ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Sandeep Sharma Muteri Column: ತಾಳಮದ್ದಳೆ: ಕಲೆ ಮತ್ತು ಕಾಲಧರ್ಮದ ಸಂಘರ್ಷ

ತಾಳಮದ್ದಳೆ ಎಂದರೆ ಅರ್ಥಧಾರಿಗಳ ಬೌದ್ಧಿಕ ಕಸರತ್ತು. ಅಲ್ಲಿ ವೇಷ-ಭೂಷಣಗಳಿಲ್ಲ, ಕೇವಲ ಶಬ್ದದ ಮೂಲಕ ರಸನಿಷ್ಪತ್ತಿ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಇಲ್ಲಿ ಕಲಾವಿದ ಕೇವಲ ಒಬ್ಬ ನಟನಲ್ಲ, ಅವನು ವ್ಯಾಕರಣ, ಭಾಮಹ-ದಂಡಿಗಳ ಅಲಂಕಾರ ಶಾಸ ಮತ್ತು ಪುರಾಣಗಳ ಮರ್ಮವನ್ನ ರಿತ ಪ್ರತಿಭಾವಂತನಾಗಿರಬೇಕು. ಆದರೆ ಇಂದಿನ ತಾಳಮದ್ದಳೆಗಳಲ್ಲಿ ಔಚಿತ್ಯಕ್ಕಿಂತ ಜನಪ್ರಿಯತೆಯೇ ಪ್ರಧಾನವಾಗುತ್ತಿದೆ.

ತಾಳಮದ್ದಳೆ: ಕಲೆ ಮತ್ತು ಕಾಲಧರ್ಮದ ಸಂಘರ್ಷ

-

Ashok Nayak
Ashok Nayak Jan 12, 2026 9:33 AM

ತಾಳ-ಮೇಳ

ಸಂದೀಪ್‌ ಶರ್ಮಾ ಮೂಟೇರಿ

ಪೂರ್ವರಂಗದ ಶಿಸ್ತು, ಪ್ರಸಂಗದ ಆಶಯ ಮತ್ತು ಕಾವ್ಯದ ಸೌಂದರ್ಯವನ್ನು ಗೌಣವಾಗಿಸಿ, ಕೇವಲ ತಾರ್ಕಿಕ ಜಗಳಗಳನ್ನು ಅಥವಾ ಅಪ್ರಸ್ತುತ ರಾಜಕೀಯ-ಸಾಮಾಜಿಕ ವಿಷಯ ಗಳನ್ನು ತಾಳಮದ್ದಳೆಯ ವೇದಿಕೆಗೆ ಎಳೆದು ತರುವುದು ರಸಭಂಗಕ್ಕೆ ದಾರಿಯಾಗುತ್ತದೆ. ಕಲೆ ಎನ್ನುವುದು ಲೋಕಧರ್ಮಿಯಿಂದ ನಾಟ್ಯಧರ್ಮಿಯೆಡೆಗೆ ಸಾಗಬೇಕು.

ಭಾರತೀಯ ಕಲಾಮೀಮಾಂಸೆಯಲ್ಲಿ ‘ಕಲೆ’ ಎಂಬುದು ಕೇವಲ ಮನೋರಂಜನೆಯ ಲಘು ಸಾಧನ ವಲ್ಲ; ಅದೊಂದು ತಪಸ್ಸು, ಪರಂಪರೆಯ ವಾಹಿನಿ ಮತ್ತು ಲೋಕವೃತ್ತದ ಅನುಕರಣೆ. ಅದರಲ್ಲೂ ಕರಾವಳಿ ಕರ್ನಾಟಕದ ಅಸ್ಮಿತೆಯಾದ ಯಕ್ಷಗಾನ ಮತ್ತು ಅದರ ವಾಚಿಕ ರೂಪವಾದ ತಾಳಮದ್ದಳೆ ಕೇವಲ ಪ್ರದರ್ಶಕ ಕಲೆಗಳಲ್ಲ, ಅವು ಶಬ್ದ ಮತ್ತು ಅರ್ಥಗಳ ಸಮಾಗಮದ ವಾಕ್-ತಪಸ್ಸು. ಕಲೆಯ ಪರಮೋದ್ದೇಶ ರಸಾನುಭೂತಿ. ಆದರೆ ಇಂದು ಕಾಲಧರ್ಮದ ಪ್ರಭಾವವೋ ಅಥವಾ ಮಾರುಕಟ್ಟೆ ಯ ಅನಿವಾರ್ಯತೆಯೋ, ಈ ಪವಿತ್ರ ಕಲೆ ವಾಣಿಜ್ಯೀಕರಣದ ಸುಳಿಗೆ ಸಿಲುಕಿ ತನ್ನ ಮೂಲಸತ್ವ ವನ್ನು ಬಲಿಕೊಡುತ್ತಿದೆಯೇ ಎಂಬ ಗಹನವಾದ ಜಿಜ್ಞಾಸೆ ಕಲಾಭಿಮಾನಿಗಳಲ್ಲಿ ಮೂಡಿದೆ.

