Chikkanayakanahalli News: ಚಿಕ್ಕನಾಯಕನಹಳ್ಳಿಯಲ್ಲಿ ಇನ್ನೂ ಖಾಸಗಿ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿದೆ ಅಬಕಾರಿ ಇಲಾಖೆ: ದಂಧೆ ರೂಪ ಪಡೆದ ಬಾಡಿಗೆ ವಹಿವಾಟು?
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಸರ್ಕಾರಿ ಕಟ್ಟಡ ಲಭ್ಯವಿದ್ದರೂ ಅಬಕಾರಿ ಇಲಾಖೆ ಕಚೇರಿಯು ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ತೆರಿಗೆ ಹಣ ಅನಗತ್ಯವಾಗಿ ಪೋಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಾದ ವಿಶೇಷ ವರದಿ ಇಲ್ಲಿದೆ.

ಶೆಟ್ಟಿಕೆರೆ ರಸ್ತೆಯ ಖಾಸಗಿ ಕಟ್ಟಡದಲ್ಲಿರುವ ಚಿಕ್ಕನಾಯಕನಹಳ್ಳಿ ಅಬಕಾರಿ ಇಲಾಖೆ ಕಚೇರಿ.

ಧನಂಜಯ್
ಚಿಕ್ಕನಾಯಕನಹಳ್ಳಿ: ಸರ್ಕಾರಿ ಕಟ್ಟಡ ಲಭ್ಯವಿದ್ದರೂ ಅಬಕಾರಿ ಇಲಾಖೆ ಕಚೇರಿಯು ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ತೆರಿಗೆ ಹಣ ಅನಗತ್ಯವಾಗಿ ಪೋಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಳೆಯ ತಾಲೂಕು ಕಚೇರಿಯ ಆವರಣದ ರೂಮಿನಲ್ಲಿದ್ದ ಈ ಕಚೇರಿಯನ್ನು ಸುಮಾರು ಹತ್ತು ವರ್ಷಗಳಿಗೂ ಮೊದಲು ಶೆಟ್ಟಿಕೆರೆ ರಸ್ತೆಯಲ್ಲಿರುವ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಯಿತು (Chikkanayakanahalli News). ಇದಕ್ಕೆ ತಿಂಗಳಿಗೆ 14,300 ರೂ. ಬಾಡಿಗೆ ಪಾವತಿಸಲಾಗುತ್ತಿದೆ. ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಹಣ ಬಾಡಿಗೆ ರೂಪದಲ್ಲಿ ವ್ಯರ್ಥವಾಗುತ್ತಿದೆ. ಈ ಹಣದಲ್ಲಿ ಜಾಗ ಖರೀದಿ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಬಹುದಾಗಿತ್ತು ಎಂದು ವಿಚಾರವಂತರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿಂದೆ ಹಳೆಯ ತಾಲೂಕು ಕಚೇರಿಯ ಆವರಣದಲ್ಲಿದ್ದ ಈ ಕಚೇರಿಯನ್ನು ಹಲವು ವರ್ಷಗಳ ಹಿಂದೆ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಹೊಸ ಆಡಳಿತ ಸೌಧಕ್ಕೆ ಇಲಾಖೆಯನ್ನು ಸ್ಥಳಾಂತರಿಸಲು ತಹಸೀಲ್ದಾರ್ ಅವಕಾಶ ನೀಡಲ್ಲವೆಂದು ಅಬಕಾರಿ ನಿರೀಕ್ಷಕ ಗಂಗರಾಜು ತಿಳಿಸಿದ್ದಾರೆ. ಇದು ಅಧಿಕಾರಿಗಳ ಬೇಜವಾಬ್ದಾರಿಗೆ ನಿದರ್ಶನ ಎಂದು ಸ್ಥಳೀಯರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Chikkanayakanahalli (Tumkur) news: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹೇಮಾವತಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಶಾಸಕರ ನಿರಂತರ ಪ್ರಯತ್ನ
ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ನಗರದಲ್ಲಿ ಅಂದಾಜು 14 ಕೋಟಿ ರೂ. ವೆಚ್ಚದಲ್ಲಿ ನೂತನ ಮಿನಿ ವಿಧಾನ ಸೌಧ ನಿರ್ಮಾಣಗೊಂಡಿದೆ. ಆದರೂ ಅಬಕಾರಿ ಅಧಿಕಾರಿಗಳ ಆಮೆ ನಡಿಗೆ ಕಾರ್ಯ ವೈಖರಿಯಿಂದ ಅಬಕಾರಿ ಇಲಾಖೆಗೆ ಬಾಡಿಗೆ ಹೊರೆ ಮುಂದುವರಿದಿದೆ. ಅಧಿಕಾರಿಗಳು ಹಲವು ವರ್ಷಗಳಿಂದಲೂ ಇಲಾಖೆಯನ್ನು ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವುದು ಅನುಮಾನಕ್ಕೂ ಎಡೆ ಮಾಡಿ ಕೊಟ್ಟಿದೆ.
ಬಾಡಿಗೆ ದಂಧೆಯ ಆರೋಪ
ಸರ್ಕಾರಿ ಕಟ್ಟಡಗಳ ಲಭ್ಯತೆ ಇದ್ದರೂ ಇಲಾಖೆಗಳು ಖಾಸಗಿ ಕಟ್ಟಡದಲ್ಲೇ ಮುಂದುವರಿಸುತ್ತಿರುವುದರ ಹಿಂದೆ ಬಾಡಿಗೆ ದಂಧೆಯ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಬಕಾರಿ ಇಲಾಖೆ ಮಾತ್ರವಲ್ಲದೆ ಕಾರ್ಮಿಕ ಇಲಾಖೆಯೂ ಬಾಡಿಗೆ ಕಟ್ಟಡದಲ್ಲಿ ತಮ್ಮ ಚಟುವಟಿಕೆ ನಡೆಸುತ್ತಿರುವುದು ಆರೋಪಗಳಿಗೆ ಪುಷ್ಠಿ ನೀಡುವಂತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಇಲಾಖೆಯನ್ನು ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಿ ಸಾರ್ವಜನಿಕರ ಹಣವನ್ನು ಉಳಿಸಬೇಕಿದೆ.