Raichur News: ಇಬ್ಬರು ಮಕ್ಕಳ ಜತೆ ಪತ್ನಿ ಅನುಮಾನಾಸ್ಪದ ಸಾವು; ದುರಂತ ನೋಡಿ ರೈಲಿಗೆ ತಲೆಕೊಟ್ಟು ಪತಿಯೂ ಆತ್ಮಹತ್ಯೆ!
ರಾಯಚೂರಿನ ಜಲಾಲನಗರದಲ್ಲಿ ಘೋರ ಘಟನೆ ನಡೆದಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳ ಸಾವಿನ ಬಳಿಕ ಪತಿ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಘಟಗೆ ಕಾರಣ ಎನ್ನಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ಕಾರಣ ದೃಢಪಡಲಿದೆ.
-
ರಾಯಚೂರು: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ರಾಯಚೂರಿನ (Raichur) ಜಲಾಲನಗರದಲ್ಲಿ ನಡೆದಿದೆ. ಜಲಾಲನಗರ ನಿವಾಸಿ ವಿಷ್ಣು, ಪತ್ನಿ ಅರುಣಾ (40), ಮಕ್ಕಳಾದ ಶ್ಲೋಕ (10) ಮತ್ತು ಖುಷಿ (4) ಮೃತಪಟ್ಟವರು. ಪತ್ನಿ ಮತ್ತು ಮಕ್ಕಳು ಮನೆಯಲ್ಲಿ ಶವವಾಗಿ ಪತ್ತೆಯಾದರೆ, ಪತಿ ವಿಷ್ಣು ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ನಿ ಹಾಗೂ ಇಬ್ಬರು ಮಕ್ಕಳ ಸಾವಿನ ಬಳಿಕ ಪತಿ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಘಟಗೆ ಕಾರಣ ಎನ್ನಲಾಗುತ್ತಿದೆ. ಅನೇಕ ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿದ್ದು, ಭಾನುವಾರ ಗಂಡ ಹೆಂಡತಿಯ ನಡುವೆ ಜಗಳ ನಡೆದಿದೆ.
ಈ ವೇಳೆ ಬಳಿಕ ಗಂಡ ವಿಷ್ಣುರೆಡ್ಡಿ ಮನೆ ಬಿಟ್ಟು ಸಾಯುತ್ತೇನೆ ಎಂದು ಹೋಗಿದ್ದಾರೆ. ಸ್ವಲ್ಪ ಹೊತ್ತಲ್ಲೇ ಪತ್ನಿ ಅರುಣಾ, ಮಕ್ಕಳಾದ ಶ್ಲೋಕ ಹಾಗೂ ಖುಷಿಗೆ ವಿಷ ನೀಡಿ ತಾನೂ ಸೇವನೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯ ಸ್ವಲ್ಪ ಹೊತ್ತಿನ ಬಳಿಕ ಗಂಡ ವಿಷ್ಣುರೆಡ್ಡಿಗೆ ಮೊಬೈಲ್ ಕರೆ ಮಾಡಿ ಸಂಬಂಧಿಕರೊಬ್ಬರು ವಿಷಯ ತಿಳಿಸಿದ್ದಾರೆ. ಹೆಂಡತಿ ಮಕ್ಕಳು ಸಾವಿನ ಅಘಾತದಿಂದ ರಾಯಚೂರು ತಾಲೂಕಿನ ಚಿಕ್ಕಸುಗೂರು ಬಳಿಯ ರೈಲ್ವೆ ಹಳಿಗೆ ಬಿದ್ದು ವಿಷ್ಣು ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದು ರೈಲ್ವೆ ಪೊಲೀಸರು ವಿಷ್ಣುರೆಡ್ಡಿಯ ಮೃತದೇಹ ರಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳ ಮೇಲೆ ಯಾವುದೇ ಇರಿತದ ಗುರುತುಗಳಿಲ್ಲ. ಇದು ದಿಂಬು ಅಥವಾ ಕೈ ಯಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ದೃಢಪಡಬೇಕಿದೆ ಎಂದು ಎಸ್ಪಿ ಅರುಣಾಂಗ್ಷು ಗಿರಿ ಹೇಳಿದ್ದಾರೆ.
ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ವಿಷ್ಣು ಬ್ಯುಸಿನೆಸ್ ಕೂಡ ಮಾಡುತ್ತಿದ್ದ. ಜೀವನದಲ್ಲಿ ಜಿಗುಪ್ಸೆಗೊಂಡಿದ್ದರಿಂದ ಮತ್ತು ಬ್ಯುಸಿನೆಸ್ನಲ್ಲಿ ನಷ್ಟವಾಗಿದ್ದರಿಂದ ಈ ರೀತಿಯ ಕೃತ್ಯ ಎಸಗಿರಬಹುದು ಎಂದು ಸಂಬಂಧಿಕರು ಹೇಳುತ್ತಿದ್ದಾರೆ. ಜತೆಗೆ ಈ ಹಿಂದೆ ಬ್ಯುಸಿನೆಸ್ನಲ್ಲಿ ನಷ್ಟ ಅನುಭವಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಆತ ಸಂಬಂಧಿಕರ ಮುಂದೆ ಹೇಳಿದ್ದ ಎಂಬ ಮಾಹಿತಿ ಸಿಕ್ಕಿದೆ ಎಂದು ಎಸ್ಪಿ ತಿಳಿಸಿದ್ದಾರೆ.