ಪರಮೇಶ್ವರ್ ಭೇಟಿಯಾದ ವೆಂಕಟೇಶ್ ಪ್ರಸಾದ್; ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯ ಹಜಾರೆ ಟ್ರೋಫಿ ಪಂದ್ಯಗಳಿಗೆ ಅನುಮತಿ ನೀಡಲು ಮನವಿ
ಡಿ.24 ಮತ್ತು 26ರಂದು ಬೆಂಗಳೂರಿನಲ್ಲಿ ನಿಗದಿಯಾಗಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಗಳಲ್ಲಿ ದೆಹಲಿ ತಂಡದ ಪರವಾಗಿ ವಿರಾಟ್ ಕೊಹ್ಲಿ ಕಣಕ್ಕಿಳಿಯುವ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಗಳಿಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮನವಿ ಮಾಡಿದ್ದಾರೆ.
ತುಮಕೂರು: ಡಿ.24 ರಿಂದ ಆರಂಭವಾಗುವ ವಿಜಯ್ ಹಜಾರೆ ಟ್ರೋಫಿ ಭಾಗವಾಗಿ ಬೆಂಗಳೂರಿನಲ್ಲೂ ಕ್ರಿಕೆಟ್ ಪಂದ್ಯಗಳು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮ್ಯಾಚ್ ನಡೆಸಲು ಅನುಮತಿ ನೀಡಬೇಕು ಎಂದು ಗೃಹ ಸಚಿವ ಡಾ. ಪರಮೇಶ್ವರ್ ಅವರಿಗೆ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮನವಿ ಮಾಡಿದರು.
ಡಿ.24 ಮತ್ತು 26ರಂದು ಬೆಂಗಳೂರಿನಲ್ಲಿ ನಿಗದಿಯಾಗಿರುವ ಪಂದ್ಯಗಳಲ್ಲಿ ದೆಹಲಿ ತಂಡದ ಪರವಾಗಿ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಣಕ್ಕಿಳಿಯುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಗಳಿಗೆ ಅನುಮತಿ ನೀಡುವಂತೆ ಕೋರಲು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದಲ್ಲಿ ಕೆಎಸ್‌ಸಿಎ ವ್ಯವಸ್ಥಾಪಕ ಸಮಿತಿ ಸದಸ್ಯ ಹಾಗೂ ತುಮಕೂರು ವಲಯ ಸಂಚಾಲಕ ಸಿ.ಆರ್.ಹರೀಶ್, ಕೆಎಸ್‌ಸಿಎ ವಕ್ತಾರರಾದ ವಿನಯ ಮೃತ್ಯುಂಜಯ ಹಾಗೂ ಇನ್ನಿತರರು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ರಾಷ್ಟ್ರೀಯ ತಂಡದಲ್ಲಿರುವ ಕ್ರಿಕೆಟ್ ಆಟಗಾರರು ವರ್ಷಕ್ಕೆ ಕನಿಷ್ಠ ಎರಡು ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸುವುದು ಕಡ್ಡಾಯ ಎಂಬ ಬಿಸಿಸಿಐ ನಿಯಮದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ ಹಜಾರೆ ಟ್ರೋಫಿಯ ಎರಡು ಪಂದ್ಯಗಳಲ್ಲಿ ದೆಹಲಿ ಪರವಾಗಿ ವಿರಾಟ್ ಕೊಹ್ಲಿ ಕಣಕ್ಕೆ ಇಳಿಯಲಿದ್ದಾರೆ. ಕ್ರೀಡಾಕೂಟಕ್ಕೆ ಅಗತ್ಯ ಭದ್ರತೆಯ ಜತೆಗೆ ಪಂದ್ಯಾವಳಿಗಳ ಯಶಸ್ವಿಗೆ ಸಹಕರಿಸುವಂತೆ ಗೃಹ ಸಚಿವ ಹಾಗೂ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿದರು.
ಈ ವೇಳೆ ಗೃಹ ಸಚಿವ ಪರಮೇಶ್ವರ್, ಕೆ.ಎಸ್.ಸಿ.ಎ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಾದ ವೆಂಕಟೇಶ್ ಪ್ರಸಾದ್, ಸಿ.ಆರ್.ಹರೀಶ್ ಇನ್ನಿತರರನ್ನು ಆತ್ಮೀಯವಾಗಿ ಅಭಿನಂದಿಸಿ, ತಮ್ಮ ಆಡಳಿತದ ಅವಧಿಯಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆಯನ್ನು ಯಶಸ್ಸಿನತ್ತ ಮುನ್ನೆಡೆಸುವಂತೆ ಸಲಹೆ ನೀಡಿದರು.
ವಿಜಯ ಹಜಾರೆ ಟ್ರೋಫಿಗೆ ಅನುಮತಿ ನೀಡುವ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಕೆ.ಎಸ್.ಸಿ.ಎ ತಂಡಕ್ಕೆ ಗೃಹ ಸಚಿವರು ನೀಡಿದರು.