ತಾಳಮದ್ದಳೆ ಎಂದರೆ ಅರ್ಥಧಾರಿಗಳ ಬೌದ್ಧಿಕ ಕಸರತ್ತು. ಅಲ್ಲಿ ವೇಷ-ಭೂಷಣಗಳಿಲ್ಲ, ಕೇವಲ ಶಬ್ದದ ಮೂಲಕ ರಸನಿಷ್ಪತ್ತಿ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಇಲ್ಲಿ ಕಲಾವಿದ ಕೇವಲ ಒಬ್ಬ ನಟನಲ್ಲ, ಅವನು ವ್ಯಾಕರಣ, ಭಾಮಹ-ದಂಡಿಗಳ ಅಲಂಕಾರ ಶಾಸ ಮತ್ತು ಪುರಾಣಗಳ ಮರ್ಮವನ್ನರಿತ ಪ್ರತಿಭಾವಂತನಾಗಿರಬೇಕು. ಆದರೆ ಇಂದಿನ ತಾಳಮದ್ದಳೆಗಳಲ್ಲಿ ಔಚಿತ್ಯಕ್ಕಿಂತ ಜನಪ್ರಿಯತೆಯೇ ಪ್ರಧಾನವಾಗುತ್ತಿದೆ.

ಪಾತ್ರದ ಗಾಂಭೀರ್ಯವನ್ನು ಎತ್ತಿಹಿಡಿಯಬೇಕಾದ ಸಂಭಾಷಣೆಗಳು ಇಂದು ಕೇವಲ ಚಪ್ಪಾಳೆ ಗಿಟ್ಟಿಸುವ ಹಾಸ್ಯ ಅಥವಾ ಚತುರೋಕ್ತಿಗಳಿಗೆ ಸೀಮಿತವಾಗುತ್ತಿರುವುದು ಕಲಾತ್ಮಕವಾಗಿ ದೊಡ್ಡ ಕುಸಿತ. ಪೂರ್ವರಂಗದ ಶಿಸ್ತು, ಪ್ರಸಂಗದ ಆಶಯ ಮತ್ತು ಕಾವ್ಯದ ಸೌಂದರ್ಯವನ್ನು ಗೌಣವಾಗಿಸಿ, ಕೇವಲ ತಾರ್ಕಿಕ ಜಗಳಗಳನ್ನು ಅಥವಾ ಅಪ್ರಸ್ತುತ ರಾಜಕೀಯ-ಸಾಮಾಜಿಕ ವಿಷಯಗಳನ್ನು ತಾಳಮದ್ದಳೆಯ ವೇದಿಕೆಗೆ ಎಳೆದು ತರುವುದು ರಸಭಂಗಕ್ಕೆ ದಾರಿಯಾಗುತ್ತದೆ.

