ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉದ್ಯಮಿ ಕೇತನ್‌ ಅಗರ್ವಾಲ್‌ ಹತ್ಯೆ ತನಿಖೆಯಲ್ಲಿ ಮಹತ್ವದ ಬೆಳವಣಿಗೆ; ಭಾವಿ ಪತ್ನಿ, ಆಕೆಯ ಪ್ರಿಯಕರನ ಜತೆ ಇದೀಗ 3ನೇ ಆರೋಪಿಯ ಬಂಧನ

Pune Fort Murder: ಮಹಾರಾಷ್ಟ್ರದ ಪುಣೆಯ ಲೋಹಗಢ ಕೋಟೆಯಿಂದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ತ‍ಳ್ಳಿ ಹತ್ಯೆಗೈದ ಪ್ರಕರಣದಲ್ಲಿ ಮೂರನೇ ಆರೋಪಿ ರಿತೇಶ್ ಹಂಗೆನನ್ನು ಪೊಲೀಸರು ಬಂಧಿಸಿದ್ದಾರೆ. ಕೇತನ್ ಹತ್ಯೆಯ ಸಂಚಿನ ಬಗ್ಗೆ ರಿತೇಶ್‌ಗೆ ಮೊದಲೇ ಮಾಹಿತಿ ಇತ್ತು ಎಂದು ಪೊಲೀಸರು ಆರೋಪಿಸಿದ್ದಾರೆ. ಮೊಬೈಲ್ ಚಾಟ್‌ಗಳ ಫೊರೆನ್ಸಿಕ್ ಪರಿಶೀಲನೆಯಲ್ಲಿ ಕೇತನ್‌ನನ್ನು ಕೋಟೆಯಿಂದ ತಳ್ಳುವ ಹಾಗೂ ಸಾಕ್ಷ್ಯ ನಾಶಪಡಿಸುವ ಕುರಿತು ರಿತೇಶ್‌ ಜತೆ ನಡೆಸಿದ ಚರ್ಚೆ ಪತ್ತೆಯಾಗಿದೆ. ಹೀಗಾಗಿ ರಿತೇಶ್‌ನನ್ನು ಸೆಪ್ಟೆಂಬರ್ 12ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಕೇತನ್ ಅಗರ್ವಾಲ್ ಕೊಲೆ: ಮೂರನೇ ಆರೋಪಿ ಅರೆಸ್ಟ್

ಕೇತನ್‌-ಸಿಯಾ ಹಾಗೂ ರಿತೇಶ್ ಹಂಗೆ (ಸಂಗ್ರಹ ಚಿತ್ರ) -

Profile
Sushmitha Jain Sep 5, 2026 10:08 PM

ಮುಂಬೈ, ಸೆ. 5: ಮಹಾರಾಷ್ಟ್ರದ ಪುಣೆಯಲ್ಲಿ ಜೂನ್‌ನಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ (KetanAgarwal) ಕೊಲೆ ಪ್ರಕರಣಕ್ಕೆ (Pune Fort Murder) ಹೊಸ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಬಳಿಕ ಇದೀಗ ಮತ್ತೊಬ್ಬ ಆರೋಪಿಯನ್ನು (Third Accused) ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಿತೇಶ್ ಹಂಗೆ ಎಂದು ಗುರುತಿಸಲಾಗಿದ್ದು, ಆತ ಚೇತನ್ ಚೌಧರಿಯ ಸ್ನೇಹಿತ ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 18ರಂದು ಲೋಹಗಢ ಕೋಟೆಯಲ್ಲಿ ಕೇತನ್ ಅಗರ್ವಾಲ್ ಹತ್ಯೆಗೆ ಸಂಚು ರೂಪಿಸುವಲ್ಲಿ ರಿತೇಶ್ ಭಾಗಿಯಾಗಿದ್ದ ಎನ್ನಲಾಗಿದೆ.

ತನಿಖೆ ವೇಳೆ ರಿತೇಶ್‌ಗೆ ಕೇತನ್‌ನನ್ನು ಮೊದಲು ಕೈ-ಕಾಲು ಮುರಿದು ಗಾಯಗೊಳಿಸಿ, ಬಳಿಕ ಹತ್ಯೆ ಮಾಡುವ ಯೋಜನೆಯ ಬಗ್ಗೆ ತಿಳಿದಿತ್ತು ಎಂಬುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಯ ಬಳಿಕ ಚೇತನ್ ರಿತೇಶ್‌ಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ.

