Kannada Sahitya Sammelana 2025: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಲೇಖಕಿ ಬಾನು ಮುಷ್ತಾಕ್ ಆಯ್ಕೆ
Senior writer Banu Mushtaq: ಬಳ್ಳಾರಿಯ ಖಾಸಗಿ ಹೋಟೆಲ್ನಲ್ಲಿ ಭಾನುವಾರ ನಡೆದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಬಾನು ಮುಸ್ತಾಕ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.


ಬಳ್ಳಾರಿ: ಡಿಸೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (Kannada Sahitya Sammelana 2025) ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ ಹಾಗೂ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ (Banu Mushtaq) ಅವರು ಆಯ್ಕೆಯಾಗಿದ್ದಾರೆ. ನಗರದ ಖಾಸಗಿ ಹೋಟೆಲ್ನಲ್ಲಿ ಭಾನುವಾರ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಕಸಾಪದ ರಾಜ್ಯಾಧ್ಯಕ್ಷ ಮಹೇಶ ಜೋಶಿ ಅವರು ಮಾತನಾಡಿದರು.
ಬಳ್ಳಾರಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ ಹಾಗೂ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇದೇ ವೇಳೆ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ, ಅನುವಾದಕಿ ದೀಪ ಭಾಸ್ತಿ ಅವರನ್ನು ಸಮ್ಮೇಳನದಲ್ಲಿ ಗೌರವಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇತ್ತೀಚೆಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪುರಸ್ಕಾರ 2025ಕ್ಕೆ (International Booker Prize 2025) ಕನ್ನಡದ ಕತೆಗಾರ್ತಿ, ಸಾಹಿತಿ ಬಾನು ಮುಷ್ತಾಕ್ (Banu Mushtaq) ಅವರು ಭಾಜನರಾಗಿದ್ದರು. ಬಾನು ಮುಷ್ತಾಕ್ ಅವರ ʼಹಸೀನಾ ಮತ್ತು ಇತರ ಕತೆಗಳುʼ ಸಣ್ಣಕತೆಗಳ ಸಂಕಲನದ ಇಂಗ್ಲಿಷ್ ಅನುವಾದ ʼಹಾರ್ಟ್ ಲ್ಯಾಂಪ್ʼಗೆ ಬೂಕರ್ ಪ್ರಶಸ್ತಿ ದೊರೆತಿತ್ತು.
ಬಾನು ಮುಷ್ತಾಕ್ ಯಾರು?
ಕನ್ನಡದ ಸಾಹಿತ್ಯಾಸಕ್ತರಿಗೆ ಬಾನು ಮುಷ್ತಾಕೆ ಹೆಸರು ಚಿರಪರಿಚಿತ. ಇವರ ಕೃತಿಳು ಸಿನಿಮಾ ಕೂಡ ಆಗಿವೆ. ಮೂಲತಃ ಹಾಸನದವರೇ ಆದ ಬಾನು ಮುಷ್ತಾಕ್ ಬೆಳೆದದ್ದು ಹಾಸನದಲ್ಲಿ. 1954 ಏಪ್ರಿಲ್ 03ರಂದು ಹಾಸನ ಜಿಲ್ಲೆಯ ವಲಭಬಾಯಿಯಲ್ಲಿ ಜನಿಸಿದರು. ಅರಸೀಕೆರೆಯಲ್ಲಿ ಶಾಲೆಗೆ ಸೇರಿದ ಬಾನು ಮುಷ್ತಾಕ್ಗೆ ಉರ್ದು ತಲೆಗೆ ಹೋಗಲಿಲ್ಲ. ಹೀಗಾಗಿ ಅವರ ಪೋಷಕರು ಕನ್ನಡವನ್ನಾದರೂ ಕಲಿಯಲಿ ಎಂದು ಆಕೆಯನ್ನು ಶಿವಮೊಗ್ಗದ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗೆ ಸೇರಿಸಿದರು. 8ನೇ ವಯಸ್ಸಿನಲ್ಲಿ ಕನ್ನಡ ಭಾಷೆಯ ಮಿಷನರಿ ಶಾಲೆಗೆ ಸೇರಿದ ಅವರು ಆರು ತಿಂಗಳಲ್ಲಿ ಕನ್ನಡ ಓದಲು ಮತ್ತು ಬರೆಯಲು ಪಟ್ಟು ಹಿಡಿದು ಕಲಿತರು. ಆನಂತರ ಬಿಎಸ್ಸಿ, ಎಲ್ಎಲ್ಬಿವರೆಗೂ ತಮ್ಮ ವ್ಯಾಸಂಗ ಪೂರ್ಣಗೊಳಿಸಿದರು.
ವಕೀಲೆಯಾಗಿದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದು ಅಚ್ಚರಿಯ ಕತೆ. ಪ್ರಗತಿಪರ ಚಳವಳಿಗಳಿಂದ ಪ್ರೇರಿತರಾಗಿ ಇವರು ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಒಬ್ಬರು ಮುಸ್ಲಿಂ ಯುವತಿ ಸಿನಿಮಾ ನೋಡಿದ್ದಕ್ಕೆ ಆಕೆಯ ವಿರುದ್ಧ ಫತ್ವಾ ಹೊರಡಿಸಲಾಗಿತ್ತು. ಇದನ್ನು ಖಂಡಿಸಿದ್ದ ಮಾತ್ರವಲ್ಲದೇ ಲಂಕೇಶ್ ಪತ್ರಿಕೆಗೆ ಬರೆಯುವ ಮೂಲಕ ಪತ್ರಕರ್ತೆಯಾಗಿಯೂ ಮಾಧ್ಯಮ ಲೋಕಕ್ಕೆ ಪದಾರ್ಪಣೆ ಮಾಡಿದರು. ಬಾಲ್ಯದಲ್ಲೇ ಬರವಣಿಗೆಯನ್ನು ರೂಢಿಸಿಕೊಂಡಿದ್ದ ಬಾನು ಅವರ ಗದ್ಯದ ಸಂದರ್ಯವನ್ನು ಗುರುತಿಸಿದ ಪಿ. ಲಂಕೇಶ್, ತಮ್ಮ ಪತ್ರಿಕೆಯಲ್ಲಿ ಅವರಿಗೆ ಹೆಚ್ಚಿನ ಅವಕಾಶ ನೀಡಿದರು. ಇಲ್ಲಿ ಕತೆಗಳನ್ನು ಅಂಕಣಗಳನ್ನು ಬರೆಯತೊಡಗಿದ ಬಾನು ಅವರನ್ನು ಕನ್ನಡ ಸಾಹಿತ್ಯ ಲೋಕ ಗುರುತಿಸಿತು. ಲಂಕೇಶ್ ಪತ್ರಿಕೆಗೆ ಜಿಲ್ಲಾ ವರದಿಗಾರರಗಾಗಿ 9 ವರ್ಷ ಸೇವೆ ಸಲ್ಲಿಸಿದರು.
ಮುಂದೆ ವೃತ್ತಿಯಲ್ಲಿ ವಕೀಲರಾದ ಬಾನು ಮುಷ್ತಾಕ್ ಅವರು, ಕತೆಗಳನ್ನು ಬರೆಯತೊಡಗಿದರು. ಕಥೆ, ಕಾದಂಬರಿಗಳು, ಪ್ರಬಂಧಗಳನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ಅವರ ಕೃತಿಗಳು ಉರ್ದು, ಹಿಂದಿ, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ನಲ್ಲಿಯೂ ಪ್ರಕಟವಾಗಿವೆ. ಬಾನು ಸಾಮಾಜಿಕ ಕಾರ್ಯಕರ್ತೆ, ಮಹಿಳಾಪರ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಪತ್ರಕರ್ತೆಯಾಗಿಯೂ ಗಮನ ಸೆಳೆದರು. ಶೋಷಣೆಗೆ ಒಳಗಾದ ಮುಸ್ಲಿಂ ಮಹಿಳೆಯರ ಪರವಾಗಿ ತಮ್ಮ ಧ್ವನಿ ಎತ್ತಿದರು. ಇಂಥ ಸಾಕಷ್ಟು ಮಹಿಳೆಯರ ಕೇಸ್ಗಳನ್ನು ಕೆಲವೊಮ್ಮೆ ಉಚಿತವಾಗಿ ವಾದಿಸಿ ನ್ಯಾಯ ಕೊಡಿಸಿದರು.