ಇದನ್ನೂ ಓದಿ: Sandeep Sharma Mooteri Column: ಪಂಚಾತ್ಮಕ ದೈವಿಕ ಸಂಯೋಗದ ರಸಸಿದ್ಧಿ

ಕಲೆ ಎನ್ನುವುದು ಲೋಕಧರ್ಮಿಯಿಂದ ನಾಟ್ಯಧರ್ಮಿಯೆಡೆಗೆ ಸಾಗಬೇಕು. ಆದರೆ ಇಂದು ಮಾರು ಕಟ್ಟೆಯ ಅಬ್ಬರದಲ್ಲಿ ವಿರುದ್ಧವೇ ನಡೆಯುತ್ತಿದೆ; ಅಧ್ಯಾತ್ಮ ಮತ್ತು ಪುರಾಣಗಳ ಗಹನ ವಿಚಾರ ಗಳನ್ನು ಸವಕಲು ಹರಟೆಯ ಮಟ್ಟಕ್ಕೆ ಇಳಿಸಲಾಗುತ್ತಿದೆ.

ಇದು ಕಲಾತ್ಮಕ ಅಧೋಗತಿಯಲ್ಲದೆ ಮತ್ತೇನು? ಯಕ್ಷಗಾನದ ಇಂದಿನ ಸ್ಥಿತಿಯನ್ನು ಗಮನಿಸಿದರೆ, ಅಲ್ಲಿ ಕಲೆಗಿಂತ ಉದ್ಯಮದ ಲಕ್ಷಣಗಳೇ ಎದ್ದು ಕಾಣುತ್ತಿವೆ. ಮೇಳಗಳ ಸಂಖ್ಯೆ ಹೆಚ್ಚಾದಂತೆ ಗುಣ ಮಟ್ಟ ಕ್ಷೀಣಿಸುತ್ತಿದೆ. ಕಲಾ ಪ್ರದರ್ಶನಗಳು ಕೇವಲ ಇಡೀ ರಾತ್ರಿ ಮನೋರಂಜನೆಯ ಪ್ಯಾಕೇಜ್‌ ಗಳಾಗುತ್ತಿವೆ.

ಕಲಾವಿದನಿಗೆ ಸಿಗಬೇಕಾದ ಗೌರವಧನ ಮತ್ತು ಮನ್ನಣೆ ಮುಖ್ಯವೇ ಹೌದು, ಆದರೆ ಅದನ್ನು ಕಲೆಯ ಆಂತರಿಕ ಶುದ್ಧಿಯನ್ನು ಬಲಿಗೊಟ್ಟು ನೀಡುವಂತೆ/ಪಡೆಯುವಂತೆ ಆಗಬಾರದು. ವಾಣಿಜ್ಯೀಕರಣದ ಪ್ರಭಾವದಿಂದಾಗಿ ತಾರಾ ವರ್ಚಸ್ಸು ಯಕ್ಷಗಾನಕ್ಕೆ ಲಗ್ಗೆ ಇಟ್ಟಿದೆ. ಒಬ್ಬ ನಿರ್ದಿಷ್ಟ ಕಲಾವಿದ ಇದ್ದರೆ ಮಾತ್ರ ಪ್ರೇಕ್ಷಕರು ಬರುತ್ತಾರೆ ಎಂಬ ಸ್ಥಿತಿ ನಿರ್ಮಾಣವಾಗಿರುವುದು ಸಂಘಟಕರು ಮಾರುಕಟ್ಟೆಯ ತಂತ್ರಕ್ಕೆ ಶರಣಾಗಿರುವುದರ ದ್ಯೋತಕವಾಗಿದೆ.

ಇದರಿಂದಾಗಿ ಸಮಷ್ಟಿ ಕಲೆಯಾದ ಯಕ್ಷಗಾನವು ವೈಯಕ್ತಿಕ ಪ್ರದರ್ಶನದ ವೇದಿಕೆಯಾಗುತ್ತಿದೆ. ಹಳೆಯ ಕಾಲದ ಬೈಠಕ್ ಶೈಲಿಯ ತಾಳಮದ್ದಳೆಗಳಲ್ಲಿ ಇರುತ್ತಿದ್ದ ಆ ನಿಶ್ಶಬ್ದ ಏಕಾಗ್ರತೆ ಮತ್ತು ಭಕ್ತಿಯ ಪರಾಕಾಷ್ಠೆ ಇಂದು ಮೈಕ್ ಸೆಟ್‌ಗಳ ಅಬ್ಬರ ಮತ್ತು ಸಾಮಾಜಿಕ ಜಾಲತಾಣಗಳ ರೀಲ್ಸ ಸಂಸ್ಕೃತಿಯಲ್ಲಿ ಕಳೆದುಹೋಗುತ್ತಿದೆ. ಯುಟ್ಯೂಬ್ ಕ್ಲಿಪ್ಪಿಂಗ್‌ಗಳಿಗಾಗಿ ಅಬ್ಬರದ ಮಾತುಗಳನ್ನು ಆಡುವುದು ಕಲೆಯ ಧ್ವನಿಯನ್ನು ಕೊಲ್ಲುತ್ತಿದೆ.