ಪೊಲೀಸರು ವಶಪಡಿಸಿಕೊಂಡ ರಿತೇಶ್‌ನ ಮೊಬೈಲ್ ಫೋನ್‌ನ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಕೇತನ್‌ನನ್ನು ಲೋಹಗಢ ಕೋಟೆಯಿಂದ ತಳ್ಳುವ ಕುರಿತು ಹಾಗೂ ಅಪರಾಧದ ಸಾಕ್ಷ್ಯಗಳನ್ನು ನಾಶಪಡಿಸುವ ಕುರಿತು ಚಾಟ್‌ಗಳು ಪತ್ತೆಯಾಗಿವೆ ಎನ್ನಲಾಗಿದೆ. ರಿತೇಶ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 12ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಅಪಘಾತವೆಂದು ಭಾವಿಸಿದ್ದ ಪ್ರಕರಣ

ಆರಂಭದಲ್ಲಿ ಕೇತನ್ ಅಗರ್ವಾಲ್ ಸಾವನ್ನು ಪೊಲೀಸರು ಅಪಘಾತ ಎಂದು ಪರಿಗಣಿಸಿ ಪ್ರಕರಣ ದಾಖಲಿಸಿದ್ದರು. ಆದರೆ ಕೇತನ್‌ನ ಸಹೋದರಿಗೆ ಘಟನೆಯ ಬಗ್ಗೆ ಅನುಮಾನ ಮೂಡಿತ್ತು. ಅಂತ್ಯಕ್ರಿಯೆಯ ನಂತರವೂ ಅವರು ಅಪಘಾತದ ರೀತಿಯನ್ನು ಪ್ರಶ್ನಿಸುತ್ತಲೇ ಇದ್ದರು.
ಘಟನೆ ನಡೆದ ನಾಲ್ಕು ದಿನಗಳ ಬಳಿಕ ಸಿಯಾ ಗೋಯಲ್ ಕೇತನ್ ಕುಟುಂಬಕ್ಕೆ ಸಾಂತ್ವನ ಹೇಳಲು ಮನೆಗೆ ಬಂದಾಗ, ಆಕೆಯನ್ನು ಸಹೋದರಿ ಲೋಹಗಢದಲ್ಲಿ ನಡೆದ ಘಟನೆ ಕುರಿತು ವಿವರವಾಗಿ ಪ್ರಶ್ನಿಸಿದ್ದರು. ಸಿಯಾ ನೀಡಿದ ಉತ್ತರಗಳಲ್ಲಿ ಕಂಡುಬಂದ ವ್ಯತ್ಯಾಸಗಳು ಮತ್ತು ಆಕೆಯ ತಪ್ಪಿಸಿಕೊಳ್ಳುವ ರೀತಿಯ ಉತ್ತರಗಳು ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತು. ಬಳಿಕ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿ ಮರುತನಿಖೆಗೆ ಮನವಿ ಮಾಡಿದರು.

ಪೊಲೀಸರ ಪ್ರಕಾರ, ಸಿಯಾ ಆರಂಭದಲ್ಲಿ ಕೇತನ್ ಫೋಟೊ ತೆಗೆಯುವಾಗ ಕಾಲು ಜಾರಿ ಕಂದಕಕ್ಕೆ ಬಿದ್ದಿದ್ದಾನೆ ಎಂದು ಹೇಳಿದ್ದಳು. ಆದರೆ ತನಿಖೆಯಲ್ಲಿ ಸಿಯಾ ಮತ್ತು ಚೇತನ್ ಸೇರಿ ಕೇತನ್‌ನನ್ನು ತಳ್ಳಿಹಾಕಿ ಕೊಲೆ ಮಾಡಿ, ಅದನ್ನು ಅಪಘಾತದಂತೆ ಬಿಂಬಿಸಲು ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಇಬ್ಬರನ್ನೂ ಜೂನ್ 23ರಂದು ಬಂಧಿಸಲಾಗಿತ್ತು.

