Praja Seva Andolana: ಪ್ರಜಾ ಸೇವಾ ಆಂದೋಲನ ಯಶಸ್ವಿಗೆ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಶುಭ ಕಲ್ಯಾಣ್
ತಾಲ್ಲೂಕಿನಾದ್ಯಂತ ಸಾರ್ವಜನಿಕರಿಗೆ ಕಾರ್ಯಕ್ರಮ ಕುರಿತು ಪ್ರಚಾರ ಕಾರ್ಯ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ಮೂಲಕ ಜನರಿಗೆ ಆಂದೋಲನ ಬಗ್ಗೆ ತಿಳಿಸಲಾಗಿದೆ. ಬೆಳಿಗ್ಗೆ 10.30 ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಉಪಸ್ಥಿತಿ ಇದ್ದು ಪ್ರತಿ ಅರ್ಜಿ ಅಹವಾಲು ಸ್ವೀಕರಿಸಲಿದ್ದಾರೆ
-
ಗುಬ್ಬಿ: ಒಂದೇ ಸೂರಿನಡಿ ಸಾರ್ವಜನಿಕರ ಅರ್ಜಿಗೆ ಸ್ಥಳದಲ್ಲೇ ಉತ್ತರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಆರಂಭಿಸಿರುವ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ ಯಶಸ್ವಿಗೆ ಗುಬ್ಬಿ ಪಟ್ಟಣದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಸೆ.5ರಂದು ನಡೆಯುವ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮಕ್ಕೆ ಅವಶ್ಯ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಮೂಲಭೂತ ಸವಲತ್ತು ಜೊತೆಗೆ ಇಲಾಖಾವಾರು ಸ್ವಾಲ್ ಮೂಲಕ ಅರ್ಜಿ ಸ್ವೀಕಾರ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನಾದ್ಯಂತ ಸಾರ್ವಜನಿಕರಿಗೆ ಕಾರ್ಯಕ್ರಮ ಕುರಿತು ಪ್ರಚಾರ ಕಾರ್ಯ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ಮೂಲಕ ಜನರಿಗೆ ಆಂದೋಲನ ಬಗ್ಗೆ ತಿಳಿಸಲಾಗಿದೆ. ಬೆಳಿಗ್ಗೆ 10.30 ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಉಪಸ್ಥಿತಿ ಇದ್ದು ಪ್ರತಿ ಅರ್ಜಿ ಅಹವಾಲು ಸ್ವೀಕರಿಸಲಿದ್ದಾರೆ. ಸ್ಥಳದಲ್ಲೇ ಅರ್ಜಿಗೆ ಉತ್ತರ ಸಿಗಲಿದೆ. ಇಲ್ಲವಾದಲ್ಲಿ ಮೂರು ಹಂತದಲ್ಲಿ ಅಂದರೆ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಅರ್ಜಿ ಇತ್ಯರ್ಥಗೊಳ್ಳಲಿದೆ ಎಂದರು.
ಇದನ್ನೂ ಓದಿ: Gubbi News: ವ್ಯಕ್ತಿತ್ವ ವಿಕಸನಕ್ಕೆ ಧರ್ಮಸ್ಥಳ ಸಂಸ್ಥೆ : ಭಾರತಿ ಶ್ರೀನಿವಾಸ್
ಸಾರ್ವಜನಿಕರು ಈ ಆಂದೋಲನಕ್ಕೆ ಬಂದು ತಮ್ಮ ಅರ್ಜಿಯನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿ ಟೋಕನ್ ಪಡೆಯಬೇಕಿದೆ. ನಂತರ ಡಿಸಿಎಂ ಅವರ ನೇತೃತ್ವದ ಸಭೆಯಲ್ಲಿ ಅರ್ಜಿ ಬಗ್ಗೆ ಚರ್ಚೆ ಕೂಡಾ ಮಾಡಲಾಗುತ್ತದೆ. ಕಾರ್ಯಕ್ರಮಕ್ಕೆ ಬರದಿದ್ದಲ್ಲಿ ತಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಮೂರು ದಿನದಲ್ಲಿ ಉತ್ತರ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆಯುವ ಪ್ರಜಾ ಸೇವೆ ಆಂದೋಲನದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿರುತ್ತಾರೆ. ಸ್ಥಳದಲ್ಲೇ ಅರ್ಜಿಗೆ ಉತ್ತರ ಸಿಗಲಿದೆ ಎಂದ ಅವರು ಜಿಲ್ಲೆಯಾದ್ಯಂತ ನಿರಂತರ ಈ ಪ್ರಜಾ ಸೇವೆ ಆಂದೋಲನ ಪ್ರತಿ ಶನಿವಾರ ಸ್ಥಳೀಯ ಶಾಸಕರ ನೇತೃತ್ವದಲ್ಲಿ ನಡೆಯಲಿದೆ. ನಿಮ್ಮ ಹೋಬಳಿ ಮಟ್ಟದಲ್ಲಿ ಕೂಡ ನಡೆಯುವ ಈ ಕಾರ್ಯಕ್ರಮ ಬಳಸಿಕೊಂಡು ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು, ಕಾರ್ಯಕ್ರಮಗಳು ಅನುಷ್ಠಾನದಲ್ಲಿ ವಿಳಂಬ ಆಗದಂತೆ ಕ್ರಮ ಕೈಗೊಳ್ಳುವ ಈ ಸಾರ್ವಜನಿಕ ಆಂದೋಲನ ಕಾರ್ಯಕ್ರಮದಲ್ಲಿ ಆಧಾರ್ ಕಾರ್ಡ್ ಸಮಸ್ಯೆ ಬಗೆಹರಿಸಿಕೊಳ್ಳಲು ವಿಶೇಷ ಮೊಬೈಲ್ ಆಧಾರ್ ಕೌಂಟರ್ ತೆರೆಯಲಾಗುತ್ತದೆ ಎಂದ ಅವರು ಪ್ರಜಾ ಸೇವೆ ಆಂದೋಲನ ಯಶಸ್ವಿಗೆ ಸಕಲ ಸಿದ್ಧತೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಮಾಡಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಆರತಿ.ಬಿ., ತಾಪಂ ಇಓ ರಂಗನಾಥ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಬಿಇಓ ನಟರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಪವಿತ್ರಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥ್ ಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.