Yaksha R

ಇಂದಿನ ತಾಳಮದ್ದಳೆಗಳಲ್ಲಿ ವಾದ ಹೆಚ್ಚಾಗುತ್ತಿದೆ, ಆದರೆ ಸಂವಾದ ಮರೆಯಾಗುತ್ತಿದೆ. ಒಬ್ಬ ಅರ್ಥಧಾರಿ ತನ್ನ ಪಾತ್ರ ಔಚಿತ್ಯವನ್ನು ಮೀರಿ ಇನ್ನೊಬ್ಬ ಕಲಾವಿದನನ್ನು ಬೌದ್ಧಿಕವಾಗಿ ಸೋಲಿ ಸಲು ಯತ್ನಿಸುವುದು ಕಲೆಗೆ ಮಾಡುವ ಅಪಚಾರ. ಮಹಾಕಾವ್ಯಗಳಾದ ರಾಮಾಯಣ-ಮಹಾ ಭಾರತಗಳು ನಮಗೆ ಕಲಿಸುವುದು ಮೌಲ್ಯಗಳನ್ನು, ಕೇವಲ ಕುತರ್ಕಗಳನ್ನಲ್ಲ. ಆದರೆ ವಾಣಿಜ್ಯೀ ಕರಣದ ಒತ್ತಡದಲ್ಲಿ ಕಲಾವಿದರು ಪ್ರೇಕ್ಷಕರ ಶಿಳ್ಳೆಗಾಗಿ ಪುರಾಣದ ಪಾತ್ರಗಳನ್ನು ಆಧುನಿಕ ನ್ಯಾಯಾಲಯದ ವಕೀಲರಂತೆ ಬಿಂಬಿಸುತ್ತಿದ್ದಾರೆ.

ಕಲೆಯು ಪ್ರೇಕ್ಷಕನನ್ನು ಸಂಸ್ಕಾರದ ಕಡೆಗೆ ಒಯ್ಯಬೇಕು. ಆದರೆ ಇಂದಿನ ಪ್ರವೃತ್ತಿಯು ಪ್ರೇಕ್ಷಕನನ್ನು ಕೇವಲ ಕ್ಷಣಿಕ ಮನೋರಂಜನೆಯಲ್ಲಿ ಬಂಧಿಸಿಡುತ್ತಿದೆ. ಅರ್ಥ ಎನ್ನುವುದು ಶಬ್ದದ ಆತ್ಮ. ಆ ಆತ್ಮ ವನ್ನೇ ಮರೆತು ಕೇವಲ ಶಬ್ದಜಾಲದಲ್ಲಿ ವಿಹರಿಸುವುದು ಕಲಾ ದಾರಿದ್ರ್ಯದ ಲಕ್ಷಣ. ಇಂಗ್ಲಿಷ್ ಪದಗಳ ಅತಿಯಾದ ಬಳಕೆ, ಸಿನಿಮಾ ಮಾದರಿಯ ಸಂಭಾಷಣೆಗಳು ಯಕ್ಷಗಾನದ ವಾಚಿಕ ವೈಭವ ವನ್ನು ಕುರೂಪಗೊಳಿಸುತ್ತಿವೆ.

