Gubbi News: ಶ್ರೀ ಕೊಲ್ಲಾಪುರದಮ್ಮ ದೇವಿಯ 48ನೇ ದಿನದ ಮಂಡಲ ಪೂಜಾ ಮಹೋತ್ಸವ
ಸುಮಾರು 135 ವರ್ಷಗಳ ಇತಿಹಾಸವಿರುವ ಈ ಕೊಲ್ಲಾಪುರದಮ್ಮ ದೇವಿಯ ದೇವಸ್ಥಾನವನ್ನು ಗ್ರಾಮಸ್ಥರ ಸಹಕಾರದಿಂದ ಜೀವನೋದ್ಧಾರ ಮಾಡಿ, ಲೋಕಾರ್ಪಣೆ ಮಾಡಲಾಗಿದೆ. 48 ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಿಕೊಂಡು ಬಂದು, ಇಂದು ಮಹಾಮಂಡಲ ಪೂಜೆಯನ್ನು ಮಾಡಲಾಯಿತು
-
ಗುಬ್ಬಿ: ತಾಲ್ಲೂಕಿನ ಸಿಎಸ್.ಪುರ ಹೋಬಳಿ ಇಡಗೂರು ಗ್ರಾಮದ ಪುರಾತನ ಇತಿಹಾಸ ಪ್ರಸಿದ್ಧ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನದಲ್ಲಿ ಕಳೆದ 48 ದಿನಗಳಿಂದ ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಜರುಗು ತ್ತಿದ್ದ ಮಂಡಲ ಪೂಜಾ ಮಹೋತ್ಸವವು ಭಾನುವಾರದಂದು ಭಕ್ತಸಾಗರದ ಸಮ್ಮುಖದಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ಮಂಡಲ ಪೂಜೆಯ ಅಂಗವಾಗಿ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಡಗರದಿಂದ ಜರುಗಿದವು.
ವಿಶೇಷ ಧಾರ್ಮಿಕ ವಿಧಿ ವಿಧಾನಗಳಾದ ಗಣಪತಿ ಹೋಮ, ನವಗ್ರಹ ಹೋಮ ಹಾಗೂ ಮಂಡಲ ಪೂಜೆಯ ಪೂರ್ಣಾಹುತಿ ಹೋಮಗಳನ್ನು ಪ್ರಧಾನ ಅರ್ಚಕರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
ಇದನ್ನೂ ಓದಿ: Gubbi News: ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಬಿಡಲ್ಲ, ಯಾರು ಬರಲಿ ಬಿಡಲಿ ಹೋರಾಟಕ್ಕೆ ಸಿದ್ಧ ಎಂದ ರೈತರು..!!
ಮಧ್ಯಾಹ್ನ 12:30ರ ಸುಮಾರಿಗೆ ವೇದಘೋಷಗಳ ನಡುವೆ ದೇವಿಗೆ ಮಹಾಮಂಗಳಾರತಿ ಬೆಳಗಿ, ಕಲ್ಪೋಕ್ತ ಪೂಜೆ ಸಲ್ಲಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ಪೂಜೆಯ ನಂತರ ಬಂದಿದ್ದ ಎಲ್ಲಾ ಭಕ್ತಾದಿಗಳಿಗೆ ದೇವಸ್ಥಾನದ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಪಟೇಲ್ ಚಂದ್ರಹಾಸ ಮಾತನಾಡಿ, ಸುಮಾರು 135 ವರ್ಷಗಳ ಇತಿಹಾಸವಿರುವ ಈ ಕೊಲ್ಲಾಪುರದಮ್ಮ ದೇವಿಯ ದೇವಸ್ಥಾನವನ್ನು ಗ್ರಾಮಸ್ಥರ ಸಹಕಾರದಿಂದ ಜೀವನೋದ್ಧಾರ ಮಾಡಿ, ಲೋಕಾರ್ಪಣೆ ಮಾಡಲಾಗಿದೆ. 48 ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಿಕೊಂಡು ಬಂದು, ಇಂದು ಮಹಾಮಂಡಲ ಪೂಜೆಯನ್ನು ಮಾಡಲಾಯಿತು ಎಂದು ತಿಳಿಸಿದರು.
ಆಗಮಕರಾದ ಶ್ರೀಧರ್ ಮಾತನಾಡಿ ಕೊಲ್ಲಾಪುರದಮ್ಮ ದೇವಿಗೆ ಪುರಾತನ ಇತಿಹಾಸವಿದ್ದು. ಈ ದೇವಿಯು ಗ್ರಾಮದ ರಕ್ಷಕರಾಗಿದ್ದು ಅನೇಕ ಭಕ್ತರಿಗೆ ಒಳ್ಳೆಯದು ಮಾಡಿದ್ದಾರೆ ಎಂದರು. ಈ ಪುಣ್ಯ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಹಾಗೂ ಊರಿನ ಪ್ರಮುಖರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.