Pavagada News: ತುಮಕೂರು-ರಾಯದುರ್ಗ ರೈಲು ಮಾರ್ಗ ವರ್ಷದೊಳಗೆ ಪೂರ್ಣ: ಸಚಿವ ವಿ. ಸೋಮಣ್ಣ
V Somanna: ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಶುಕ್ರವಾರ ಪಾವಗಡಕ್ಕೆ ಭೇಟಿ ನೀಡಿ, ಕೆ. ರಾಂಪುರ ಹಾಗೂ ಟಿ.ಎನ್. ಪೇಟೆ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಕಾಮಗಾರಿ ಹಾಗೂ ರೈಲ್ವೆ ಸ್ಟೇಷನ್ ಕಾಮಗಾರಿ ವೀಕ್ಷಣೆ ಮಾಡಿದರು.

-

ಪಾವಗಡ: ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ (V Somanna) ಶುಕ್ರವಾರ ಪಾವಗಡಕ್ಕೆ (Pavagada News) ಭೇಟಿ ನೀಡಿ, ಕೆ. ರಾಂಪುರ ಹಾಗೂ ಟಿ.ಎನ್. ಪೇಟೆ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಕಾಮಗಾರಿ ಹಾಗೂ ರೈಲ್ವೆ ಸ್ಟೇಷನ್ ಕಾಮಗಾರಿ ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಬರುವ ಒಂದು ವರ್ಷದೊಳಗೆ ತುಮಕೂರು-ರಾಯದುರ್ಗ ಮಾರ್ಗವನ್ನು ಸಹ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವುದಾಗಿ ಅವರು ಭರವಸೆ ನೀಡಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25ರಂದು ಇಲ್ಲಿನ ನಿಲ್ದಾಣಕ್ಕೆ ಕೆ.ರಾಮಪುರ ರೈಲ್ವೆ ನಿಲ್ದಾಣ ಎಂದು ಮರು ನಾಮಕರಣ ಮಾಡಲಾಗುವುದು ಎಂದರು. 2026ರ ವೇಳೆಗೆ ರಾಯದುರ್ಗದಿಂದ ಪಾವಗಡಕ್ಕೆ ರೈಲು ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. 2027ರ ವೇಳೆಗೆ ತುಮಕೂರು-ರಾಯದುರ್ಗ ರೈಲು ಸಂಚಾರ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಪಾವಗಡ ತಾಲೂಕಿನಲ್ಲಿ ರೈಲ್ವೆ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದ್ದು, ಈ ಭಾಗದಲ್ಲಿ ಬೃಹತ್ ಸೋಲಾರ್ ಪಾರ್ಕ್‌ನಿಂದ ಈ ವಿಭಾಗದ ಜನರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಜೊತೆಗೂಡಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಎಚ್.ವಿ. ವೆಂಕಟೇಶ್, ಆಂಧ್ರದ ಹಿಂದೂಪುರ ಸಂಸದ ಪಾರ್ಥಸಾರಥಿ. ಆಂಧ್ರದ ಮಾಜಿ ಎಂಎಲ್‌ಸಿ ಗುಂಡಮಂಡಲ ತಿಪ್ಪೇಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | Utthana Prabandha Spardhe 2025: ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆಗೆ ಪ್ರಬಂಧಗಳ ಆಹ್ವಾನ
ಕೇಂದ್ರದಿಂದ ರಾಜ್ಯಕ್ಕೆ ದೀಪಾವಳಿ ಗಿಫ್ಟ್: ಬೆಂಗಳೂರು-ಹುಬ್ಬಳ್ಳಿಗೆ ಸೂಪರ್ ಫಾಸ್ಟ್ ವಿಶೇಷ ರೈಲು
ನವದೆಹಲಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ (Pralhad Joshi) ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ (Central Government) ದೀಪಾವಳಿ (Deepavali) ವೇಳೆ ರಾಜ್ಯಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ರಾಜಧಾನಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಹುಬ್ಬಳ್ಳಿ ಮಧ್ಯೆ ನಿತ್ಯ ʼಸೂಪರ್ ಫಾಸ್ಟ್ ವಿಶೇಷ ರೈಲುʼ ಸಂಚಾರದ ಕೊಡುಗೆ ನೀಡಿದೆ. ಹುಬ್ಬಳ್ಳಿ-ಬೆಂಗಳೂರು ಮಾರ್ಗದಲ್ಲಿ ಡಿಸೆಂಬರ್ 8ರಿಂದ ಪ್ರತಿನಿತ್ಯವೂ ಈ ವಿಶೇಷ ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದರಂತೆ ರೈಲು ಸಂಖ್ಯೆ: 20687 ಮತ್ತು 20688 SBC ಈ ಮಾರ್ಗದಲ್ಲಿ ನಿಯತಕಾಲಿಕವಾಗಿ ಸಂಚಾರ ಆರಂಭಿಸಲಿವೆ.
ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಕೊಂಡಿಯಂತಿರುವ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಹೆಚ್ಚಿನ ಜನಸಂಪರ್ಕ ಇರುವುದರಿಂದ ಧಾರವಾಡ ಸಂಸದ, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಕೆಲವು ದಿನಗಳ ಹಿಂದಷ್ಟೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಸಚಿವ ಜೋಶಿ ಅವರ ಒತ್ತಾಸೆಗೆ ಸ್ಪಂದಿಸಿದ ರೈಲ್ವೆ ಸಚಿವರೀರ್ವರೂ ಇದೀಗ ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಮತ್ತೊಂದು ಸೂಪರ್ ಫಾಸ್ಟ್ ವಿಶೇಷ ರೈಲು ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | IPPB Recruitment 2025: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿದೆ 348 ಹುದ್ದೆ; ಹೀಗೆ ಅಪ್ಲೈ ಮಾಡಿ
ಈ ಸೂಪರ್ ಫಾಸ್ಟ್ ರೈಲು ಹುಬ್ಬಳ್ಳಿ, ಕರ್ಜಗಿ, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬಿರೂರು, ಅರಸಿಕೆರೆ, ಸಂಪಿಗೆ ರೋಡ್, ತುಮಕೂರು, ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ಮಧ್ಯೆ ಸಂಚರಿಸಲಿದ್ದು, ರಾಜಧಾನಿ ಮತ್ತು ಉತ್ತರ ಕರ್ನಾಟಕ ಮಾತ್ರವಲ್ಲದೆ, ಮಧ್ಯ ಕರ್ನಾಟಕಕ್ಕೂ ಸಂಪರ್ಕ ಸೇತುವಾಗಿದ್ದು, ಇದರಿಂದ ರಾಜ್ಯದ ಏಳೆಂಟು ಜಿಲ್ಲೆಗಳಿಗೂ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ಹೊಸ ರೈಲು ಸಮಸ್ತ ಉತ್ತರ ಕರ್ನಾಟಕದ ಅಭಿವೃದ್ಧಿ ಜತೆಗೆ ವಿವಿಧ ಪ್ರದೇಶಗಳ ವಾಣಿಜ್ಯೋದ್ಯಮಕ್ಕೂ ಅನುಕೂಲವಾಗಲಿದೆ. ಹೀಗಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಹೊಸ ರೈಲು ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ವಿ. ಸೋಮಣ್ಣ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.