ಯಾವುದೇ ಕಲೆ ಉಳಿಯುವುದು ಸಹೃದಯರಿಂದ. ಇಂದು ನಮಗೆ ಗ್ರಾಹಕರು ಸಿಗುತ್ತಿದ್ದಾರೆಯೇ ಹೊರತು ಸಹೃದಯರು ಸಿಗುತ್ತಿಲ್ಲ. ಕಲೆಯ ಸೂಕ್ಷ್ಮತೆಯನ್ನು ಆಸ್ವಾದಿಸುವ ತಾಳ್ಮೆ ಪ್ರೇಕ್ಷಕರಲ್ಲಿ ಕಡಿಮೆಯಾಗುತ್ತಿದೆ. ಇದಕ್ಕೆ ಕಲಾವಿದರಷ್ಟೇ ಸಂಘಟಕರು ಮತ್ತು ಪ್ರಾಯೋಜಕರೂ ಕಾರಣರು. ಕೇವಲ ಹಣದ ಬಲದಿಂದ ಕಲೆಯ ಸ್ವರೂಪವನ್ನು ಬದಲಿಸುವುದು ಅಪಾಯಕಾರಿ.

ಯಕ್ಷಗಾನದ ತೆಂಕು ಮತ್ತು ಬಡಗುತಿಟ್ಟುಗಳ ನಡುವಿನ ಸಂಘರ್ಷಗಳಾಗಲಿ ಅಥವಾ ಶೈಲಿಗಳ ಮಿಶ್ರಣವಾಗಲಿ, ಅವು ಕಲೆಯ ಶ್ರೀಮಂತಿಕೆಯನ್ನು ಹೆಚ್ಚಿಸಬೇಕೇ ಹೊರತು ಗೊಂದಲವನ್ನಲ್ಲ. ಪ್ರಾಯೋಜಕರು ಕೇವಲ ತಮ್ಮ ಬ್ರಾಂಡ್ ಪ್ರಚಾರಕ್ಕಾಗಿ ಕಲೆಯನ್ನು ಬಳಸಿಕೊಳ್ಳಬಾರದು. ಬದಲಾಗಿ, ಕಲೆಯ ಮೂಲ ಆಶಯವನ್ನು ಸಂರಕ್ಷಿಸುವ ಪೋಷಕರಾಗಬೇಕು.

ಮಾರುಕಟ್ಟೆಯ ಅನಿವಾರ್ಯತೆಯನ್ನು ಒಪ್ಪುತ್ತಲೇ, ಕಲೆಯ ಆತ್ಮವನ್ನು ಉಳಿಸಿಕೊಳ್ಳುವ ಮಧ್ಯಮ ಮಾರ್ಗವೊಂದನ್ನು ಕಂಡುಕೊಳ್ಳಬೇಕಾದ ಕಾಲವಿದು. ಶಾಸ ಮತ್ತು ಪ್ರಯೋಗಗಳ ನಡುವೆ ಸಮತೋಲನವಿzಗ ಮಾತ್ರ ಕಲೆಯು ಆನಂದ ಮತ್ತು ಬೋಧನೆ ಎಂಬ ಎರಡೂ ಉದ್ದೇಶ ಗಳನ್ನು ಸಫಲಗೊಳಿಸಲು ಸಾಧ್ಯ.

ಈ ಪರಿಸ್ಥಿತಿಯನ್ನು ಸುಧಾರಿಸಲು ಕೆಲವು ಕಟ್ಟುನಿಟ್ಟಿನ ಕ್ರಮಗಳು ಅನಿವಾರ್ಯ:

1. ಕಲಾಶಿಕ್ಷಣದ ಪುನಶ್ಚೇತನ: ಯಕ್ಷಗಾನದ ಛಂದಸ್ಸು, ರಾಗ ಮತ್ತು ಅರ್ಥಗಾರಿಕೆಯ ಬಗ್ಗೆ ಯುವ ಪೀಳಿಗೆಗೆ ಕೇವಲ ತಾಂತ್ರಿಕವಲ್ಲದ, ಶಾಸ್ತ್ರೀಯ ಮತ್ತು ಸಾಹಿತ್ಯಿಕ ಶಿಕ್ಷಣ ನೀಡಬೇಕು.

