ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದುಬಾರೆ ಆನೆ ಶಿಬಿರ ದುರಂತ; ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ನಿಷೇಧ

Sakrebyle Elephant Camp: ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ನಾಳೆಯಿಂದ (ಮೇ 22) ತಾತ್ಕಾಲಿಕವಾಗಿ ಪ್ರವೇಶ ನಿಷೇಧಿಸಲಾಗಿದೆ. ದುಬಾರೆ ಆನೆ ಬಿಡಾರದಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಮಾಡಿಸುವ ವೇಳೆ ಎರಡು ಸಾಕಾನೆಗಳ ನಡುವೆ ನಡೆದ ಕಾದಾಟದಲ್ಲಿ ತಮಿಳುನಾಡಿನ ಮಹಿಳೆ ಆನೆಯಡಿ ಸಿಲುಕಿ ಮೃತಪಟ್ಟ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ನಿಷೇಧ

ಸಕ್ರೆಬೈಲು ಆನೆ ಬಿಡಾರ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole May 21, 2026 3:13 PM

ಶಿವಮೊಗ್ಗ, ಮೇ 21: ಪ್ರವಾಸಿ ತಾಣ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ (Dubare Elephant Camp) ಆನೆಯ ದಾಳಿಗೆ ಸಿಲುಕಿ ತಮಿಳುನಾಡಿನ ಚೆನ್ನೈ ಮೂಲದ ಮಹಿಳೆ ಜಿನ್ನು (33) ಮೃತಪಟ್ಟ ಬಳಿಕ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ನಾಳೆಯಿಂದ (ಮೇ 22) ತಾತ್ಕಾಲಿಕವಾಗಿ ಪ್ರವೇಶ ನಿಷೇಧಿಸಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ದುಬಾರೆ ಆನೆ ಬಿಡಾರದಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಮಾಡಿಸುವ ವೇಳೆ ಎರಡು ಸಾಕಾನೆಗಳ ನಡುವೆ ನಡೆದ ಕಾದಾಟದಲ್ಲಿ ಜಿನ್ನು ಆನೆಯಡಿ ಸಿಲುಕಿ ಮೃತಪಟ್ಟ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಮಹಿಳೆ ಮೃತಪಟ್ಟ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆಯು, ಆನೆ ಬಿಡಾರಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಶಿವಮೊಗ್ಗ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣವಾಗಿರುವ ಸಕ್ರೆಬೈಲು ಆನೆ ಬಿಡಾರಕ್ಕೆ ದುಬಾರೆಯಂತೆ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧೆಡೆಯಿಂದ ಪ್ರತಿದಿನ ನೂರಾರು ಮಂದಿ ಆಗಮಿಸುತ್ತಾರೆ. ಬಂದತಂಹ ಪ್ರವಾಸಿಗರು ಆನೆಗಳಿಗೆ ಸ್ನಾನ ಮಾಡಿಸುತ್ತಾರೆ, ಸವಾರಿ ಮಾಡುತ್ತಾರೆ. ಈಗಾಗಲೇ ಆನೆಗಳಿಗೆ ಸ್ನಾನ ಮಾಡಿಸುವ ವ್ಯವಸ್ಥೆ ಬಂದ್ ಮಾಡಲಾಗಿದೆ.