ಹಾಡಹಗಲೇ ವ್ಯಕ್ತಿಯ ಕತ್ತು ಕೊಯ್ದು ಕೊಲೆ: ಬಾಗೇಪಲ್ಲಿಯಲ್ಲಿ ಬೆಚ್ಚಿಬೀಳಿಸಿದ ಘಟನೆ

ಸಿಸಿಟಿವಿಯಿಂದ ಚೇತನ್ ಪತ್ತೆ

ಪೊಲೀಸರು ಸಿಸಿಟಿವಿ ದೃಶ್ಯಗಳು, ತಾಂತ್ರಿಕ ಸಾಕ್ಷ್ಯಗಳು ಹಾಗೂ ಹಲವು ಮಂದಿಯ ವಿಚಾರಣೆ ನಡೆಸಿದ ಬಳಿಕ ಸಿಯಾ ಮತ್ತು ಚೇತನ್ ನಡುವಿನ ಸಂಬಂಧದ ಬಗ್ಗೆ ಮಾಹಿತಿ ಪಡೆದರು. ಜೂನ್‌ನ ಬಿಸಿಲಿನ ನಡುವೆಯೂ ಹೂಡಿ ಧರಿಸಿದ್ದ ವ್ಯಕ್ತಿಯೊಬ್ಬ ಕೇತನ್ ಮತ್ತು ಸಿಯಾ ಪ್ರಯಾಣಿಸುತ್ತಿದ್ದ ವಾಹನ ಹಾಗೂ ಅವರ ಚಲನವಲನವನ್ನು ಹಿಂಬಾಲಿಸುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿತ್ತು. ಈ ಅಸಾಮಾನ್ಯ ಉಡುಗೆ ಪೊಲೀಸರ ಗಮನ ಸೆಳೆದಿದ್ದು, ತನಿಖೆಯ ಮೂಲಕ ಆತ ಚೇತನ್ ಎಂದು ಗುರುತಿಸಲಾಯಿತು.

ತನಿಖೆಯಲ್ಲಿ ಸಿಯಾ ಮತ್ತು ಚೇತನ್ ಮೂರು ವರ್ಷಗಳಿಂದ ಸಂಪರ್ಕದಲ್ಲಿದ್ದರು ಎಂಬುದು ಬೆಳಕಿಗೆ ಬಂತು. ಜನವರಿಯಿಂದ ಜೂನ್‌ವರೆಗೆ ಇಬ್ಬರೂ 2,000ಕ್ಕೂ ಹೆಚ್ಚು ಬಾರಿ ಮಾತನಾಡಿದ್ದು, ಒಟ್ಟು 238 ಗಂಟೆಗಳ ಕಾಲ ಕರೆಗಳಲ್ಲಿ ಮಾತನಾಡಿದ್ದರು ಎನ್ನಲಾಗಿದೆ. ಇದಲ್ಲದೆ ಫೇಸ್‌ಟೈಮ್ ಮತ್ತು ವ್ಯಾಟ್ಸ್‌ಆ್ಯಪ್‌ನಲ್ಲೂ ನಿರಂತರವಾಗಿ ಸಂವಹನ ನಡೆಸಿದ್ದರು.

ಬಾಲಿ ಪ್ರವಾಸಕ್ಕೂ ಮುನ್ನ ಪಾಸ್‌ಪೋರ್ಟ್ ನಾಪತ್ತೆ

ಕೇತನ್ ಮತ್ತು ಸಿಯಾ ವಿವಾಹಪೂರ್ವ ಫೋಟೊಶೂಟ್‌ಗಾಗಿ ಜೂನ್ 6ರಂದು ಮುಂಬೈಯಿಂದ ಇಂಡೋನೇಷ್ಯಾದ ಬಾಲಿಗೆ ತೆರಳಲು ಸಿದ್ಧರಾಗಿದ್ದರು. ಆದರೆ ವಿಮಾನ ನಿಲ್ದಾಣಕ್ಕೆ ತಲುಪಿದಾಗ ಕೇತನ್‌ನ ಪಾಸ್‌ಪೋರ್ಟ್ ಕಾಣೆಯಾಗಿತ್ತು. ಹೀಗಾಗಿ ಅವರು ಪ್ರವಾಸಕ್ಕೆ ತೆರಳಲು ಸಾಧ್ಯವಾಗದೆ ವಾಪಸ್ ಬಂದಿದ್ದರು. ಕೇತನ್ ತಂದೆ ವಿಶಾಲ್ ಅಗರ್ವಾಲ್, ಪಾಸ್‌ಪೋರ್ಟ್ ಕೇವಲ ಕೇತನ್‌ನದ್ದೇ ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಈ ಘಟನೆ ನಡೆದ 12 ದಿನಗಳ ಬಳಿಕ ಜೂನ್ 18ರಂದು ಲೋಹಗಢ ಕೋಟೆಯಲ್ಲಿ ಕೇತನ್ ಹತ್ಯೆಯಾಗಿತ್ತು.