2. ಔಚಿತ್ಯ ಪ್ರಜ್ಞೆ: ಪ್ರದರ್ಶನಗಳಲ್ಲಿ ಕಾಲಮಿತಿಯ ಜತೆಗೆ ವಿಷಯದ ಗಾಂಭೀರ್ಯವನ್ನು ಕಾಪಾಡಿಕೊಳ್ಳುವ ಆತ್ಮ-ನಿಯಂತ್ರಣ ಕಲಾವಿದರಲ್ಲಿ ಮೂಡಬೇಕು.

3. ಗಂಭೀರ ವಿಮರ್ಶೆ: ಕೇವಲ ಹೊಗಳಿಕೆಯಲ್ಲದೆ, ಕಲೆಯ ದೋಷಗಳನ್ನು ಎತ್ತಿ ತೋರಿಸುವ ನಿಷ್ಠುರ ವಿಮರ್ಶಕರು ಮತ್ತು ಅಧ್ಯಯನಶೀಲ ಪ್ರೇಕ್ಷಕ ವರ್ಗ ಸೃಷ್ಟಿಯಾಗಬೇಕು.

4.ದಾಖಲೀಕರಣ: ಹಳೆಯ ತಲೆಮಾರಿನ ವಿದ್ವತ್ಪೂರ್ಣ ಅರ್ಥಗಾರಿಕೆಯನ್ನು ದಾಖಲಿಸಿ, ಅದನ್ನು ಇಂದಿನ ಕಲಾವಿದರಿಗೆ ಪಠ್ಯದಂತೆ ಪರಿಚಯಿಸಬೇಕು.

ಕಲೆ ಎಂಬುದು ಹರಿಯುವ ನದಿ; ಅದು ಕಾಲಕ್ಕೆ ತಕ್ಕಂತೆ ಬದಲಾಗುವುದು ಪ್ರಕೃತಿ ಸಹಜ. ಆದರೆ ನದಿಯ ಹರಿವು ಬದಲಾಗಬೇಕೇ ಹೊರತು ಅದರ ನೀರು ಮಲಿನವಾಗಬಾರದು. ಯಕ್ಷಗಾನ ಮತ್ತು ತಾಳಮದ್ದಳೆಗಳು ನಮ್ಮ ಸಾಂಸ್ಕೃತಿಕ ಗಂಗೋತ್ರಿಗಳು. ಮಾರುಕಟ್ಟೆಯ ಅಬ್ಬರದಲ್ಲಿ ಈ ಕನ್ನಡಿ ಮಸುಕಾಗದಂತೆ ನೋಡಿಕೊಳ್ಳುವುದು ಪ್ರಬುದ್ಧ ಸಮಾಜದ ಲಕ್ಷಣ. ತಾಳಮದ್ದಳೆಯ ಅರ್ಥಗಾರಿಕೆ ಯು ಕೇವಲ ತರ್ಕವಾಗದೆ ‘ತತ್ವ’ವಾಗಲಿ, ಯಕ್ಷಗಾನವು ಕೇವಲ ಚಲನಶೀಲ ಪ್ರದರ್ಶನವಾಗದೆ ಒಂದು ‘ದರ್ಶನ’ ವಾಗಲಿ.

ವಾಣಿಜ್ಯದ ಚೌಕಟ್ಟಿನಲ್ಲೂ ಕಲೆಯ ಸಾತ್ವಿಕತೆಯನ್ನು ಕಾಪಾಡಿಕೊಂಡಾಗ ಮಾತ್ರ ನಾವು ಮುಂದಿನ ಪೀಳಿಗೆಗೆ ಒಂದು ಜೀವಂತ ಪರಂಪರೆಯನ್ನು ಹಸ್ತಾಂತರಿಸಲು ಸಾಧ್ಯ. ಸತ್ಯ, ಶಿವ ಮತ್ತು ಸುಂದರ ಎಂಬ ಕಲಾಸೂತ್ರಗಳು ಮತ್ತೆ ಈ ವೇದಿಕೆಗಳಲ್ಲಿ ರಾರಾಜಿಸಲಿ ಎಂಬುವುದೇ ನಮ್ಮ ಆಶಯ.

(ಲೇಖಕರು ಎಂಜಿನಿಯರ್)