ಮಾರ್ತಾಂಡನನ್ನು ಕೊಂದ ಕಂಜನ್ ಆನೆಗೆ ದಸರಾದಿಂದ ಶಾಶ್ವತ ನಿಷೇಧ

ಆರಂಭದಲ್ಲಿ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳ ಸ್ನಾನ ಮಾಡಿಸುವುದು ಹಾಗೂ ಮೈ ಮುಟ್ಟುವುದನ್ನು ನಿಷೇಧಿಸಿ ಪ್ರವಾಸಿಗರಿಗೆ ದೂರದಿಂದ ಆನೆಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿತ್ತು. ಇದೀಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರವಾಸಿಗರ ಪ್ರವೇಶವನ್ನೇ ತಾತ್ಕಾಲಿಕವಾಗಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೊಸ ನಿಯಮ ಜಾರಿಗೆ ಬರುವವರೆಗೆ ಈ ನಿರ್ಬಂಧ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪ, ತುಂಗಾ ಜಲಾಶಯದ ಹಿನ್ನೀರಿನಲ್ಲಿ ಇರುವ ಸಕ್ರೆಬೈಲು ಆನೆ ಬಿಡಾರದಲ್ಲಿ ಸದ್ಯ ಒಟ್ಟು 24 ಆನೆಗಳಿವೆ. ಇದರಲ್ಲಿ 19 ಗಂಡಾನೆ, 5 ಹೆಣ್ಣಾನೆಗಳಿವೆ.

ಗಾಯಗೊಂಡಿದ್ದ ಆನೆ ಚಿಕಿತ್ಸೆ ಫಲಿಸದೆ ಸಾವು

ದುಬಾರೆ ಆನೆ ಶಿಬಿರದಲ್ಲಿ ನಡೆದ ಸಾಕಾನೆಗಳ ನಡುವಿನ ಭೀಕರ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ (Elephant Marthanda) (35 ವರ್ಷ) ಆನೆಯು ಚಿಕಿತ್ಸೆ ಫಲಕಾರಿಯಾಗದೆ ಮೇ 19ರಂದು ಬೆಳಗ್ಗೆ ಮೃತಪಟ್ಟಿದೆ. ಮೇ 18ರ ಮಧ್ಯಾಹ್ನ ಕಾವೇರಿ ನದಿಯಲ್ಲಿ ಸೌಮ್ಯ ಸ್ವಭಾವದ ಮಾರ್ತಾಂಡ ಆನೆ ಮೇಲೆ, ದಸರಾ ಆನೆ ಕಂಜನ್ (28 ವರ್ಷ) ಭೀಕರವಾಗಿ ದಾಳಿ ನಡೆಸಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಕೊನೆಯುಸಿರೆಳೆದಿದೆ.

ಕೊಡಗಿನ ದುಬಾರೆಯಲ್ಲಿ ಘೋರ ಘಟನೆ; ಸಾಕಾನೆಗಳ ಕಾದಾಟದ ವೇಳೆ ಸಿಲುಕಿ ಮಹಿಳೆ ಸಾವು

ಕಂಜನ್ ಆನೆಯು ತನ್ನ ಚೂಪಾದ ದಂತಗಳಿಂದ ಮಾರ್ತಾಂಡನ ಹೊಟ್ಟೆ, ಕಿವಿಯ ಹಿಂಭಾಗ ಹಾಗೂ ಕಾಲುಗಳಿಗೆ ತಿವಿದು ಗಂಭೀರ ಗಾಯಗೊಳಿಸಿತ್ತು. ದಾಳಿಯ ರಭಸಕ್ಕೆ ಮಾರ್ತಾಂಡ ನದಿಯಲ್ಲೇ ಕುಸಿದು ಬಿದ್ದಿತ್ತು. ಘಟನೆ ನಡೆದ ತಕ್ಷಣ ಅರಣ್ಯ ಇಲಾಖೆಯ ಪಶುವೈದ್ಯ ಡಾ. ಮುಜೀಬ್ ನೇತೃತ್ವದ ವೈದ್ಯಕೀಯ ತಂಡ ಇಡೀ ರಾತ್ರಿ ಮಾರ್ತಾಂಡನಿಗೆ ತುರ್ತು ಚಿಕಿತ್ಸೆ ನೀಡಿ ಪ್ರಾಣ ಉಳಿಸಲು ಹರಸಾಹಸ ಪಟ್ಟಿತ್ತು. ಆದರೆ ರಕ್ತಸ್ರಾವ ನಿಲ್ಲದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಮಾರ್ತಾಂಡ ಸಾವನ್ನಪ್ಪಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.