Madhugiri News: ಮಧುಗಿರಿಯಲ್ಲಿ ರಸ್ತೆಗಳ ಅವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ; ಸ್ಥಳೀಯರ ಆಗ್ರಹ
ಮಧುಗಿರಿ ಪಟ್ಟಣದ ಪುರಸಭೆ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದನ -ಕರುಗಳಿಗೆ ಪೂರೈಸಬೇಕಾದ ಗೋಕಟ್ಟೆಯ ನೀರು, ಬೇಸಿಗೆಯಲ್ಲಿ ಜನತೆಯ ಜೀವನಾಡಿಯಾಗಿರುವ ತೆಂಗಿನ ಮರದ ಬಾವಿಗೆ ಸಾಗುವ ರಸ್ತೆ ಅಭಿವೃದ್ಧಿಯಾಗದಿರುವುದು, ನಿರ್ವಹಣೆಯಾಗದ ಉದ್ಯಾನವನ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ.
ಮಧುಗಿರಿ ಪಟ್ಟಣದ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ಸ್ವಚ್ಛತೆಯ ಕೊರತೆ. -
ಮಧುಗಿರಿ, ಮೇ 4: ಅಪೂರ್ಣಗೊಂಡ ರಸ್ತೆ, ಕುಡಿಯುವ ನೀರು, ಉದ್ಯಾನವನದ ಸ್ವಚ್ಛತೆಯ ಕೊರತೆ ಸೇರಿದಂತೆ ಮಧುಗಿರಿ ಪಟ್ಟಣದಲ್ಲಿ (Madhugiri News) ನಾನಾ ಸಮಸ್ಯೆಗಳಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಪುರಸಭೆ ವ್ಯಾಪ್ತಿಯ ಗೋಕಟ್ಟೆಯಲ್ಲಿ ನೀರಿಲ್ಲ, ಬೇಸಿಗೆಯಲ್ಲಿ ಜನತೆಯ ಜೀವನಾಡಿಯಾಗಿರುವ ತೆಂಗಿನ ಮರದ ಬಾವಿಗೆ ಸಾಗುವ ರಸ್ತೆ ಅಭಿವೃದ್ಧಿಯಾಗದಿರುವುದು, ನಿರ್ವಹಣೆಯಾಗದ ಉದ್ಯಾನವನ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಇದರಿಂದ ಪಟ್ಟಣದ ಜನತೆಗೆ ಸಮಸ್ಯೆ ಅನುಭವಿಸುವಂತಾಗಿದೆ.
ಪಟ್ಟಣದ ಜನತೆಯ ಜೀವನಾಡಿಯಾಗಿರುವ ತೆಂಗಿನ ಮರದ ಬಾವಿಗೆ ಸಾಗುವ ರಸ್ತೆ ಅಭಿವೃದ್ಧಿ ಪಡಿಸಲೆಂದು ಕಳೆದ ಹಲವು ದಿನಗಳ ಹಿಂದೆ ಜಲ್ಲಿ ಹರಡಿ, ಡಾಂಬರು ಹಾಕದ ಹಿನ್ನೆಲೆ ವಾಹನ ಸವಾರರು ಪರದಾಡುವಂತಾಗಿದೆ.
ಇನ್ನು ವೃದ್ಧರಂತೂ ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಜೀವ ಕೈಯಲ್ಲಿಟ್ಟುಕೊಂಡು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ ಅಭಿವೃದ್ಧಿಯನ್ನು ಶೀಘ್ರವಾಗಿ ಕೈಗೊಳ್ಳಬೇಕೆಂಬುದು ಸ್ಥಳೀಯ ನಿವಾಸಿಗಳ ಒತ್ತಾಯವಾಗಿದೆ.
ಸೂಕ್ತ ನಿರ್ವಹಣೆಯಾಗದ ಉದ್ಯಾನವನ
ಪಟ್ಟಣದ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ಸೂಕ್ತ ನಿರ್ವಹಣೆ ಕೈಗೊಳ್ಳದೇ ಇರುವುದರಿಂದ ಸ್ವಚ್ಛತೆ ಮಾಯವಾಗಿದೆ. ಎಲ್ಲೆಂದರಲ್ಲಿ ಕೋಳಿ ಮೊಟ್ಟೆಗಳ ತ್ಯಾಜ್ಯ, ಕಸದ ರಾಶಿ ಎದ್ದು ಕಾಣುತ್ತದೆ. ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.
ಇನ್ನು ದನ- ಕರುಗಳಿಗಾಗಿ ಉಪ ವಿಭಾಗಾಧಿಕಾರಿ ಕಛೇರಿ ಹಿಂಭಾಗದಲ್ಲಿರುವ ಅಶ್ವತ್ಥ ಕಟ್ಟೆಯಲ್ಲಿ ಗೋಕಟ್ಟೆ ನಿರ್ಮಾಣವಾಗಿ ಅದಕ್ಕೆ ನೀರು ತುಂಬುವ ಕೆಲಸ ಪುರಸಭೆ ಅವರದ್ದೇ ಆಗಿದೆ. ಕಳೆದ 20 ದಿನಗಳಿಂದ ಈ ಗೋಕಟ್ಟೆಯು ನೀರಿಲ್ಲದೆ ಒಣಗಿಹೋಗಿದೆ.
ಪಟ್ಟಣದ ಎಲ್ಐಸಿ ಕಚೇರಿ ಮುಂಭಾಗದಲ್ಲಿನ ಜಾಮಿಯಾ ಮಸೀದಿಯ ಮುಂಭಾಗದ ರಸ್ತೆ ಚರಂಡಿ ನೀರು ಕಟ್ಟಿಕೊಂಡು ಇತ್ತೀಚೆಗೆ ಬಂದ ಮಳೆಯಿಂದಾಗಿ ಕೊಳಚೆ ನೀರು ಮನೆ ಒಳಗೆ ನುಗ್ಗಿ ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಸಾರ್ವಜನಿಕರೇ ಗಮನಿಸಿ; ಮಳೆ ಸಂಬಂಧಿತ ಸಮಸ್ಯೆ ನಿವಾರಣೆಗೆ ಸಹಾಯವಾಣಿ ಆರಂಭಿಸಿದ ಬೆಸ್ಕಾಂ
ಇನ್ನು ಖಾಸಗಿ ಬಸ್ ನಿಲ್ದಾಣದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು, ದುರಸ್ತಿಗೊಂಡಿಲ್ಲ. ಇದರಿಂದ ಪ್ರಯಾಣಿಕರಿಗೆ ಕುಡಿಯುವ ನೀರಿನ ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದಲ್ಲಿ ದಿನೇ ದಿನೇ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದ್ದು, ಫಾಗಿಂಗ್ ವ್ಯವಸ್ಥೆಯನ್ನು ಕೈಗೊಳ್ಳಬೇಕು ಹಾಗೂ ಹಲವು ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.