ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಶೀಘ್ರದಲ್ಲೇ ಆದೇಶ: ಡಿಸಿಎಂ ಪರಮೇಶ್ವರ್ ಭರವಸೆ
Dr G Parameshwar: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ರಾಜ್ಯದಲ್ಲಿ ಆರ್ಥಿಕ ಇಕ್ಕಟ್ಟಿನ ಪರಿಸ್ಥಿತಿಯಿದ್ದರೂ ಸಹ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಸನ್ಮಾನಿಸಲಾಯಿತು. -
ತುಮಕೂರು, ಸೆ.05: ಭಾರತದಂತೆ ಪ್ರಪಂಚದ ಯಾವುದೇ ರಾಷ್ಟ್ರದಲ್ಲಿ ಗುರುವಿಗೆ ದೇವರ ಸ್ಥಾನ ನೀಡಿ ಗೌರವಿಸಿರುವ ಉದಾಹರಣೆಗಳನ್ನು ನೋಡಲು ಸಾಧ್ಯವಿಲ್ಲ. ನಮ್ಮದು ಇಂತಹ ಉದಾತ್ತ ಆದರ್ಶಗಳನ್ನು ಹೊಂದಿರುವ ಹೆಮ್ಮೆಯ ಸಮಾಜ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ನಗರದ (Tumkur News) ಎಂಪ್ರೆಸ್ ಕಾಲೇಜು ಸಭಾಂಗಣದಲ್ಲಿ ತುಮಕೂರು ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 139ನೇ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಮತ್ತು ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುರುಗಳ ಪಾತ್ರ ಸ್ಮರಿಸಿದ ಉಪಮುಖ್ಯಮಂತ್ರಿ
ತಮ್ಮ ಸ್ವಂತ ಅನುಭವ ಹಂಚಿಕೊಂಡ ಡಿಸಿಎಂ, "ನಾನು ಗೊಲ್ಲಹಳ್ಳಿಯಲ್ಲಿ ಓದುವಾಗ ಕನ್ನಡ ಪಾಠ ಮಾಡುತ್ತಿದ್ದ ರಾಮಣ್ಣ ಹಾಗೂ ವಿಶ್ವವಿದ್ಯಾಲಯದ ಕೃಷ್ಣಶಾಸ್ತ್ರಿ ಅವರು ನನ್ನ ಬದುಕನ್ನು ತಿದ್ದಿ, ಈ ಮಟ್ಟಕ್ಕೆ ಬೆಳೆಸಿದ್ದಾರೆ. ಇವರೇ ನನ್ನ ಇಂದಿನ ಸ್ಥಾನಮಾನ ಹಾಗೂ ಗೌರವಕ್ಕೆ ಕಾರಣ" ಎಂದು ತಮ್ಮ ಗುರುಗಳನ್ನು ಕೃತಜ್ಞತೆಯಿಂದ ಸ್ಮರಿಸಿದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ವಿಚಾರಧಾರೆಗಳು ಮತ್ತು ಆದರ್ಶಗಳನ್ನು ಪ್ರತಿಯೊಬ್ಬ ಶಿಕ್ಷಕರು ಪಾಲಿಸಬೇಕು ಎಂದರು.
ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ
ಜ್ಯೋತಿಬಾ ಫುಲೆ ಕಾಲದಿಂದ ಹಿಡಿದು ಲಕ್ಷಾಂತರ ಶಿಕ್ಷಕರು ದೇಶ ಕಟ್ಟುವಲ್ಲಿ ಶ್ರಮಿಸಿದ್ದಾರೆ. ಇಂದು ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದ್ದರೆ ಮತ್ತು ಪ್ರತಿವರ್ಷ ಲಕ್ಷಾಂತರ ಇಂಜಿನಿಯರ್‌ಗಳು ಹಾಗೂ ವೈದ್ಯರು ರೂಪುಗೊಳ್ಳುತ್ತಿದ್ದರೆ ಅದರ ಸಂಪೂರ್ಣ ಶ್ರೇಯಸ್ಸು ಶಿಕ್ಷಕರಿಗೆ ಸಲ್ಲುತ್ತದೆ ಎಂದು ಅವರು ಶ್ಲಾಘಿಸಿದರು.
ಒಪಿಎಸ್ ಜಾರಿಗೆ ಸರ್ಕಾರದ ಬದ್ಧತೆ
ಶಿಕ್ಷಕರ ದೀರ್ಘಕಾಲದ ಬೇಡಿಕೆಯ ಕುರಿತು ಮಾತನಾಡಿದ ಡಿಸಿಎಂ ಡಾ. ಜಿ.ಪರಮೇಶ್ವರ್, "ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ರಾಜ್ಯದಲ್ಲಿ ಆರ್ಥಿಕ ಇಕ್ಕಟ್ಟಿನ ಪರಿಸ್ಥಿತಿಯಿದ್ದರೂ ಸಹ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು" ಎಂದು ಸ್ಪಷ್ಟಪಡಿಸಿದರು.
ಜತೆಗೆ, ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಶಾಸಕರಾದ ಜ್ಯೋತಿಗಣೇಶ್, ಬಿ. ಸುರೇಶ್ ಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ಗೌಡ, ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಹಾಲನೂರು ಲೇಪಾಕ್ಷ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಘುಚಂದ್ರ, ಉಪನಿರ್ದೇಶ (ಅಭಿವೃದ್ಧಿ) ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಉಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಿ.ಜಿ. ತಿಮ್ಮೇಗೌಡ ಸೇರಿದಂತೆ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಶಿಕ್ಷಕಿಯರು ಭಾಗವಹಿಸಿದ್ದರು.