆ ಕಳಿಸುವ ಪ್ರಕ್ರಿಯೆಯಲ್ಲಿ ಸಂತೋಷ್ ಲಾಡ್ ತೊಡಗಿಕೊಂಡರು. ಇನ್ನೊಬ್ಬ ಕನ್ನಡಿಗ ಅಭಿಜ್ಞಾ ರಾವ್ ಎಂಬವರಿಗೆ ಗಂಭೀರವಾದ ಗುಂಡಿನ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿಲ್ಲ. ಮೃತರ ಜೊತೆಗಿದ್ದ ಇತರ ಪ್ರವಾಸಿಗರ ಸುರಕ್ಷಿತ ಹಿಂದಿರುಗುವಿಕೆಗೂ ವ್ಯವಸ್ಥೆ ಮಾಡಲಾಗುತ್ತಿದೆ.
ಈ ನಡುವೆ ರಾಜ್ಯ ಪ್ರವಾಸೋದ್ಯಮ ಇಲಾಖೆ, ಕಾಶ್ಮೀರದ ಪ್ರವಾಸಿಗರಿಗಾಗಿ ಸಹಾಯವಾಣಿಗಳನ್ನು ತೆರೆದಿದೆ. "ಕಾಶ್ಮೀರದ ಪಹಲ್‌ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಕನ್ನಡಿಗರಿಬ್ಬರು ಸಾವಿಗೀಡಾಗಿರುವುದು ವಿಷಾದನೀಯ ಸಂಗತಿ. ಜಮ್ಮು-ಕಾಶ್ಮೀರದ ಪ್ರವಾಸಕ್ಕೆ ತೆರಳಿರುವ ಕನ್ನಡಿಗರನ್ನು ರಾಜ್ಯಕ್ಕೆ ಮರಳಿ ತರಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ. ಆದದ್ದರಿಂದ ಕರ್ನಾಟಕದಲ್ಲಿ ಪ್ರವಾಸ ನಿರ್ವಹಿಸುತ್ತಿರುವ ಪ್ರವಾಸಿ ಕಾರ್ಯಾಚರಣೆದಾರರು (Tour Operators & Travel Agents) ತಮ್ಮ ಮೂಲಕ ಜಮ್ಮು- ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಪ್ರಯಾಣಿಕರ ವಿವರಗಳನ್ನು ಈ ಕೆಳಕಂಡ ಸಹಾಯವಾಣಿಗೆ ನೀಡಬೇಕೆಂದು ಕೋರಿದೆ. ಹಾಗೂ ಜಮ್ಮು- ಕಾಶ್ಮೀರ ಪ್ರವಾಸಕ್ಕೆ ತೆರಳಿರುವ ಪ್ರವಾಸಿಗರ ಸಂಬಂಧಿಕರು ಅಥವಾ ಪರಿಚಯಸ್ಥರು ಪ್ರವಾಸಕ್ಕೆ ತೆರಳಿರುವವರ ವಿವರಗಳನ್ನು ಈ ಕೆಳಕಂಡ Helpline (ಸಹಾಯವಾಣಿಗೆ) ನೀಡಬೇಕೆಂದು ಕೋರಿದೆ: 080-43344334, 080-43344335, 080-43344336, 080-43344342".
ಇದನ್ನೂ ಓದಿ: PM Modi: ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಸೌದಿ ಪ್ರವಾಸ ಮೊಟಕುಗೊಳಿಸಿದ ಮೋದಿ; ಇಂದು ರಾತ್ರಿಯೇ ರಿಟರ್ನ್