ಮಕ್ಕಳಿಗೆ ಬಾಲ್ಯದಿಂದಲೇ ಧಾರ್ಮಿಕ ಸಂಸ್ಕಾರ ಕಲಿಸಿ: ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ
Madhugiri News: ಮಧುಗಿರಿ ಪಟ್ಟಣದ ದೊಡ್ಡಪೇಟೆಯಲ್ಲಿರುವ ಐತಿಹಾಸಿಕ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಆಷಾಢ ಮಾಸದ ಕೊನೆಯ ಶುಕ್ರವಾರದ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಶ್ರೀಕ್ಷೇತ್ರ ಸಿದ್ಧರಬೆಟ್ಟದ ಶ್ರೀ ರಂಭಾಪುರಿ ಖಾಸಾ ಶಾಖಾ ಮಠದ ಮಠಾಧ್ಯಕ್ಷರಾದ ಷ॥ ಬ್ರಹ್ಮ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
-
ಮಧುಗಿರಿ, ಆ.08: ಪಟ್ಟಣದ ದೊಡ್ಡಪೇಟೆಯಲ್ಲಿರುವ (Madhugiri News) ಐತಿಹಾಸಿಕ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಆರ್ಯವೈಶ್ಯ ಮಂಡಳಿ ಹಾಗೂ ಅದರ ಸಮಸ್ತ ಅಂಗಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಆಷಾಢ ಮಾಸದ ಕೊನೆಯ ಶುಕ್ರವಾರದ ಪಾವನ ಸಂದರ್ಭದಲ್ಲಿ ಧಾರ್ಮಿಕ ಪೂಜಾ ಮಹೋತ್ಸವ, ಪ್ರಕಾರೋತ್ಸವ, ಜನಾಂಗೀಯ ನೂತನ ಧ್ವಜ ಬಿಡುಗಡೆ ಹಾಗೂ ಧರ್ಮ ಸಭೆಯನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಕ್ಷೇತ್ರ ಸಿದ್ಧರಬೆಟ್ಟದ ಶ್ರೀ ರಂಭಾಪುರಿ ಖಾಸಾ ಶಾಖಾ ಮಠದ ಮಠಾಧ್ಯಕ್ಷರಾದ ಷ॥ ಬ್ರಹ್ಮ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು, ಕರ್ನಾಟಕ ಆರ್ಯವೈಶ್ಯ ಜನಾಂಗದ ನೂತನವಾಗಿ ಲಾಂಛನಗೊಂಡಿರುವ ಧ್ವಜವನ್ನು ಬಿಡುಗಡೆಗೊಳಿಸಿ ಸಮಾಜಕ್ಕೆ ಶುಭ ಹಾರೈಸಿದರು.
ಆಷಾಢವು ಅಶುಭ ಮಾಸವಲ್ಲ; ಆಧ್ಯಾತ್ಮದ ಪವಿತ್ರ ಕಾಲ
ಸಭೆಯನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಕ್ಷೇತ್ರ ಸಿದ್ಧರಬೆಟ್ಟದ ಶ್ರೀ ರಂಭಾಪುರಿ ಖಾಸಾ ಶಾಖಾ ಮಠದ ಮಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ʼಜನಸಾಮಾನ್ಯರಲ್ಲಿ ಆಷಾಢ ಮಾಸವೆಂದರೆ ಕಾರ್ಯಕ್ರಮಗಳನ್ನು ಮಾಡಬಾರದು, ಇದು ಅಶುಭ ಎನ್ನುವ ತಪ್ಪು ಕಲ್ಪನೆ ವ್ಯಾಪಕವಾಗಿದೆ. ಆದರೆ ಸನಾತನ ಧರ್ಮದ ಹಿನ್ನೆಲೆಯಲ್ಲಿ ಆಷಾಢ ಮಾಸವು ಅಶುಭ ಅಲ್ಲ. ಲೌಕಿಕ ಸಂಸಾರಿಕ ಸಂಭ್ರಮಗಳು, ಮದುವೆ-ಮುಂಜಿಗಳ ಹಮ್ಮುಗೆಯಿಂದ ದೂರವಿದ್ದು, ಪ್ರತಿಯೊಬ್ಬ ಮನುಷ್ಯನೂ ದೇವತಾರಾಧನೆ, ಜಪ-ತಪ, ವ್ರತ ಮತ್ತು ಗುರು ಅನುಗ್ರಹವನ್ನು ಪಡೆಯಲು ಈ ಮಾಸ ಮೀಸಲಾಗಿದೆ. ಗುರುಪೂರ್ಣಿಮೆಯಿಂದ ಆರಂಭವಾಗುವ ಚಾತುರ್ಮಾಸವು ಪ್ರತಿಯೊಬ್ಬರ ಆಂತರಿಕ ಕಲ್ಮಶಗಳನ್ನು ತೊಳೆದು ಭಕ್ತಿ ಮಾರ್ಗದಲ್ಲಿ ನಡೆಸುವ ಪಾವನ ಕಾಲವಾಗಿದೆʼ ಎಂದು ಹೇಳಿದರು.
ಮನಸ್ಸೇ ಮನುಷ್ಯನ ಬಂಧನ ಮತ್ತು ಮೋಕ್ಷಕ್ಕೆ ಮೂಲ
ಪತಂಜಲಿ ಮಹರ್ಷಿಗಳ ಸೂತ್ರವನ್ನು ಉಲ್ಲೇಖಿಸಿದ ಶ್ರೀಗಳು, 'ಮನ ಏವ ಕಾರಣಂ ಬಂಧನ ಮೋಕ್ಷಯೋಃ' ಎನ್ನುವಂತೆ ಪ್ರತಿಯೊಬ್ಬರ ಸುಖ-ದುಃಖ, ಯಶಸ್ಸು-ಅಪಜಯಗಳಿಗೆ ಅವರವರ ಮನಸ್ಸೇ ಕಾರಣ. ಮಹಾಭಾರತದ ಪ್ರಸಂಗವನ್ನು ಸ್ಮರಿಸುತ್ತಾ, ಶ್ರೀಕೃಷ್ಣನು ಧರ್ಮರಾಯ ಮತ್ತು ದುರ್ಯೋಧನ ಇಬ್ಬರನ್ನೂ ರಾಜ್ಯಕ್ಕೆ ಕಳುಹಿಸಿ ಜನರನ್ನು ಪರೀಕ್ಷಿಸಲು ಹೇಳಿದಾಗ, ಧರ್ಮರಾಯನಿಗೆ ಜಗತ್ತಿನಲ್ಲಿ ಪ್ರತಿಯೊಬ್ಬರೂ ಒಳ್ಳೆಯವರಾಗಿಯೇ ಕಂಡರು. ಆದರೆ ದುರ್ಯೋಧನನಿಗೆ ಎಲ್ಲರಲ್ಲೂ ದೋಷ ಹಾಗೂ ಕೆಟ್ಟತನವೇ ಗೋಚರಿಸಿತು. ಇದಕ್ಕೆ ಕಾರಣ ಅವರಿಬ್ಬರ ದೃಷ್ಟಿಕೋನ ಮತ್ತು ಮನೋಭಾವ. ನಮ್ಮ ಮನಸ್ಸಿನಲ್ಲಿ ಸದ್ಭಾವನೆ, ಪ್ರೀತಿ ಇದ್ದಾಗ ಇಡೀ ಪ್ರಪಂಚವೇ ಸುಂದರವಾಗಿ ಕಾಣುತ್ತದೆʼ ಎಂದು ವಿವರಿಸಿದರು.
ಇಂದಿನ ಪೋಷಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಕ್ಕಳನ್ನು ದೊಡ್ಡ ಮಟ್ಟದಲ್ಲಿ ಓದಿಸುತ್ತಿದ್ದಾರೆ. ಆದರೆ ಬರಿ ಓದಿಗೆ ಮಹತ್ವ ನೀಡಿ, ಪ್ರೀತಿ-ಸಂಸ್ಕಾರದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಮನೆಗಳಲ್ಲಿ ಬೆಳಗಿನ ಜಾವ ಎದ್ದ ತಕ್ಷಣ ದೇವರ ಮನೆಗೆ ಹೋಗುವುದು, ದೇವಸ್ಥಾನಕ್ಕೆ ಬರುವುದು ಹಾಗೂ ಹುಟ್ಟುಹಬ್ಬದಂತಹ ದಿನಗಳಲ್ಲಿ ಕೇಕ್ ಕತ್ತರಿಸುವ ಮುನ್ನ ಜನ್ಮ ನೀಡಿದ ತಂದೆ-ತಾಯಿಯರ ಪಾದಕ್ಕೆ ನಮಸ್ಕರಿಸುವ ಸಂಸ್ಕಾರವನ್ನು ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಬೇಕು. ಅದೇ ಪೋಷಕರು ಮಕ್ಕಳಿಗೆ ಕೊಡುವ ಅತಿದೊಡ್ಡ ಕೊಡುಗೆ ಎಂದು ಶ್ರೀಗಳು ಕರೆ ನೀಡಿದರು.
ದೇವಸ್ಥಾನದಲ್ಲಿ ನೆರವೇರಿದ ಧಾರ್ಮಿಕ ವಿಧಿ-ವಿಧಾನಗಳು
ಅಭಿಷೇಕ ಹಾಗೂ ವಿಶೇಷ ಅಲಂಕಾರ: ಆಷಾಢ ಮಾಸದ ಕೊನೆಯ ಶುಕ್ರವಾರದ ಪಾವನ ದಿನದಂದು ಬೆಳಗಿನ ಜಾವದಿಂದಲೇ ಶ್ರೀ ಕನ್ಯಕಾ ಪರಮೇಶ್ವರಿ ಅಮ್ಮನವರಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ ಜರುಗಿತು. ದೇವಿಗೆ ನಾನಾ ಬಗೆಯ ಸುಗಂಧಿತ ಪುಷ್ಪಗಳಿಂದ ಅತ್ಯಂತ ವೈಭವಪೂರ್ಣವಾಗಿ ಅಲಂಕರಿಸಲಾಗಿತ್ತು.
ಪ್ರಾಕಾರೋತ್ಸವ ಹಾಗೂ ಮಂಗಳಾರತಿ: ದೇವಸ್ಥಾನದ ಆವರಣದಲ್ಲಿ ಧರ್ಮಶಾಸ್ತ್ರೋಕ್ತವಾಗಿ ಪ್ರಾಕಾರೋತ್ಸವ ನೆರವೇರಿತು. ಪ್ರಧಾನ ಅರ್ಚಕ ರಾಜಶೇಖರ ಶರ್ಮ ಅವರಿಂದ ಮಂತ್ರಘೋಷಗಳೊಂದಿಗೆ ಶ್ರೀ ಕನ್ಯಕಾ ಪರಮೇಶ್ವರಿ ಅಮ್ಮನವರ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸನ್ನಿಧಿಯಲ್ಲಿ ಮೆರವಣಿಗೆ ನಡೆಸಿ, ಮಹಾಮಂಗಳಾರತಿ ಬೆಳಗಿ ಭಕ್ತರಿಗೆ ತೀರ್ಥ-ಪ್ರಸಾದ ವಿನಿಯೋಗಿಸಲಾಯಿತು.
Astro Tips: ಶನಿವಾರ ಆಂಜನೇಯನ ಆರಾಧನೆ ವೇಳೆ ಈ ವಸ್ತುಗಳನ್ನು ಅರ್ಪಿಸಿದರೆ ಇಷ್ಟಾರ್ಥ ಸಿದ್ಧಿ ಗ್ಯಾರೆಂಟಿ!
ವೇದ ಪಾರಾಯಣ ಹಾಗೂ ಭಜನೆ: ಶ್ರೀ ವಾಸವಿ ಮಹಿಳಾ ಮಂಡಳಿಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಭಕ್ತಾದಿಗಳು ಏಕಕಂಠದಲ್ಲಿ ಲಲಿತಾ ಸಹಸ್ರನಾಮ, ಶ್ರೀಸೂಕ್ತ, ದುರ್ಗಾ ಸಪ್ತಶತಿ ಪಾರಾಯಣ, ಭಕ್ತಿಪೂರ್ವಕ ಸ್ತೋತ್ರಗಳು ಹಾಗೂ ಮಧುರ ಭಜನೆಗಳನ್ನು ನೆರವೇರಿಸಿದರು.