ತುಮಕೂರಿನಲ್ಲಿ ಭೀಕರ ಅಪಘಾತ; ಎರಡು ಕಾರುಗಳು ಡಿಕ್ಕಿಯಾಗಿ ಇಬ್ಬರು ಯುವತಿಯರ ದುರ್ಮರಣ!
Tumkur accident: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದುರ್ಘಟನೆ ಸಂಭವಿಸಿದೆ. ಬಿಜಾಪುರದಿಂದ ಡಿಸೈರ್ ಕಾರಿನಲ್ಲಿ ಮೂವರು ಯುವತಿಯರು ಬೆಂಗಳೂರಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿ, ಇಬ್ಬರು ಯುವತಿಯರು ಮೃತಪಟ್ಟು, ಐವರಿಗೆ ಗಾಯಗಳಾಗಿವೆ.
-
ತುಮಕೂರು: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಯುವತಿಯರು ಮೃತಪಟ್ಟಿರುವ ಘಟನೆ (Tumkur accident) ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆಯಲ್ಲಿ ನಡೆದಿದೆ. ಮೃತ ಯುವತಿಯರನ್ನು ನಿಸರ್ಗ (20) ಹಾಗೂ ರೂಪಾ (21) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಐದಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸೋಮವಾರ ಬೆಳಗ್ಗೆ ದುರ್ಘಟನೆ ಸಂಭವಿಸಿದೆ. ಬಿಜಾಪುರದಿಂದ ಡಿಸೈರ್ ಕಾರಿನಲ್ಲಿ ಮೂವರು ಯುವತಿಯರು ಹಾಗೂ ಚಾಲಕ ಸೇರಿ ನಾಲ್ವರು ಬೆಂಗಳೂರಿನತ್ತ ತೆರಳುತ್ತಿದ್ದರು. ಬಿ-ಫಾರ್ಮಾ ಮುಗಿಸಿದ್ದ ಯುವತಿಯರು ಜಾಬ್ ಇಂಟರ್ವ್ಯೂಗೆಂದು ಬೆಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಚಾಲಕ ಪವನ್ ನಿಯಂತ್ರಣ ತಪ್ಪಿ, ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಹಾರಿ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಟಾಟಾ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಸ್ಥಳದಲ್ಲೇ ನಿಸರ್ಗ ಹಾಗೂ ರೂಪಾ ಮೃತಪಟ್ಟಿದ್ದಾರೆ. ಅವರ ಜತೆಗಿದ್ದ ಮತ್ತೊಬ್ಬ ಯುವತಿ ಹಾಗೂ ಚಾಲಕ ಪವನ್ಗೆ ಗಂಭೀರ ಗಾಯಗಳಾಗಿವೆ. ಜೊತೆಗೆ ಟಾಟಾ ಕಾರಿನಲ್ಲಿದ್ದ ನಾಲ್ವರಿಗೂ ಗಾಯಗಳಾಗಿವೆ. ಎಲ್ಲಾ ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಶಿರಾ ಡಿವೈಎಸ್ಪಿ, ಶಿರಾ ಗ್ರಾಮಾಂತರ ಸಿಪಿಐ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ಯಾಸ್ ರೀಫಿಲ್ಲಿಂಗ್ ಸೆಂಟರ್ ಅಗ್ನಿ ಅವಘಡ; ಎರಡು ದಿನಗಳ ಬಳಿಕ ದಂಪತಿ ಮೃತದೇಹ ಪತ್ತೆ
ಬೆಂಗಳೂರು: ನಗರದ ಗಂಗಮ್ಮನಗುಡಿಯ ಕಮ್ಮಗೊಂಡನಹಳ್ಳಿಯಲ್ಲಿ ಗ್ಯಾಸ್ ರಿಫಿಲ್ಲಿಂಗ್ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಎರಡು ದಿನಗಳ ಬಳಿಕ ಘಟನೆಯಲ್ಲಿ ದಂಪತಿ ದಾರುಣವಾಗಿ ಉಸಿರುಗಟ್ಟಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮೃತರನ್ನು ನಾಗರತ್ನ ಮತ್ತು ಆಕಾಶ್ ಎಂದು ಗುರುತಿಸಲಾಗಿದೆ. ಕಳೆದ ಶನಿವಾರ ರಾತ್ರಿ ಗ್ಯಾಸ್ ರಿಫಿಲ್ಲಿಂಗ್ ಅಂಗಡಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು, 20ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ಗಳು ಸರಣಿ ಸ್ಪೋಟಗೊಂಡಿದ್ದವು. ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದರು.
ಮೊದಲಿಗೆ ಯಾವುದೇ ಅನಾಹುತ ಆಗಿಲ್ಲವೆಂದು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದರು. ಆದರೆ, ಇವತ್ತು ಬೆಂಕಿಯ ಅವಶೇಷ ತೆಗೆಯಲು ಬಂದಾಗ ಬೆಂಕಿ ಹೊತ್ತಿಕೊಂಡಿದ್ದ ಮೊದಲ ಮಹಡಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿವೆ. ದಂಪತಿಗಳಾದ ನಾಗರತ್ನ ಮತ್ತು ಆಕಾಶ್, ಬೆಂಕಿ ಹೊತ್ತಿಕೊಳ್ತಿದ್ದಂತೆ ಮೊದಲ ಮಹಡಿಗೆ ಹೋಗಿದ್ದಾರೆ. ಆದರೆ, ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಗಂಗಮ್ಮನಗುಡಿ ಪೊಲೀಸರು ಹಾಗೂ ಫೋರೆನ್ಸಿಕ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.