ಹಾರ್ಟ್ ಲ್ಯಾಂಪ್ ಅವರ ಮೊದಲ ಪೂರ್ಣ ಪ್ರಮಾಣದ ಇಂಗ್ಲಿಷ್ ಅನುವಾದ. ಕುಬ್ರ, ಬಡವರ ಮಗಳು ಹೆಣ್ಣಲ್ಲ- ಅವರ ಕಾದಂಬರಿಗಳು. ಹೆಜ್ಜೆ ಮೂಡದ ಹಾದಿ, ಬೆಂಕಿಮಳೆ, ಎದೆಯ ಹಣತೆ ಇವು ಕಥಾಸಂಕಲನಗಳು. ಫಾರಸಿ ಕೃತಿ ತಾರೀಖ್ -ಎ-ಫೆರಿಸ್ತಾವನ್ನು ಉರ್ದುವಿನಿಂದ ಕನ್ನಡೀಕರಿಸಿದ್ದಾರೆ. ಕರಿನಾಗರಗಳು ಕತೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಅವರು ’ಹಸೀನಾ’ ಚಿತ್ರ ನಿರ್ದೇಶಿಸಿದ್ದರು. ಇದಕ್ಕೆ 3 ರಾಷ್ಟ್ರ ಪ್ರಶಸ್ತಿಗಳು ಸಂದಿವೆ. ಬಾನು ಅವರ ಅನೇಕ ಕತೆಗಳು ಹಿಂದಿ, ಇಂಗ್ಲಿಷ್, ಉರ್ದು, ಮಲಯಾಳಂ, ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ.
ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಪದ್ಮಭೂಷಣ ಬಿ.ಸರೋಜದೇವಿ ಸಾಹಿತ್ಯ ಪ್ರಶಸ್ತಿ, ಒಮ್ಮೆ ಹೆಣ್ಣಾಗು ಪ್ರಭುವೆ ನಾಟಕ ರೂಪಾಂತರಕ್ಕೆ ಇಂಟರ್ ನ್ಯಾಷನಲ್ ವುಮನ್ ಫಾರ್ ರೇಡಿಯೋ ಆ್ಯಂಡ್ ಟೆಲಿವಿಷನ್ ಬಹುಮಾನ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ ಹಾಗೂ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿಗಳು ಬಂದಿವೆ.
ಈ ಸುದ್ದಿಯನ್ನೂ ಓದಿ | Roopa Gururaj Column: ಸಂತೋಷವಾಗಿರಲು ಏನು ಮಾಡಬೇಕು ?
ಇನ್ನು ಬಾನು ಅವರು ಹಾಸನ ನಗರ ಸಭೆಗೆ 1983ರಿಂದ ಎರಡು ಅವಧಿಗೆ ನಗರಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಹಾಸನದ ಜಿಲ್ಲಾ ಶ್ರೀ ಚಾಮ ರಾಜೇಂದ್ರ ಆಸ್ಪತ್ರೆಯ ಸಂದರ್ಶಕರ ಮಂಡಳಿಯ ಅಧ್ಯಕ್ಷೆಯಾಗಿ, ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆಯಾಗಿ, ಹಾಸನ ನಗರ ಗ್ರಂಥಾಲಯ ಸಮಿತಿಯ ಸದಸ್ಯೆಯಾಗಿ, ಆಕಾಶವಾಣಿ ಬೆಂಗಳೂರು ಕೇಂದ್ರದ ಸಲಹಾ ಮಂಡಳಿ ಸದಸ್ಯೆಯಾಗಿ, ಹಾಸನದ ಜಿಲ್ಲಾ ಸಮತಾ ವೇದಿಕೆಯ ಅಧ್ಯಕ್ಷೆಯಾಗಿ ಮತ್ತು ಮಹಿಳಾ ವಿಕಾಸ ವೇದಿಕೆ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ.