ಶ್ರೀ ರಾಘವೇಂದ್ರ ಸ್ವಾಮಿ ಮಂತ್ರಾಲಯ ಶಾಖಾ ಮಠ ನಿರ್ಮಾಣಕ್ಕೆ ಉಚಿತ ಜಾಗ ನೀಡಿದ ದಂಪತಿ
Tumkur News: ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿಗಳವರ ನೂತನ ಶಾಖಾ ಮಠವು ತುಮಕೂರು ನಗರದ ಗೆದ್ದಲಹಳ್ಳಿ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಈ ಪವಿತ್ರ ಕಾರ್ಯಕ್ಕೆ ರಾಮಸ್ವಾಮಿ ಹಾಗೂ ಶೀಲಾ ದಂಪತಿ ಸ್ವಂತ ಜಾಗವನ್ನು ಉಚಿತವಾಗಿ ನೀಡಿದ್ದಾರೆ.
ಮಂತ್ರಾಲಯ ಶಾಖಾ ಮಠ ನಿರ್ಮಾಣಕ್ಕೆ ಜಾಗ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು -
ತುಮಕೂರು, ಜು. 23: ಆಧ್ಯಾತ್ಮಿಕ ಹಾಗೂ ಧಾರ್ಮಿಕ ನಂಬಿಕೆಯ ಕೇಂದ್ರಬಿಂದುವಾಗಿ, ಕಲ್ಪವೃಕ್ಷವೆಂದೇ ಖ್ಯಾತರಾದ ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿಗಳವರ ನೂತನ ಶಾಖಾ ಮಠವು ನಗರದ (Tumkur News) ಗೆದ್ದಲಹಳ್ಳಿ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಈ ಪವಿತ್ರ ಕಾರ್ಯಕ್ಕೆ ರಾಮಸ್ವಾಮಿ ಹಾಗೂ ಶೀಲಾ ದಂಪತಿ ಸ್ವಂತ ಜಾಗವನ್ನು ಉಚಿತವಾಗಿ ನೀಡಿದ್ದಾರೆ.
ಮಂತ್ರಾಲಯದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ನಗರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಶಾಖಾ ಮಠವನ್ನು ಸ್ಥಾಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಧಾರ್ಮಿಕ ಮಹತ್ಕಾರ್ಯಕ್ಕೆ ಸೂಕ್ತ ಸ್ಥಳದ ಕೊರತೆಯಿದ್ದಾಗ, ರಾಮಸ್ವಾಮಿ ಮತ್ತು ಶೀಲಾ ತಮ್ಮ ಕುಟುಂಬದವರ ಒಪ್ಪಿಗೆಯೊಂದಿಗೆ ಗೆದ್ದಲಹಳ್ಳಿ ರಸ್ತೆಯಲ್ಲಿರುವ ಬೆಲೆಬಾಳುವ ನಿವೇಶನವನ್ನು ಮಠದ ನಿರ್ಮಾಣಕ್ಕಾಗಿ ದಾನವಾಗಿ ಬರೆದುಕೊಟ್ಟಿದ್ದಾರೆ.
ಭಕ್ತರಿಂದ ಪ್ರಶಂಸೆ ಹಾಗೂ ಹರ್ಷ
ಗುರುರಾಯರ ಸೇವೆಯು ನಿರ್ವಿಘ್ನವಾಗಿ ನೆರವೇರಲು ಜಾಗದ ರೂಪದಲ್ಲಿ ದೊಡ್ಡ ಕಾಣಿಕೆ ನೀಡಿರುವ ರಾಮಸ್ವಾಮಿ ಮತ್ತು ಶೀಲಾ ದಂಪತಿಯ ಈ ನಡೆ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಸ್ವಾರ್ಥದ ಈ ಕಾಲದಲ್ಲಿ ಧರ್ಮ ಕಾರ್ಯಕ್ಕಾಗಿ ತಮ್ಮ ಸ್ವಂತ ಆಸ್ತಿಯನ್ನು ದಾನ ಮಾಡುವುದು ಸಾಮಾನ್ಯ ಸಂಗತಿಯಲ್ಲ. ಇದು ದಂಪತಿಯ ಗುರುಭಕ್ತಿ ಹಾಗೂ ಸಮಾಜಮುಖಿ ಚಿಂತನೆಗೆ ಹಿಡಿದ ಕೈಗನ್ನಡಿ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.
ನವಜಾತ ಶಿಶುವಿಗೆ ಮರುಜೀವ; ತುಮಕೂರಿನ ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ವೈದ್ಯರ ಸಾಧನೆ
ಮಠದ ನಿರ್ಮಾಣದಿಂದ ಧಾರ್ಮಿಕ ಚಟುವಟಿಕೆಗಳಿಗೆ ಮತ್ತಷ್ಟು ಮೆರುಗು
ಗೆದ್ದಲಹಳ್ಳಿ ರಸ್ತೆಯಲ್ಲಿ ನೂತನವಾಗಿ ತಲೆಎತ್ತಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಂತ್ರಾಲಯ ಶಾಖಾ ಮಠದಲ್ಲಿ ಮುಂದಿನ ದಿನಗಳಲ್ಲಿ ರಾಯರ ಆರಾಧನಾ ಮಹೋತ್ಸವಗಳು, ಗುರುವಾರದ ವಿಶೇಷ ಪೂಜೆಗಳು, ಹವನ-ಹೋಮಗಳು ಮತ್ತು ಸಮಾಜೋಪಯುಕ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ. ಈ ಮಠವು ತುಮಕೂರು ಭಾಗದ ಮತ್ತೊಂದು ಪ್ರಮುಖ ಆಧ್ಯಾತ್ಮಿಕ ಧಾಮವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.